More

    ಬೆಳೆ ನಷ್ಟ, ರೈತಗೆ ಮತ್ತೆ ಸಂಕಷ್ಟ

    ಮುರಗೋಡ: ದೇಶದ ಬೆನ್ನೆಲುಬು ಎಂದು ಗುರುತಿಸಿಕೊಳ್ಳುವ ರೈತ ವರ್ಗಕ್ಕೆ ಪ್ರತಿವರ್ಷವೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಒಂದು ವರ್ಷ ಮಳೆ ಬಾರದೆ ಬೆಳೆ ಹಾನಿಯಾದರೆ, ಇನ್ನೊಂದು ವರ್ಷ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗುತ್ತದೆ. ಒಟ್ಟಿನಲ್ಲಿ ಕಷ್ಟದ ಕೃಷಿ ಕಾಯಕದಿಂದ ನಷ್ಟ ತಪ್ಪದ ವರ್ಷ ಎಂದಿಗೂ ಅನ್ನದಾತನ ಪಾಲಿಗೆ ಬರುತ್ತಲೇ ಇಲ್ಲ.

    ಪ್ರಸಕ್ತ ವರ್ಷವೂ ಉಂಟಾದ ಅತಿವೃಷ್ಟಿಯಿಂದ ಮುರಗೋಡ ಹೋಬಳಿ ವ್ಯಾಪ್ತಿಯ ಮುಂಗಾರು ಬೆಳೆಗಳಾದ ಹೆಸರು, ಸೋಯಾಬೀನ್ ಸೇರಿ ಇತರೆ ಬೆಳೆಗಳು ಸಂರ್ಪೂಣ ಹಾನಿಗೊಂಡಿದೆ. ಪ್ರತಿವರ್ಷದಂತೆ, ‘ಈ ವರ್ಷವಾದರೂ ಉತ್ತಮ ಇಳುವರಿ ಬರಲಿ’ ಎಂಬ ಆಶಯದೊಂದಿಗೆ ಕೃಷಿ ಕಾರ್ಯ ಕೈಗೊಂಡಿದ್ದ ರೈತರಿಗೆ ನಿರಾಸೆ ತಪ್ಪಿಲ್ಲ.

    ಬೆಳೆ ಮಾಹಿತಿ: ಮುರಗೋಡ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 25,269 ಹೆಕ್ಟೇರ್ ವ್ಯವಸಾಯ ಕ್ಷೇತ್ರ ಹೊಂದಿದೆ. ಅದರಲ್ಲಿ 6,560 ಹೆಕ್ಟೇರ್ ಪ್ರದಶದಲ್ಲಿ ಹೆಸರು, ಸೋಯಾಬಿನ್ 708 ಹೆಕ್ಟೇರ್, ಶೇಂಗಾ 542 ಹೆಕ್ಟೇರ್, ಗೋವಿನಜೋಳ 2,692 ಹೆಕ್ಟೇರ್, ಹತ್ತಿ 6,090 ಹೆಕ್ಟೇರ್ ಒಣ ಬೇಸಾಯ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ನೀರಾವರಿಯಿಂದ ಕಬ್ಬು, ತರಕಾರಿ, ಬಾಳೆ ಮತ್ತು ಇತರ ಬೆಳೆಗಳನ್ನು ಬೆಳೆಯಲಾಗಿದೆ. ಕೃಷಿ ಇಲಾಖೆಯಿಂದ ರೈತರ ಜಮೀನುಗಳಿಗೆ ಮಳೆಯಿಂದ ಹಾನಿಯಾದ ಬೆಳೆ ಸರ್ವೇ ಕೈಗೊಳ್ಳಲಾಗಿದೆ. ತಡವಾಗಿ ಬಿತ್ತನೆ ಮಾಡಿದ ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ ತಿಳಿಸಿದ್ದಾರೆ.

    ವರುಣನ ಆಘಾತ: ಈ ಬಾರಿಯಾದರೂ ವಾಣಿಜ್ಯ ಬೆಳೆಗಳು ತಮ್ಮ ಕೈಹಿಡಿಯಬಹುದೆಂದು ನಂಬಿಕೊಂಡಿದ್ದ ನೂರಾರು ರೈತರು ಹೆಸರು, ಸೋಯಾಬೀನ್, ಸೂರ್ಯಕಾಂತಿ, ಶೇಂಗಾ ಬಿತ್ತನೆ ಮಾಡಿದ್ದರು. ನಿರೀಕ್ಷೆಯಂತೆ ಉತ್ತಮವಾಗಿಯೇ ಬೆಳೆ ಬೆಳೆದಿತ್ತು. ಆದರೆ ಜುಲೈ, ಆಗಸ್ಟ್‌ನಲ್ಲಿ ಸುರಿದ ನಿರಂತರ ಭಾರಿ ಮಳೆ ಆಘಾತ ತಂದೊಡ್ಡಿದೆ. ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ವಾರಗಳಿಗೂ ಹೆಚ್ಚು ಕಾಲ ಬೆಳೆಗಳು ನೀರಿನಲ್ಲಿ ಮುಳುಗಿ ಕೊಳೆತುಹೋಗಿವೆ. ಪ್ರವಾಹ ನೀರು ಇಳಿದರೂ ಜಮೀನುಗಳಲ್ಲಿ ತೇವಾಂಶ ಇದ್ದುದರಿಂದ ಶೇ. 65ರಷ್ಟು ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಅನ್ನದಾತರು ಅಳಲು ತೋಡಿಕೊಂಡಿದ್ದಾರೆ.

    ಲಕ್ಷಾಂತರ ರೂ. ನೀರಿನಲ್ಲಿ ಹೋಮ

    ಕೃಷಿಕೂಲಿ ಕಾರ್ಮಿಕರಿಗೆ, ಬೆಳೆಗಳ ರಕ್ಷಣೆಗೆ ರಾಸಾಯನಿಕ ಗೊಬ್ಬರ, ಕೀಟನಾಶ ಹಾಗೂ ಇನ್ನಿತರ ಕೆಲಸಗಳಿಗೆಂದು ರೈತರು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಆದರೆ, ಈ ಹಣವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಟಾವಿಗೆ ಬಂದ ಬೆಳೆಯಲ್ಲಿ ಎಕರೆಗೆ ಅರ್ಧ ಕ್ವಿಂಟಾಲ್‌ಗೂ ಕಡಿಮೆ ಪ್ರಮಾಣದಲ್ಲಿ ಬೆಳೆ ಮಾತ್ರ ಕೈ ಸೇರುತ್ತಿದೆ. ಜಮೀನಿನಲ್ಲಿಯೇ ಬೆಳೆ ಕೊಳೆಯುತ್ತಿರುವ ಕಾರಣದಿಂದ ಅನೇಕ ರೈತರು ಕಟಾವು ಕೈಗೊಂಡಿಲ್ಲ. ನಿರಂತರವಾಗಿ ಬೆಳೆ ಹಾನಿಯಾಗುತ್ತಿದ್ದರೂ ಬೆಳೆ ವಿಮೆ ಸಿಗುತ್ತಿಲ್ಲ. ಹೀಗಾಗಿಯೇ ಶೇ. 75ರಷ್ಟು ರೈತರು ಬೆಳೆ ವಿಮೆ ತುಂಬಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮುರಗೋಡ ರೈತರು ಒತ್ತಾಯಿಸಿದ್ದಾರೆ.

    ಮುರಗೋಡ ಹೋಬಳಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿಲಾಗಿದೆ. ಬೆಳೆ ಸಮೀಕ್ಷಾ ಆ್ಯಪ್ ಮುಖಾಂತರವೂ ವರದಿ ನೀಡಲಾಗಿದೆ. ರೈತರು ಸರಿಯಾಗಿ ಆಸಕ್ತಿ ತೊರದೆ ಇರುವುದರಿಂದ ಬೆಳೆ ಹಾನಿ ಸಮೀಕ್ಷೆಗೆ ತೊಂದರೆಯಾಗಿದೆ.
    | ನಾಗೇಶ ವಿರಕ್ತಮಠ ಕೃಷಿ ಅಧಿಕಾರಿ, ರೈತ ಸಂರ್ಪಕ ಕೇಂದ್ರ, ಮುರಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts