More

    ಸುಗಮ ಸಂಚಾರಕ್ಕೆ ಕ್ರಾಸಿಂಗ್ ಅಡ್ಡಿ, ಮಾರ್ಗ ಮಧ್ಯೆ ತಾಸುಗಟ್ಟಲೆ ನಿಲ್ಲುವ ಮಂಗಳೂರು-ಬೆಂಗಳೂರು ರೈಲು

    – ಪ್ರಕಾಶ್ ಮಂಜೇಶ್ವರ, ಮಂಗಳೂರು

    ಲಾಕ್‌ಡೌನ್ ತೆರವು ಬಳಿಕ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹಂತಹಂತವಾಗಿ ಪರಿಸ್ಥಿತಿ ನಿರಾಳವಾಗುತ್ತಿದೆ. ಆದರೆ ಮಂಗಳೂರು- ಬೆಂಗಳೂರು ರೈಲು ಪ್ರಯಾಣಿಕರಿಗೆ ಈ ಭಾಗ್ಯವಿಲ್ಲ. ಕಾರಣ, ಅನ್‌ಲಾಕ್ ಬಳಿಕ ಮಂಗಳೂರು ನಗರದಿಂದ ರಾಜಧಾನಿ ಸಂಪರ್ಕಿಸುವ ರೈಲುಗಳು ಮಾರ್ಗ ಮಧ್ಯೆ ಕ್ರಾಸಿಂಗ್‌ಗಾಗಿ ಒಂದು ಕಡೆ ಘಾಟ್ ಪ್ರದೇಶದಲ್ಲಿ ಸುಮಾರು 1.10 ಗಂಟೆ ನಿಲುಗಡೆಯಾಗುತ್ತಿವೆ.

    ಮಂಗಳೂರು-ಬೆಂಗಳೂರು ರೈಲು ಹೋಗುವಾಗ ಹಾಗೂ ಬರುವಾಗ ಕ್ರಾಸಿಂಗ್ ಸಂದರ್ಭ ಕಾರವಾರ ರೈಲಿನ ಸುಗಮ ಸಂಚಾರಕ್ಕಾಗಿ ದೀರ್ಘ ಸಮಯ ಕಾಯುವ ಪರಿಸ್ಥಿತಿಯಿಂದಾಗಿ ಮಂಗಳೂರು ಭಾಗದ ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟಗಾರರಿಗೆ ಅಸಮಾಧಾನ ಉಂಟಾಗಿದೆ. ಈ ವಿದ್ಯಮಾನ ತಮ್ಮ ರೈಲ್ವೆ ಹಕ್ಕುಗಳಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದ ರೈಲ್ವೆ ಹೋರಾಟಗಾರರನ್ನು ಮಂಗಳೂರು ಮತ್ತು ಕುಂದಾಪುರ ಭಾಗದವರು ಎಂದು ಪ್ರತ್ಯೇಕಿಸಿದೆ. ಹಳೇ ವೇಳಾಪಟ್ಟಿಯನ್ನೇ ಮುಂದುವರಿಸುವ ಕುರಿತು ಪರಿಶೀಲಿಸಬೇಕೆಂದು ಸಂಸದ ನಳಿನ್ ಕುಮಾರ್ ನೈಋತ್ಯ ರೈಲ್ವೆ ಮಹಾಪ್ರಬಂಧಕರಿಗೆ ಪತ್ರ ಬರೆದಿದ್ದಾರೆ.

    1 ಗಂಟೆ ನಿಲುಗಡೆಗೆ ಬಸವಳಿವ ಪ್ರಯಾಣಿಕರು: ಲಾಕ್‌ಡೌನ್ ಬಳಿಕ ವಾರದಲ್ಲಿ 3 ದಿನ ಸಂಚರಿಸುವ ಮಂಗಳೂರು-ಮೈಸೂರು- ಬೆಂಗಳೂರು ಸ್ಪೆಷಲ್ (ನಂ.16517)ರೈಲು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.10ಕ್ಕೆ ಹೊರಟು ಮರುದಿನ ಬೆಳಗ್ಗೆ 8.45ಕ್ಕೆ ಬೆಂಗಳೂರು ತಲುಪುತ್ತಿದೆ. ಈ ರೈಲು ಬೆಂಗಳೂರು- ಕಾರವಾರ ರೈಲಿಗೆ ಕ್ರಾಸಿಂಗ್ ನೀಡುವ ಸಲುವಾಗಿ ಘಾಟಿ ಪ್ರದೇಶ ಯಡಕುಮೇರಿ ನಿಲ್ದಾಣದಲ್ಲಿ ಪ್ರತೀ ಪ್ರಯಾಣದಲ್ಲಿ 1 ಗಂಟೆ 10 ನಿಮಿಷ ನಿಲ್ಲುತ್ತದೆ. ಪರಿಣಾಮ, ಮಂಗಳೂರು ಮಾರ್ಗದ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಾರೆ. ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ಬೆಂಗಳೂರು-ಶ್ರವಣಬೆಳಗೊಳ-ಮಂಗಳೂರು ರೈಲು (16511) ಇಲಾಖೆಯ ಪರಿಷ್ಕೃತ ಪ್ರಸ್ತಾವನೆಯಂತೆ ಬೆಂಗಳೂರಿನಿಂದ ರಾತ್ರಿ 8.30 ಕ್ಕೆ ಪ್ರಯಾಣ ಆರಂಭಿಸಿ ವಾರದಲ್ಲಿ ಏಳು ದಿನ ಶ್ರವಣಬೆಳಗೊಳ ಮಾರ್ಗದಲ್ಲೇ ಸಂಚರಿಸಲಿದೆ. ಮರುದಿನ ಬೆಳಗ್ಗೆ 7.40ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಕಾರವಾರ-ಬೆಂಗಳೂರು ರೈಲಿಗೆ ಕ್ರಾಸಿಂಗ್ ನೀಡುವ ಸಲುವಾಗಿ ಈ ರೈಲು ಕಡಗರವಳ್ಳಿಯಲ್ಲಿ 1.10 ಗಂಟೆ ನಿಲ್ಲಲಿದೆ.

    ಶಿರಿಬಾಗಿಲಿನಲ್ಲೇ ಇರಲಿ ಕ್ರಾಸಿಂಗ್: ಮಂಗಳೂರು ಭಾಗದ ಪ್ರಯಾಣಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಹಳೇ ಪದ್ಧತಿಯಂತೆ ಶಿರಿಬಾಗಿಲಿನಲ್ಲೇ ಕ್ರಾಸಿಂಗ್ ಒದಗಿಸಬೇಕು. ಒಂದು ಪ್ರಯಾಣದಲ್ಲಿ ಕ್ರಾಸಿಂಗ್ ಉದ್ದೇಶಕ್ಕೆ ಮಂಗಳೂರು ರೈಲು 1.10 ಗಂಟೆ ತಡೆಹಿಡಿಯಲ್ಪಟ್ಟರೆ, ಇನ್ನೊಂದು ಪ್ರಯಾಣದಲ್ಲಿ ಈ ತಡೆಹಿಡಿಯುವಿಕೆಯನ್ನು ಕಾರವಾರ ರೈಲಿಗೆ ಹಂಚಬೇಕು ಎನ್ನುವುದು ಮಂಗಳೂರು ಭಾಗದ ಹೋರಾಟಗಾರರ ವಾದ. ಆದರೆ ಈ ಅಭಿಪ್ರಾಯಕ್ಕೆ ಕೂಡ ಆಕ್ಷೇಪ ಇದೆ.

    ಇಲಾಖೆ ಸಮಸ್ಯೆ ಏನು?: ಯಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳಲ್ಲಿ ರೈಲುಗಳಿಗೆ ಸಾಮಾನ್ಯ ಕ್ರಾಸಿಂಗ್ ನಡೆಸಲು ಅವಕಾಶ ಇಲ್ಲ. ಇದುವೇ ಮುಖ್ಯ ಸಮಸ್ಯೆ. ಕಾರವಾರ-ಬೆಂಗಳೂರು ರೈಲು ಆರಂಭವಾಗುವ ಮೊದಲು ಪ್ರಸ್ತಾವಿತ ಉಭಯ ನಿಲ್ದಾಣಗಳಲ್ಲಿ ಸಾಮಾನ್ಯ ಕ್ರಾಸಿಂಗ್ ನಡೆಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಸುರಕ್ಷತಾ ಆಯೋಗ ಅನುಮತಿ ಒದಗಿಸಿರಲಿಲ್ಲ. ಇತ್ತೀಚೆಗೆ ಯಡಕುಮೇರಿಯಲ್ಲಿ ಇಲೆಕ್ಟ್ರಾನಿಕ್ ಸಿಗ್ನಲ್ ವ್ಯವಸ್ಥೆ ಆರಂಭವಾದ ಬಳಿಕವೂ ಸಾಮಾನ್ಯ ಕ್ರಾಸಿಂಗ್ ಅನುಮತಿ ದೊರೆಯಲಿಲ್ಲ.

    ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದ ಬೆಂಗಳೂರು-ಮಂಗಳೂರು ರಾತ್ರಿ ರೈಲು ಹಳೇ ವೇಳಾಪಟ್ಟಿಯಲ್ಲೇ ಸಂಚರಿಸಬೇಕು. ರೈಲ್ವೆ ಸೌಲಭ್ಯಗಳ ವಿಚಾರದಲ್ಲಿ ಮಂಗಳೂರು, ಕಾರವಾರ ಕಡೆಯವರನ್ನು ಸಮಾನವಾಗಿ ಪರಿಗಣಿಸಬೇಕು. ಯಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳಲ್ಲಿ ಸಾಮಾನ್ಯ ಕ್ರಾಸಿಂಗ್ ಸಾಧ್ಯವಾಗುವಂತೆ ಕ್ಯಾಚ್ ಸ್ಲೈಡಿಂಗ್ ವ್ಯವಸ್ಥೆ ಅಳವಡಿಸಬೇಕು.
    – ಹನುಮಂತ ಕಾಮತ್, ಸದಸ್ಯರು, ಪಾಲಕ್ಕಾಡ್ ವಿಭಾಗ ರೈಲ್ವೆ ಬಳಕೆದಾರರ ಸಲಹಾ ಸಮಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts