More

    ಲಕ್ಷ್ಮಣರೇಖೆ ದಾಟಿದ್ರೆ ಸುಮ್ಮನಿರಲ್ಲ: ಆಯನೂರು ಮಂಜುನಾಥ್

    ಶಿವಮೊಗ್ಗ: ಯಾರಿಗೋ ಬೌಲಿಂಗ್ ಮಾಡಿದರೆ ಮತ್ತ್ಯಾರೋ ಬಂದು ಬ್ಯಾಟಿಂಗ್ ಮಾಡಿದ್ದಾರೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟಾಂಗ್ ನೀಡಿದರು.

    ಸಂಸದರಿಗಿಂತ ಅವರ ತಂದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರಿಂದ ರಾಜಕೀಯ ಪಾಠ ಕಲಿತಿದ್ದೇನೆ. ಹಾಗಾಗಿ ಅವರ ವಿಚಾರದಲ್ಲಿ ನಾನು ಲಕ್ಷ್ಮಣರೇಖೆ ದಾಟುವುದಿಲ್ಲ. ಆದರೆ ಸಂಸದರೇ ಲಕ್ಷ್ಮಣರೇಖೆ ದಾಟಿದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
    ಸಂಸದರು ತಮ್ಮ ಪೆಸಿಟ್ ಕಾಲೇಜು ಸಮೀಪ ರಿಂಗ್ ರಸ್ತೆಯ ಫ್ಲೈಓವರ್ ಕೆಳಗೆ ಆಯನೂರು ಮಂಜುನಾಥ್ ಅವರ ಆಸ್ತಿ ಇದೆ ಎಂದಿದ್ದಾರೆ. ನಾಲ್ಕು ಬಾರಿ ಹೋಗಿ ಬಂದಿರುವುದಾಗಿಯೂ ಹೇಳಿದ್ದಾರೆ. ಅವರ ಹೇಳಿಕೆ ಆಧಾರದ ಮೇರೆಗೆ ನನ್ನ ಆಸ್ತಿಯನ್ನು ಹುಡುಕುತ್ತೇನೆ. ಒಂದು ವೇಳೆ ಸಿಗದೇ ಇದ್ದರೆ ಅವರನ್ನೇ ಕರೆದುಕೊಂಡು ಹೋಗುತ್ತೇನೆ. ತನ್ನ ಹುದ್ದೆ ಉಳಿಸಿಕೊಳ್ಳಲು ಆಯನೂರು ಮಂಜುನಾಥ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಸಂಸದರು ಹೇಳಿದ್ದಾರೆ. ಆದರೆ ಅವರೂ ತಮ್ಮ ಹುದ್ದೆ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ ಎಂಬುದು ನಮಗೆ ಅರಿವಿದೆ ಎಂದು ವ್ಯಂಗ್ಯವಾಡಿದರು.
    ಸಂಸದರು ಹಲವಾರು ವಿಷಯಗಳನ್ನು ಎತ್ತಿದ್ದಾರೆ. ನಾನು ಸಂಸದರು ಅಭಿವೃದ್ಧಿ ಮಾಡಿಲ್ಲವೆಂದು ಹೇಳಿಲ್ಲ. ಸಂಸದ ಡಿ.ಕೆ.ಸುರೇಶ್ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದಿದ್ದಾರೋ ಹಾಗೆ ಜಿಲ್ಲೆಗೂ ಅನ್ಯಾಯವಾಗಿದೆ ಎಂದಿರುವೆ. ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶ ಮಾಡಿ ಅಡಕೆ ಸಂಶೋಧನಾ ಕೇಂದ್ರ ತೆರೆಯುವುದಾಗಿ ಅಮಿತ್ ಷಾ ಹೇಳಿದ್ದರು. ಆದರೆ ಅವರು ಹೇಳಿ 5 ವರ್ಷ ಕಳೆದಿದೆ. ಆದರೆ ಇನ್ನೂ ಸಂಶೋಧನಾ ಕೇಂದ್ರವಾಗಿಲ್ಲ ಎಂದು ಆರೋಪಿಸಿದರು.
    ಸವಳಂಗ ರಸ್ತೆಯಲ್ಲಿ ನಮ್ಮಪ್ಪಂದು ಯಾವ ಆಸ್ತಿ ಇಲ್ಲ ಎಂದಿದ್ದಾರೆ. ಅಂದರೆ ಆ ಮಾರ್ಗದಲ್ಲಿ ಬಿಟ್ಟು ಅಷ್ಟ ದಿಕ್ಕುಗಳಲ್ಲಿ ಆಸ್ತಿ ಇದೆ ಎಂದು ಅರ್ಥವಾಗಿದೆ. ಶರಾವತಿ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಆದರೆ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಅಭಿವೃದ್ಧಿ ಆಗಿದೆ ಅಥವಾ ಇಲ್ಲವಾ ಎಂಬ ವಿಷಯ ಅವರಿಗೆ ಗೊತ್ತಿದೆ. ನಾವು ಅಭಿವೃದ್ಧಿ ಆಗಿಲ್ಲವೆಂದು ಹೇಳೋದು ಸಹಜ. ಅವರು ಅಭಿವೃದ್ಧಿ ಆಗಿದೆ ಎಂದು ಹೇಳೋದು ಸಹಜ. ಆದರೆ ಸಂಸದರ ಹೇಳಿಕೆ ಚುನಾವಣೆಯ ಹೇಳಿಕೆಗೆ ಸೀಮಿತವಾಗಿದೆ ಎಂದು ಹೇಳಿದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಶಿ.ಜು.ಪಾಶ. ಜಿ.ಪದ್ಮನಾಭ, ಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts