More

    ಸಿಆರ್‌ಜಡ್ ಹೊಸ ನಕ್ಷೆ ಶೀಘ್ರ ನಿರೀಕ್ಷೆ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್) ಅಧಿಸೂಚನೆ-2019ರ ಅನುಷ್ಠಾನಕ್ಕೆ ಅತ್ಯಗತ್ಯವಾಗಿ ಬೇಕಾದ ಹೊಸ ನಕ್ಷೆ ಅನುಮೋದನೆಯ ಸಮೀಪಕ್ಕೆ ಬಂದಿದೆ. ಅದರ ಅಂತಿಮ ಹಂತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 31ರಂದು ಸಾರ್ವಜನಿಕರ ಅಹವಾಲು ಸಭೆ ಕರೆಯಲಾಗಿದೆ.

    ಈ ಸಭೆಯಲ್ಲಿ ಸಾರ್ವಜನಿಕರು ಯಾವುದಾದರೂ ಬದಲಾವಣೆಯ ಸಲಹೆ, ಆಕ್ಷೇಪಗಳಿದ್ದರೆ ತಿಳಿಸಬಹುದು. ಆದರೆ ದೊಡ್ಡ ಬದಲಾವಣೆಗಳು ಇನ್ನು ಕಷ್ಟ. ಸಣ್ಣ ಪುಟ್ಟ ಕಾರ್ಯಸಾಧ್ಯವಾದ ಬದಲಾವಣೆಗಳಿದ್ದರೆ ಈ ಜಿಲ್ಲಾ ಮಟ್ಟದ ಸಮಿತಿ ಶಿಫಾರಸು ಮಾಡಿದರೆ ಆಗಬಹುದು.

    ಎರಡು ವರ್ಷ ಹಿಂದೆಯೇ ಸಿಆರ್‌ಜಡ್ ಅಧಿಸೂಚನೆ ಬಂದಿದ್ದರೂ ಇದುವರೆಗೆ ನಕ್ಷೆ ಇಲ್ಲದ ಕಾರಣ 2011ರ ಅಧಿಸೂಚನೆಯೇ ಚಾಲ್ತಿಯಲ್ಲಿದೆ. ಚೆನ್ನೈನ ಸುಸ್ಥಿರ ಕರಾವಳಿ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ(ಎನ್‌ಸಿಎಸ್‌ಸಿಎಂ) ಸಿಆರ್‌ಜಡ್ ಯೋಜನೆ ಹಾಗೂ ನಕ್ಷೆ ತಯಾರಿಸಿದೆ.

    ಅಹವಾಲು ಅವಕಾಶ ವಿಸ್ತರಣೆ: ಈಗಾಗಲೇ ಸಿಆರ್‌ಜಡ್ ನಕ್ಷೆಯನ್ನು ಜಿಲ್ಲಾಧಿಕಾರಿ ಕಚೇರಿ, ಜಿ.ಪಂ ಕಚೇರಿ, ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಗೆ ಬರುವ ತಾ.ಪಂ, ಮಂಗಳೂರು ಮಹಾನಗರಪಾಲಿಕೆ, ಉಳ್ಳಾಲ ನಗರಸಭೆ, ಮೂಲ್ಕಿ ನಗರ ಪಂಚಾಯಿತಿ, ಗ್ರಾ.ಪಂ ಕಚೇರಿಗಳಲ್ಲಿ, ಉರ್ವ ಸ್ಟೋರಿನಲ್ಲಿರುವ ಪರಿಸರ ಪ್ರಾದೇಶಿಕ ನಿರ್ದೇಶಕರ ಕಚೇರಿಗಳಲ್ಲಿ ಇರಿಸಲಾಗಿದ್ದು, ಸಾರ್ವಜನಿಕರಿಂದ ಅಹವಾಲು ಪಡೆಯಲು ಸೂಚಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಸ್ಪಂದನೆ ಅಷ್ಟು ಬಂದಿಲ್ಲ. ಮೇ 15ರಿಂದ 2 ತಿಂಗಳ ಕಾಲ ನೀಡಲಾಗಿದ್ದ ಅವಧಿಯನ್ನು ಕೆಲವು ದಿನಗಳ ಕಾಲ ವಿಸ್ತರಿಸುವ ಸಾಧ್ಯತೆಗಳಿವೆ. ಅಧಿಕೃತ ಆದೇಶ ಬೆಂಗಳೂರಿನಿಂದ ಬರಬೇಕಷ್ಟೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಾರ್ವಜನಿಕರು ನಕ್ಷೆಯನ್ನು ವೀಕ್ಷಿಸುವುದಾದರೆ http://ksczma.karnataka.gov.inನಲ್ಲಿ ಪರಿಶೀಲಿಸಬಹುದು.
    ಇದರ ಮುಂದಿನ ಹಂತವಾಗಿ ಅಹವಾಲು ಸಲ್ಲಿಕೆಯ ಸಭೆ ಜುಲೈ 31ರಂದು ಬೆಳಗ್ಗೆ 11 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಅದರಲ್ಲಿ ನಾಗರಿಕರು, ಸ್ಥಳೀಯಾಡಳಿತ ಸಂಸ್ಥೆಯವರು ಪಾಲ್ಗೊಂಡು ಅಹವಾಲು, ದೂರು, ಸಲಹೆ ನೀಡಲು ಅವಕಾಶವಿದೆ.

    ಪ್ರವಾಸೋದ್ಯಮಕ್ಕೆ ಅವಕಾಶ: ಪ್ರಸಕ್ತ ಕಡಲತೀರದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಹೊಸ ಅಧಿಸೂಚನೆ ಅನ್ವಯ ಆಯ್ದ ಕಡಲ ತೀರಗಳಲ್ಲಿ ಪ್ರವಾಸೋದ್ಯಮ ಪೂರಕವಾಗಿ ಕೆಲವೊಂದು ತಾತ್ಕಾಲಿಕ ರಚನೆಗಳು, ಫುಡ್ ಸ್ಟಾಲ್ ಇತ್ಯಾದಿಗೆ ಅನುಮತಿ ಸಿಗಲಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಲಹೆ ಮಾಡಿರುವ ಸೋಮೇಶ್ವರ, ಪಣಂಬೂರು, ಇಡ್ಯಾ, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು, ಬೆಂಗ್ರೆ ಸಹಿತ ಜಿಲ್ಲೆಯ 10 ಬೀಚ್‌ಗಳನ್ನು ನೋಟಿಫೈ ಮಾಡಲಾಗಿದೆ.
    ಮೀನುಗಾರರು ಮನೆ ನಿರ್ಮಿಸುವುದಾದರೆ ಅನುಮತಿ ನೀಡಲು ಸಾಧ್ಯವಿದೆ. ಸದ್ಯ 100 ಮೀಟರ್ ದೂರದವರೆಗೆ ಸಿಆರ್‌ಜಡ್ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ 50 ಮೀ.ವರೆಗೆ ಮಾತ್ರ ನಿರ್ಬಂಧವಿರಲಿದೆ.

    1991ರ ಸಿಆರ್‌ಜಡ್ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣಾ ವಲಯ (ಸಿಎಂಜಡ್) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಗೆ ವಿರೋಧವಿದ್ದ ಕಾರಣ ಅದನ್ನು ಹಿಂಪಡೆದು 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತರಲಾಯಿತು. ಇದರ ಆಧಾರದ ಮೇಲೆ 2018ರ ಜುಲೈಯಲ್ಲಿ ಹೊಸ ಯೋಜನೆ ರೂಪಿಸಲಾಯಿತು. 2019ರ ಡಿಸೆಂಬರ್‌ನಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿತು.

    ಕೆಲವು ಗ್ರಾಮಗಳಿಗೆ ರಿಲ್ಯಾಕ್ಸ್: ಹರೇಕಳದಲ್ಲಿ ಹೊಸ ಡ್ಯಾಂ ತಲೆ ಎತ್ತುವುದರಿಂದ ಅದರ ಮೇಲ್ಭಾಗದಲ್ಲಿ ಲವಣಾಂಶ ಗಮನಾರ್ಹವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಕೆಲವೊಂದು ಗ್ರಾಮಗಳು ನದಿ ಪಕ್ಕದಲ್ಲಿದ್ದು, ಲವಣಾಂಶ ಪ್ರಮಾಣ 5 ಪಿಪಿಟಿಗಿಂತ ಕಡಿಮೆ ಇದ್ದರೆ ಅವರಿಗೆ ಸಿಆರ್‌ಜಡ್‌ನಿಂದಲೇ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಇದರಿಂದ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts