More

    ಕಾಡಾನೆಗಳಿಂದ ಬೆಳೆ ಹಾನಿ

    ಶಿಗ್ಗಾಂವಿ: ಪಟ್ಟಣದ ಹೊರ ವಲಯದ ಜೇಕಿನಕಟ್ಟಿ ಮುರಾರ್ಜಿ ವಸತಿ ಶಾಲೆ ಪಕ್ಕದ ಅರಣ್ಯದಲ್ಲಿ ಶನಿವಾರ ಪ್ರತ್ಯಕ್ಷವಾಗಿದ್ದ ಕಾಡಾನೆಗಳು, ರೈತರ ಕಬ್ಬು, ಗೋವಿನಜೋಳ ಸೇರಿ ಇತರೆ ಬೆಳೆಗಳನ್ನು ತುಳಿದು ಹಾನಿಗೊಳಿಸಿವೆ. ಭಾನುವಾರ ಶಿಗ್ಗಾಂವಿ ಬಿಟ್ಟು ದುಂಡಸಿ ಅರಣ್ಯದ ಕಡೆ ತೆರಳಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಯಲ್ಲಾಪುರ ಕಾಡಿನಿಂದ ಶಿಗ್ಗಾಂವಿಗೆ ಬಂದು ಭಾರಿ ಸದ್ದು ಮಾಡಿದ್ದ 6 ಕಾಡಾನೆಗಳನ್ನು ಓಡಿಸಲು ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ದಿನವಿಡಿ ಹರ ಸಹಾಸಪಟ್ಟರೂ ಸ್ಥಳ ಬಿಟ್ಟು ಕದಲಿರಲಿಲ್ಲ. ಭಾನುವಾರ ಬೆಳಗ್ಗೆ ಜೇಕಿನಕಟ್ಟಿ, ರಾಜೀವನಗರ, ಶಿವಪುರ, ಮಡ್ಲಿ ನರ್ಸರಿ, ಅಡವಿ ಸೋಮಾಪುರದ ಮೂಲಕ ದುಂಡಸಿ ಅರಣ್ಯ ಪ್ರವೇಶಿಸಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಮಧ್ಯೆ ದಾರಿಯುದ್ದಕ್ಕೂ ರೈತರ ಸುಮಾರು 50 ಎಕರೆಗೂ ಹೆಚ್ಚು ಜಮೀನಿನಲ್ಲಿದ್ದ ಕಬ್ಬು, ಗೋವಿನಜೋಳ ಸೇರಿ ವಿವಿಧ ಬೆಳೆಗಳನ್ನು ಹಾನಿಗೊಳಿಸಿವೆ ಎಂದು ಅರಣ್ಯ ಅಧಿಕಾರಿ ರಮೇಶ ಶೇತಸನದಿ ತಿಳಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಇಲಾಖೆಯಿಂದ ಪರಿಹಾರ ವಿತರಣೆಗೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

    ದುಂಡಸಿ, ಕುನ್ನೂರು, ಹೆಳವ, ತರ್ಲಘಟ್ಟ, ಅರಟಾಳ, ಜೋಂಡಲಗಟ್ಟಿ, ಹೊಸೂರು ಸೇರಿ ವಿವಿಧ ಕಾಯ್ದಿಟ್ಟ ಅರಣ್ಯ ಪರಿಶೀಲಿಸಲಾಗಿದೆ. ಮೂರು ತಂಡಗಳಲ್ಲಿ 10 ಜನ ಅರಣ್ಯ ರಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶಿಗ್ಗಾಂವಿ ವ್ಯಾಪ್ತಿಗೆ ಹೊಂದಿಕೊಂಡ ಅರಣ್ಯ ಪ್ರದೇಶದ ಸುತ್ತಲಿನ ವಿವಿಧ ಗ್ರಾಮಗಳ ಜನರಿಗೆ ಕಾಡಾನೆಗಳ ಮಾಹಿತಿ ನೀಡಲಾಗಿದೆ. ಜಾಗೃತಿ ವಹಿಸುವಂತೆ ಸೂಚಿಸಿದ್ದೇನೆ. ಮುಂಡಗೋಡ, ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೂ ಮಾಹಿತಿ ರವಾನಿಸಲಾಗಿದೆ. ಅಲ್ಲಿಯೂ ನಿಗಾವಹಿಸಿ ಪತ್ತೆ ಕಾರ್ಯ ನಡೆಯತ್ತಿದೆ. ಕಾಡಾನೆಗಳು ಕಂಡ ಬಂದಲ್ಲಿ ಮೊ.ಸಂ. 9741745257 ಗೆ ಕರೆ ಮಾಡಬೇಕು.

    | ರಮೇಶ ಶೇತಸನದಿ, ಅರಣ್ಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts