More

    ಬದಲಾವಣೆಗೆ ಹೊಂದಿಕೊಳ್ಳೋನೇ ಮಹಾಶೂರ! ನಿಮ್ಮ ಬ್ರ್ಯಾಂಡ್ ನೀವೇ ಸೃಷ್ಟಿಸಿ

    • ಶ್ರೀಕಾಂತ್ ಶೇಷಾದ್ರಿ

    ಕರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಎಲ್ಲರೂ ಹೆಚ್ಚಿನ ಸಮಯವನ್ನು ಈಗ ಮನೆಯಲ್ಲೇ ಕಳೆಯಬೇಕಾಗಿದೆ. ‘ಹಾಗಾದರೆ ನಮ್ಮ ಬಿಸಿನೆಸ್​ನ ಕಥೆ ಅಷ್ಟೇನಾ’ ಎಂದು ವ್ಯಾಪಾರಿಗಳು ಚಿಂತಿಸುವಂತಾಗಿದೆ. ಅಂಗಡಿ ವ್ಯಾಪಾರವನ್ನು ಮನೆಯಲ್ಲೇ ಇದ್ದು ಮಾಡಬಹುದು. ಪ್ರಮಾಣ ಸ್ವಲ್ಪ ಕಡಿಮೆ ಆಗಬಹುದಷ್ಟೇ. ಅದಕ್ಕಿರುವ ಮಾರ್ಗಗಳೇನು? ಇಲ್ಲಿದೆ ನೋಡಿ ವಿವರ.

    ಕರೊನಾ ಸಾಂಕ್ರಾಮಿಕ ಕಳೆದ ಒಂದು ವರ್ಷದಿಂದ ವ್ಯಾಪಾರ ಕ್ಷೇತ್ರಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ. ಹಾಗೂಹೀಗೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಸುಳಿವಿದ್ದಾಗಲೇ ಎರಡನೇ ಅಲೆ ಘನಘೋರ ರೂಪದಲ್ಲಿ ಬಂದೆರಗಿದೆ. ಪರಿಸ್ಥಿತಿ ಕೈ ಮೀರಿದ ಕಾರಣ ಸರ್ಕಾರ ಅನಿವಾರ್ಯವಾಗಿ ಲಾಕ್​ಡೌನ್ ಮಾದರಿಯಲ್ಲಿ ಕರ್ಫ್ಯೂ ಹೇರಿದೆ. ಅಗತ್ಯ ವಸ್ತುಗಳ ಮಾರಾಟ- ಖರೀದಿಗೆ ಸಮಯ ಕೊಟ್ಟಿದ್ದು ಕೇವಲ ಕೆಲವು ತಾಸು ಮಾತ್ರ. ಅಗತ್ಯವಸ್ತುಗಳ ವ್ಯಾಪ್ತಿಗೆ ಬಾರದ ಮಾರಾಟ ಸಂಪೂರ್ಣ ನಿಂತೇ ಹೋಗಿದೆ. ಇಂತಹ ಸಂದರ್ಭದಲ್ಲಿ ವ್ಯಾಪಾರಸ್ಥರು ಧೃತಿಗೆಡುವುದು ಸಹಜ. ಭವಿಷ್ಯ ಕಗ್ಗತ್ತಲಾಗಿ ಕಾಡುವುದೂ ಸಹ ದಿಟ. ‘ವ್ಯವಹಾರವನ್ನೇ ಬಿಟ್ಟು ಬಿಡುವುದೇ’ ಎಂದು ಯೋಚಿಸಿದವರು, ತೀರ್ವನಿಸಿದವರು ಲೆಕ್ಕಕ್ಕಿಲ್ಲದಷ್ಟು ಮಂದಿ.

    ಇಂತಹ ವಾತಾವರಣದಲ್ಲಿ ಬೇಕಾಗಿರುವುದು ಆತ್ಮವಿಶ್ವಾಸ. ಧನಾತ್ಮಕ ಚಿಂತನೆ. ತಿಳಿದವರೊಂದಿಗೆ ಕೆಲ ಸಮಯ ಚರ್ಚೆ, ಅವಕಾಶಗಳು ಇದ್ದೇ ಇರುತ್ತದೆ. ಹೊಸ ಹೊಳಹುಗಳು ಸಿಕ್ಕೇ ಸಿಗುತ್ತವೆ. ಉದ್ಯೋಗ ಕಳೆದುಕೊಂಡವರ ಪೈಕಿ ಹಲವರು ವ್ಯಾಪಾರದ ಬಗ್ಗೆ ಯೋಚಿಸಿ ಆ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಆನ್​ಲೈನ್ ವೇದಿಕೆ ಬಳಸಿಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ನಿಜ, ಈಗಿನ ಕಾಲಘಟ್ಟದಲ್ಲಿ ಆನ್​ಲೈನ್ ವ್ಯಾಪಾರಕ್ಕೆ ಸಾಕಷ್ಟು ಮಹತ್ವ ಸಿಗುತ್ತಿದೆ. ನಗರವಾಸಿಗಳಷ್ಟೇ ಅಲ್ಲದೇ ಗ್ರಾಮೀಣ ಜನರೂ ಆನ್​ಲೈನ್ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಅಮೆಜಾನ್, ಫ್ಲಿಪ್​ಕಾರ್ಟ್​ನಂತಹ ಕಂಪನಿಗಳು ಮೂಲೆಮೂಲೆಗೂ ತಮ್ಮ ಸೇವೆಯನ್ನು ವಿಸ್ತರಿಸುತ್ತಿವೆ. ಹಾಗಿದ್ದರೆ ಆನ್​ಲೈನ್ ಮಾರಾಟ ಅಷ್ಟು ಸಲೀಸಾ? ಗ್ರಾಹಕರನ್ನು ಹೇಗೆ ಸಂರ್ಪಸುವುದು, ಅವರಿಗೆ ಮನವರಿಕೆ ಮಾಡಿಕೊಡುವುದು ಹೇಗೆ? ಹಣ ಬರುವ ನಂಬಿಕೆ ಎಷ್ಟು? ಉತ್ಪನ್ನವನ್ನು ಗ್ರಾಹಕರಿಗೆ ಸರಬರಾಜು ಮಾಡುವುದು ಯಾವ ಮಾರ್ಗದಲ್ಲಿ? ಪ್ಯಾಕೇಜಿಂಗ್ ಹೇಗೆ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಇದೇ ರೀತಿ ಆತಂಕದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಉದ್ಯಮ ಆರಂಭಿಸಿ ಯಶಸ್ವಿಯಾದವರು ಸಾಕಷ್ಟಿದ್ದಾರೆ. ಒಂದಷ್ಟು ಸೋತ ಉದಾಹರಣೆಗಳಿರಬಹುದು, ಹಾಗೆಂದು ತಲೆಕೆಡಿಸಿಕೊಳ್ಳುವುದು ಅನಗತ್ಯ. ಎಲ್ಲ ಕಡೆಯೂ ಸೋಲು- ಗೆಲುವು ಇದ್ದಿದ್ದೆ. ಹಾಗಿದ್ದರೆ ಆನ್​ಲೈನ್ ಮಾರಾಟಕ್ಕೆ ಇರುವ ವೇದಿಕೆಗಳೇನೇನು ತಿಳಿದುಕೊಳ್ಳಲು ಒಂದು ಸುತ್ತು ಹಾಕಿಬರೋಣ.

    ಜನರನ್ನು ತಲುಪಲು ಕಾಸು ಖರ್ಚಿಲ್ಲದೇ ಫೇಸ್​ಬುಕ್ ಬಳಕೆ ಮಾಡಿಕೊಳ್ಳಬಹುದು. ಜತೆಗೆ ವಾಟ್ಸ್​ಆಪ್, ಇನ್​ಸ್ಟಾಗ್ರಾಂ, ಟ್ವಿಟರ್ ಕೂಡ. ಯಾವುದೋ ಊರಿನಲ್ಲಿರುವ ಗೆಳೆಯರು, ಬಂಧು ಮಿತ್ರರನ್ನೂ ಗ್ರಾಹಕರನ್ನಾಗಿ ಮಾಡಿಕೊಳ್ಳುವ ವೇದಿಕೆಗಳು ಇವು. ಇವುಗಳ ಹೊರತಾಗಿ ಅಮೆಜಾನ್, ಫ್ಲಿಪ್​ಕಾರ್ಟ್, ಬಿಗ್ ಬ್ಯಾಸ್ಕೆಟ್​ನಂತಹ ದೈತ್ಯರೂ ಸಹ ಪಾಲುದಾರರನ್ನಾಗಿ ಮಾಡಿಕೊಳ್ಳಲು ರೆಡ್ ಕಾರ್ಪೆಟ್ ಹಾಸಿ ನಿಂತಿದ್ದಾರೆ!

    ಇಲ್ಲಿ ಎರಡು ವಿಚಾರ ಬರುತ್ತದೆ. ಒಂದು, ಉತ್ಪಾದಕರಾದರೆ ಇಂತಹ ವೇದಿಕೆಗಳು ಖಂಡಿತ ಉತ್ತಮ ವೇದಿಕೆ ಸೃಷ್ಟಿಸುತ್ತವೆ. ಒಂದು ವೇಳೆ ಉತ್ಪಾದಕರಿಂದ ಕೊಂಡು ಮಾರಾಟ ಮಾಡುವ ವರ್ಗಕ್ಕೆ ಸೇರಿದವರಾದರೆ ಕೊರಿಯರ್ ಅಥವಾ ನಗರ ಪ್ರದೇಶದಲ್ಲಿ ಡಂಜೋದಂತಹ ಸೇವೆ ಬಳಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ, ಡೋರ್ ಡೆಲಿವರಿ ಕೊಡಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡರೆ ಇನ್ನೂ ಅನುಕೂಲಕರ.

    ಉತ್ಪಾದಕರಾದರೆ?: ಪ್ರಸ್ತುತ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿ ಗ್ರಾಹಕರ ನಿರೀಕ್ಷೆಯಲ್ಲಿದ್ದರೆ ಇ-ಕಾಮರ್ಸ್ ವೇದಿಕೆ ಒಂದೊಳ್ಳೆಯ ಮಾರ್ಗವಾದೀತು. ಅಮೆಜಾನ್, ಫ್ಲಿಪ್​ಕಾರ್ಟ್, ಬಿಗ್​ಬಾಸ್ಕೆಟ್ ನಂತಹ ಹಲವು ವೇದಿಕೆಗಳ ವೆಬ್​ಸೈಟ್​ನಲ್ಲಿ ಮಾಹಿತಿ ಪಡೆದು ಮುಂದುವರಿಯಬಹುದಾಗಿದೆ. ಜತೆಗೆ ಫೇಸ್​ಬುಕ್, ಟ್ವಿಟರ್ ಬಳಸಿ ಪ್ರಾಡಕ್ಟ್ ಮೂವ್ ಮಾಡಬಹುದು. ಅವಶ್ಯಕತೆ ನೋಡಿಕೊಂಡು ಸಣ್ಣ ಮೊತ್ತ ಪಾವತಿಸಿ ಪಾಡಕ್ಟ್ ಪ್ರಚಾರದ ಪೋಸ್ಟ್ ಪ್ರಮೋಷನ್ ಮಾಡಿಸಿದರೆ ಅದು ಹೆಚ್ಚಿನ ಜನರನ್ನು ತಲುಪಿ ಹೆಚ್ಚಿನ ಕೋರಿಕೆಗಳು ಬರಬಹುದು. ಹಾಗೆಯೇ ಅದು ಹೆಚ್ಚೆಚ್ಚು ಶೇರ್ ಆಗಿ ವ್ಯವಹಾರಕ್ಕೆ ಅನುಕೂಲಕರ ಆಗಬಹುದೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಉತ್ಪನ್ನವನ್ನು ಈ ವೇದಿಕೆಯಲ್ಲಿ ಮಾರಾಟ ಮಾಡಲು ಪ್ಯಾನ್ ಕಾರ್ಡ್ ನಂಬರ್, ಜಿಎಸ್ಟಿಎನ್ ನಂಬರ್ ಬೇಕಾಗಬಹುದು.

    ಇ- ಕಾಮರ್ಸ್ ಅಂದರೆ?

    ಅಂತರ್ಜಾಲ ಬಳಸಿಕೊಂಡು ಸರಕು ಅಥವಾ ಸೇವೆಗಳ ಖರೀದಿ ಮತ್ತು ಮಾರಾಟ ಮಾಡುವ ವಿಧಾನ. ಇ-ಕಾಮರ್ಸ್ ವ್ಯವಹಾರದ ಯುಗ ಆರಂಭವಾಗಿ ಬಹಳ ವರ್ಷಗಳೇ ಕಳೆದಿವೆ. ಮಾರುಕಟ್ಟೆಯ ಮಳಿಗೆಯಲ್ಲಿ ಉತ್ಪನ್ನ ತಂದಿಟ್ಟು ಮಾರುವಷ್ಟೇ ಪ್ರಾಮುಖ್ಯತೆ ಇ-ಕಾಮರ್ಸ್ ವ್ಯವಹಾರಕ್ಕೂ ಇದೆ. ಆರಂಭದಲ್ಲಿ ಕೆಲವು ಉತ್ಪನ್ನಕ್ಕೆ ಇದು ಸೀಮಿತವಾಗಿತ್ತು. ಇಂದು ಎಲ್ಲ ಚಿಕ್ಕಪುಟ್ಟ ವಸ್ತುಗಳೂ ಸಿಗುವಷ್ಟು ತಳಮಟ್ಟಕ್ಕಿಳಿದಿದೆ.

    ಮಾರುಕಟ್ಟೆ ವ್ಯಾಪ್ತಿ ಎಷ್ಟು?

    ಇ- ಕಾಮರ್ಸ್​ಗೆ ಪ್ರಪಂಚವೇ ಮಾರುಕಟ್ಟೆ. ಭೌಗೋಳಿಕ ಗಡಿಯೇ ಇಲ್ಲದಂತೆ ವ್ಯವಹಾರ ನಡೆಸಬಹುದಾದ ಅವಕಾಶವಿದೆ. ಎಲ್ಲೋ ಹಳ್ಳಿಯ ಮೂಲೆ ಯಲ್ಲಿ ಕುಳಿತು ತಮ್ಮ ಉತ್ಪನ್ನವನ್ನು ಜಗತ್ತಿನ ಮೂಲೆಗೆ ಕಳಿಸಲೂ ಅವಕಾಶವಿದೆ.

    ಖರ್ಚು ವೆಚ್ಚ ದುಬಾರಿ?

    ಉತ್ಪನ್ನ ಮಾರಾಟಕ್ಕೆ ಅಂಗಡಿ- ಮಳಿಗೆ, ಶೋ ರೂಂ ತೆರೆದು ಗ್ರಾಹಕರ ಬರುವಿಕೆಗಾಗಿ ಕಾಯುವ ಅಗತ್ಯವೇ ಇರುವುದಿಲ್ಲ. ಮಾರಾಟಕ್ಕೆ ಭೌತಿಕ ಸ್ಥಳಾವಕಾಶದ ಅಗತ್ಯವೇ ಬಾರದು. ಸಾಮಾಜಿಕ ಜಾಲತಾಣ, ವೆಬ್​ಸೈಟ್ ಅಥವಾ ಇ-ಕಾಮರ್ಸ್ ವ್ಯವಹಾರ ನಡೆಸುವ ದಿಗ್ಗಜ ಕಂಪನಿಯ ವೇದಿಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ವ್ಯಾಪಾರ ನಡೆಸಬಹುದು. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರಮೋಷನ್ ಮಾಡುವುದು, ಪೋಸ್ಟ್ ಪ್ರಮೋಷನ್​ಗೆ ನಿಯಮಿತವಾಗಿ ವೆಚ್ಚ ಮಾಡಿದರೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ.

    ಸದ್ಯದ ಟ್ರೆಂಡ್

    ರಾಜ್ಯದ ಮಟ್ಟಿಗೆ ಹೇಳುವುದಾದರೆ ಆಹಾರ ಉತ್ಪನ್ನ, ಹಣ್ಣು, ಕಾಸ್ಮೆಟಿಕ್ಸ್, ಮಸಾಲೆ ಪದಾರ್ಥ, ಉಪ್ಪಿನಕಾಯಿ, ಕುರುಕಲು ತಿಂಡಿಗಳು, ತರಕಾರಿ, ಪ್ರದೇಶವಾರು ಸ್ಥಳೀಯ ಉತ್ಪನ್ನಗಳು ಸಾಮಾಜಿಕ ಜಾಲತಾಣ ಮುಖೇನ ದೊಡ್ಡ ವಹಿವಾಟು ನಡೆಸುತ್ತಿವೆ. ಅಮೆಜಾನ್, ಫ್ಲಿಪ್​ಕಾರ್ಟ್, ಬಿಗ್ ಬ್ಯಾಸ್ಕೇಟ್, ಸ್ನಾಪ್​ಡೀಲ್, ಸ್ಪಾರ್ ಸೇರಿ ನೂರೆಂಟು ಇ-ಕಾಮರ್ಸ್ ವೇದಿಕೆಗಳಿವೆ. ಇವುಗಳಿಗೆ ಆನ್​ಲೈನ್​ನಲ್ಲೇ ನೋಂದಣಿಯಾಗಬಹುದು. ತಕ್ಷಣವೇ ವ್ಯಾಪಾರ ಆರಂಭಿಸಬಹುದು. ಫುಡ್ ಮತ್ತು ನಾನ್​ಫುಡ್ ಉತ್ಪನ್ನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮಾಣ ಪತ್ರ ಅವಶ್ಯಕತೆ ಇರಲಿದೆ.

    ಗೂಗಲ್ ಬಳಸಿ ಬಾಚಿಕೊಳ್ಳಿ

    ಗೂಗಲ್ ಆಡ್ಸ್ ಬಹಳ ಕೆಲಸ ಮಾಡುತ್ತಿದೆ. ಸಾಮಾನ್ಯವಾಗಿ ಭಾರತದಲ್ಲಿ ಗೂಗಲ್ ಸರ್ಚ್ ಇಂಜಿನ್ ಹೆಚ್ಚಾಗಿ ಬಳಸುತ್ತಾರೆ. ಗೂಗಲ್ ಆಡ್ಸ್​ನಲ್ಲಿ ಶುಲ್ಕ ತುಂಬಿದರೆ ನಮ್ಮ ಉತ್ಪನ್ನವೇ ಸರ್ಚ್ ಮಾಡುವವರಿಗೆ ಆದ್ಯತೆ ಮೇಲೆ ಕಾಣಿಸಲಿದೆ. ಅದರಿಂದ ಅನುಕೂಲವಾಗಲಿದೆ ಎಂಬುದು ಉದ್ಯಮಿ ಕಾರಂತ್ ಅವರ ಅಭಿಪ್ರಾಯವಾಗಿದೆ.

    ವಸ್ತು ಸರಬರಾಜು ಮಾಡೋದು ಹೇಗೆ?

    ಇ-ಕಾಮರ್ಸ್ ವ್ಯವಹಾರದಲ್ಲಿ ತೊಡಗಿಕೊಂಡ ಕಂಪನಿಗಳ ವೇದಿಕೆಯನ್ನು ಬಳಸಿಕೊಳ್ಳಬಹುದು. ಅಲ್ಲಿ ಸೆಲ್ಲರ್ ರೀತಿಯಲ್ಲಿ ಪ್ರವೇಶ ಮಾಡಿ ಗ್ರಾಹಕರನ್ನು ಸುಲಭವಾಗಿ ತಲುಪಬಹುದು. ಅವರ ಸಾಗಣೆ ವಿಧಾನದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಕಳಿಸಿಕೊಡಬಹುದು. ಇಲ್ಲವಾದರೆ ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಮ್ ಮೂಲಕ ಪ್ರಚಾರ ಮಾಡಿ ಗ್ರಾಹಕರ ಸಂಪರ್ಕ ಸಾಧಿಸಿ ಕೊರಿಯರ್ ಅಥವಾ ಡಂಜೋ ಮೂಲಕ ಉತ್ಪನ್ನ ಕಳಿಸಿಕೊಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts