More

  ನಾಯಕರ ಹೆಸರಿನಲ್ಲಿ ಮತಯಾಚನೆ ಸಲ್ಲ: ಜಯಪ್ರಕಾಶ್ ಹೆಗ್ಡೆ

  ಶೃಂಗೇರಿ: ನಾನು ಸಂಸದನಾಗಿದ್ದಾಗ ಜಿಲ್ಲೆಯ ಪ್ರತಿ ಗ್ರಾಪಂಗೆ ಭೇಟಿ ನೀಡಿದ್ದೆ. ಅಡಕೆ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದಿಸಿ ಅವರಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ನಾನು ಮಾಡಿದ ಕೆಲಸದ ಮೇಲೆ ಜನರ ಬಳಿ ಮತವನ್ನು ಯಾಚಿಸುತ್ತಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

  ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಡಕೆ ಧಾರಣೆಯನ್ನು ಹೆಚ್ಚಳ ಮಾಡಿದ ಕೀರ್ತಿ ನಮ್ಮದು. ಬೇರೆ ಪಕ್ಷದವರು ಭಾಷಣ ಮಾಡುತ್ತಾ ಇದ್ದಾರೆ. ಅವರಿಗೆ ಅಭಿವೃದ್ಧಿ ಮಾಡುವ ಯೋಜನೆಯೇ ಇಲ್ಲ. ಜಿಲ್ಲೆಗೆ ರೈಲ್ವೆ ಸಂಪರ್ಕವನ್ನು ಮಾಡಿದ ಕೀರ್ತಿ ನಮಗೆ ಸಲ್ಲುತ್ತದೆ. ಕೆಲಸ ಮಾಡಿದ ಜನಪ್ರತಿನಿಧಿಗೆ ಮತ ನೀಡಬೇಕು. ನಾವು ನಾಯಕರ ಹೆಸರಿನಲ್ಲಿ ಮತವನ್ನು ಯಾಚಿಸಬಾರದು. ಯಾರನ್ನೂ ನಾವು ದೂಷಣೆ ಮಾಡಬಾರದು.ನಮ್ಮ ಅಭಿವೃದ್ಧಿ ಕೆಲಸವನ್ನು ಜನಸಾಮಾನ್ಯರ ಮುಂದಿಡಬೇಕು ಎಂದರು.
  ಜನಪ್ರತಿನಿಧಿಗಳು ಜನಸಾಮಾನ್ಯರ ಕೆಲಸ ಮಾಡಬೇಕು. ಜನರು ಜನಪ್ರತಿನಿಧಿಗಳ ಬಳಿ ತಮ್ಮ ಸಮಸ್ಯೆಗಳನ್ನು ಕೇಳುವ ಹಕ್ಕಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾಚಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಹಿಂದಿನ ಸರ್ಕಾರ ಏನು ಮಾಡಿದೆ?. ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಎಂಬುದರ ಬಗ್ಗೆ ಮತದಾರರಿಗೆ ಅರಿವು ಮಾಡಿಸಬೇಕು. ಬೇರೆ ಪಕ್ಷದವರು ವಾಟ್ಸಾಪ್‌ನಲ್ಲಿ ನಮ್ಮ ಬಗ್ಗೆ ಮಾಡುವ ಆಪಾದನೆಗಳ ಬಗ್ಗೆ ನಾನು ತಲೆಕೆಡಿಸುವುದಿಲ್ಲ. ನಾನು ಪಕ್ಷ ನೀಡಿದ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
  ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅಡಕೆ ಬೆಳೆಗಾರರ ಹಿತ ಕಾಯುವ ಗೋರಖ್ ಸಿಂಗ್ ಸಮಿತಿ ರಚನೆ, ಅಡಕೆಗೆ ಹಳದಿ ರೋಗ ಹಾಗೂ ಎಲೆಚುಕ್ಕೆ ರೋಗದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಯಪ್ರಕಾಶ್ ಹೆಗಡೆ ನಿರ್ವಸಿದ ಕಾರ್ಯ ಸರ್ವರಿಗೂ ಮಾದರಿ. ಅರಣ್ಯ ಇಲಾಖೆಯ ಗೊಂದಲದಿಂದ ಹಕ್ಕುಪತ್ರ ಸಿಗದೆ ಅಲೆದಾಡುತ್ತಿರುವರಿಗೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಟಾಸ್ಕ್‌ಪೋರ್ಸ್ ರಚಿಸಿ ನ್ಯಾಯ ದೊರಕಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.
  ಬಿಜೆಪಿ ಎಂದಿಗೂ ಜನಪರವಾಗಿ ಕೆಲಸ ಮಾಡಿಲ್ಲ. ಪ್ರಸ್ತುತ ಯುವಕರು ಶಿಕ್ಷಣ ಪಡೆದು ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡುವ ಬಿಜೆಪಿ ಭರವಸೆಗಳು ಪೊಳ್ಳಾಗಿದೆ. ಭ್ರಷ್ಟಾಚಾರ ಹೆಚ್ಚಾಗಲು ಬಿಜೆಪಿ ಕಾರಣ. ಬಿಜೆಪಿ ವಿದ್ಯುತ್ ಉತ್ಪಾದನೆಯಲ್ಲೂ ಸೋತಿದೆ. ಆದರೆ ಕಾಂಗ್ರೆಸ್ ಸರ್ಕಾರ ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಿದ್ದು, ಮುಂಬರುವ ದಿನಗಳಲ್ಲಿ ನಿರಂತರ ವಿದ್ಯುತ್ ನೀಡುವ ಯೋಜನೆ ನಮ್ಮದಾಗಿದೆ ಎಂದರು.
  ಕಾಂಗ್ರೆಸ್ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಬಿಜೆಪಿ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ನಾವು ಎಂದಿಗೂ ಭ್ರಷ್ಟಾಚಾರ ಮಾಡಿಲ್ಲ. ಹಾಗಾಗಿ ಜನರ ಮುಂದೆ ತಲೆತಗ್ಗಿಸದೇ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಬೇಕು. ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ಜನರ ಬದುಕನ್ನು ಗಟ್ಟಿಗೊಳಿಸಲು ಸಹಕಾರಿ ಆಗಲಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗೆಸ್ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.
  ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ. ಅಂಶುಮಂತ್, ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ, ಮುಖಂಡರಾದ ಕಾನುವಳ್ಳಿ ಕೃಷ್ಣಪ್ಪ, ನಟರಾಜ್, ಸತೀಶ್ ಇತರರಿದ್ದರು.

  ಶಾರದಾಂಬೆಗೆ ವಿಶೇಷ ಪೂಜೆ
  ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಅವರು ಶ್ರೀ ಶಾರದಾಂಬೆ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತೋರಣ ಗಣಪತಿ ಸನ್ನಿಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಐದು ಈಡುಗಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ, ಮಖಂಡರಾದ ರವಿಶಂಕರ್, ಸಂತೋಷ್ ಗುಬ್ಬಿಗ, ರಮೇಶ್ ಮಾಲೂರು ದಿಣ್ಣೆ, ಶ್ರೀಧರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts