More

    ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಸವಣ್ಣನವರ ತೊಟ್ಟಿಲೋತ್ಸವ

    ಬಸವನಬಾಗೇವಾಡಿ: ಅಣ್ಣ ಬಸವಣ್ಣನವರ ಜನ್ಮ ಸ್ಥಳ ಬಸವನಬಾಗೇವಾಡಿಯಲ್ಲಿರುವ ಬಸವ ಜನ್ಮ ಸ್ಮಾರಕದಲ್ಲಿ ಬಸವ ಜಯಂತಿಯನ್ನು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ತೊಟ್ಟಿಲೋತ್ಸವ ನಡೆಸಿ ಆಚರಿಸಲಾಯಿತು.

    ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮೂಲ ನಂದೀಶ್ವರನಿಗೆ ವಿಶೇಷ ಅಭಿಷೇಕ ಪೂಜೆ ನೆರವೇರಿತು. ನಂತರ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಮಹಾರಾಷ್ಟ್ರದ ಬೀಳೂರ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿಗಳನ್ನು ಮಠದಿಂದ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬಸವ ಸ್ಮಾರಕಕ್ಕೆ ಬರ ಮಾಡಿಕೊಳ್ಳಲಾಯಿತು. ಮುರುಘೇಂದ್ರ ಶ್ರೀಗಳು ಹಾಗೂ ಸಿದ್ಧಲಿಂಗ ಶ್ರೀಗಳು ಬಾಲ ಬಸವಣ್ಣನ ಬೆಳ್ಳಿಯ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವ ಮೂಲಕ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ನಂತರ ಸುಮಂಗಲೆಯರು ಜೋಗುಳ ಹಾಡಿ ತೊಟ್ಟಿಲು ತೊಗಿದರು. ಬಸವ ಜನ್ಮ ಸ್ಮಾರಕದಲ್ಲಿ ಜಮಾಯಿಸಿದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ತೊಟ್ಟಿಲು ಹಾಗೂ ನಾಮಕರಣ ಶ್ರದ್ಧಾ ಭಕ್ತಿಯಿಂದ ಜರುಗಿತು. ಭಕ್ತರಿಗೆ ಅನ್ನಪ್ರಸಾದ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

    ಪಟ್ಟಣದ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಬಸವ ಭಕ್ತರಲ್ಲದೆ ಕೊಪ್ಪಳ, ರಾಯಚೂರ, ಗದಗ, ಹುಬ್ಬಳ್ಳಿ, ಬಳ್ಳಾರಿ, ಕಲಬುರ್ಗಿ, ದಾವಣಗೆರೆ ಹಾಗೂ ಮಹಾರಾಷ್ಟ್ರದಿಂದ ಸಾವಿರಾರೂ ಭಕ್ತರು ತೊಟ್ಟಿಲ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ಮದುವೆಯಾದ ನಂತರ ಮಕ್ಕಳ ಭಾಗ್ಯ ಸಿಗದೆ ಇರುವ ಮಹಿಳೆಯರನ್ನು ಈ ಬಸವೇಶ್ವರರ ತೊಟ್ಟಿಲ ಕೆಳಗೆ ಕೂಡಿಸಿದರೆ ಬರುವ ವರ್ಷದೊಳಗೆ ಮಕ್ಕಳ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯೊಂದಿಗೆ ಮಹಿಳೆಯರು ಈ ತೊಟ್ಟಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕೆಲ ಮನೆತನದವರು ಕಲ್ಲು ಸಕ್ಕರೆ ಗುಗ್ಗರಿ ವಿತರಿಸಿದರು. ಬಸವ ಜಯಂತಿ ಅಂಗವಾಗಿ ಬಸವೇಶ್ವರ ದೇವಸ್ಥಾನ ಬಸವ ಜನ್ಮ ಸ್ಮಾರಕ ಹಾಗೂ ಬಸವೇಶ್ವರ ವೃತ್ತವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸ್ಮಾರಕದ ಮುಂದೆ ಬಸವ ಸೈನ್ಯ ಸೇರಿ ವಿವಿಧ ಸಂಘಟನೆಗಳು ಬೇಸಿಗೆ ಬಿಸಿಲಿನ ದಗೆ ನಿವಾರಿಸಲು ಮಜ್ಜಿಗೆ ಹಾಗೂ ಲಿಂಬೆ ಸರಬತ್ತು ವಿತರಿಸಿದರು.

    ಶಾಸಕ ಶಿವಾನಂದ ಪಾಟೀಲ ಮೂಲನಂದೀಶ್ವರ ದೇವಸ್ಥಾನಕ್ಕೆ ಹಾಗೂ ಬಸವೇಶ್ವರ ವೃತ್ತದ ಬಸವಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಬಸವ ಸ್ಮಾರಕಕ್ಕೆ ಭೇಟಿ ನೀಡಿ ದರ್ಶನ ಪಡೆದರು.

    ತೊಟ್ಟಿಲೋತ್ಸವದಲ್ಲಿ ಬಸವರಾಜ ಕಳ್ಳಿ, ಈರಣ್ಣ ಪಟ್ಟಣಶೆಟ್ಟಿ, ಬಸಪ್ಪ ಹಾರಿವಾಳ, ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ, ಸುಭಾಸ ಚಿಕ್ಕೊಂಡ, ಮಲ್ಲಿಕಾರ್ಜುನ ಕಿಣಗಿ, ಸುರೇಶಗೌಡ ಪಾಟೀಲ, ಮುತ್ತು ಡಂಬಳ, ಶ್ರೀದೇವಿ ಹಿರೇಮಠ, ಲಕ್ಷ್ಮೀ ಉಕ್ಕಲಿ, ಗೀತಾ ಕಿಣಗಿ, ಭಾಗ್ಯ ಖ್ಯಾಡಿ, ನೀಲಮ್ಮ ಕಿಣಗಿ, ಲಕ್ಷ್ಮೀ ಕಿಣಗಿ, ದಾನಮ್ಮ ನಾಗಠಾಣ, ಸುಮಂಗಲಾ ಕಿಣಗಿ, ಮಧು ಮೋದಿ, ತೇಜಸ್ವಿನಿ ಮೋದಿ, ಶಿಲ್ಪಾ ಕಿಣಗಿ, ದೀಪಾ ನಾಯ್ಕೋಡಿ. ಮೇಘಾ ದುಂಡೆಕರ, ವಿದ್ಯಾ ಚಿನಿವಾಲ, ಸರಸ್ವತಿ ಬಶೆಟ್ಟಿ, ಸುಕ್ರುತಾ ಕೊಟ್ರಶೆಟ್ಟಿ, ಪ್ರತಿಭಾ ಪಟ್ಟಣಶೆಟ್ಟಿ ಇತರರಿದ್ದರು. ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆಯೊಂದಿಗೆ ಬಂಗಾರದ ಅಂಗಡಿಯತ್ತ ಜನರು ಸಾಗುತ್ತಿರುವುದು ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts