More

    ಕೆರೆ, ಕಟ್ಟೆ ಒಡೆಯುವವರ ವಿರುದ್ಧ ಕ್ರಿಮಿನಲ್ ಕೇಸ್

    ಬ್ಯಾಡಗಿ: ಕೆರೆ- ಕಟ್ಟೆಗಳ ಒಡ್ಡು ಒಡೆದು ಹಾಕಿರುವ ಹಾಗೂ ಅಕ್ರಮ ನೀರುಗಾಲುವೆ ಬಳಕೆಯಂಥ ವಿವಿಧ ಪ್ರಕರಣಗಳು ತಾಲೂಕಿನಲ್ಲಿ ಕಂಡುಬಂದಿದ್ದು, ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ರವಿ ಕೊರವರ ಅವರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರಾಧನೆ ಹಾಗೂ ಅಕ್ರಮ- ಸಕ್ರಮ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

    ತಾಲೂಕಿನ ಹಿರೇಅಣಜಿ ಹಾಗೂ ವಿವಿಧ ಗ್ರಾಮಗಳಲ್ಲಿ ಕೆರೆಗಳ ಒಡ್ಡುಗಳನ್ನು ಕಿತ್ತು ಹಾಕಿರುವ ಪ್ರಕರಣ ಕುರಿತು ದೂರುಗಳು ಬಂಧಿವೆ. ಯಾವುದೇ ಕಾರಣಕ್ಕೂ ರಸ್ತೆ, ಕೆರೆ- ಕಟ್ಟೆ ಸೇರಿದಂತೆ ಸಾರ್ವಜನಿಕ ಆಸ್ತಿ- ಪಾಸ್ತಿ ಹಾನಿ ಮಾಡಲು ಯತ್ನಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಖಡಕ್ ಸೂಚನೆ ನೀಡಿದರು.

    ತಾಲೂಕಿನ ಬನ್ನಿಹಟ್ಟಿ, ಬಿಸಲಹಳ್ಳಿ, ಘಾಳಪೂಜಿ, ದುಮ್ಮಿಹಾಳ, ಕೆರೂಡಿ, ಹಿರೇಹಳ್ಳಿ ಗ್ರಾಮ ಸೇರಿದಂತೆ ಹಲವೆಡೆ ರೈತರು ಭೂಮಿಯನ್ನು ಸಾಗುವಳಿ ಮಾಡಿದ್ದು, ಸರ್ಕಾರ ಹಾಗೂ ನ್ಯಾಯಾಲಯ, ಕಂದಾಯ ಇಲಾಖೆ ನಿರ್ದೇಶನಗಳನ್ನು ಅನುಸರಿಸಿ ರೈತರಿಗೆ ಭೂಮಿ ಹಂಚಿಕೆ ಮಾಡಲಾಗುವುದು ಎಂದರು.

    ತಾಲೂಕಿನಾದ್ಯಂತ ದೇವಸ್ಥಾನ ಹಾಗೂ ಮಂದಿರ ನಿರ್ವಣಕ್ಕೆ ಆರಾಧನೆ ಯೋಜನೆಯಡಿ 1 ಲಕ್ಷ ರೂ. ಮಾತ್ರ ಅನುದಾನ ನೀಡಲು ಅವಕಾಶವಿದೆ. ಬಹುತೇಕ ದೇವಸ್ಥಾನ ಟ್ರಸ್ಟ್​ನವರು 2ರಿಂದ 10 ಲಕ್ಷ ರೂ.ಬೇಡಿಕೆ ಸಲ್ಲಿಸಿದ್ದಾರೆ. ಸಮಿತಿ ಸದಸ್ಯರು ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.

    ಸಮಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಮಲ್ಲೇಶಪ್ಪ ಬಣಕಾರ, ಅರ್ಜುನಪ್ಪ ಲಮಾಣಿ, ಚೌಡಪ್ಪ ಹರಮಗಟ್ಟಿ, ಪುಟ್ಟವ್ವ ಸುಂಕಾಪುರ ಅವರನ್ನು ಸನ್ಮಾನಿಸಲಾಯಿತು.

    ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸಿದ್ದಯ್ಯ ಹಿರೇಮಠ, ಸುರೇಶ ಕಳ್ಳಿಮನಿ, ತಹಸೀಲ್ದಾರ್ ರವಿ ಕೊರವರ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ಶಿರಸ್ತೆದಾರ ಎ.ಎ. ಬಂಕಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts