More

    ಬಿ-ಟೀಮ್ ತಿರುಗುಬಾಣ: ನಾಯಕತ್ವ ಬದಲಾವಣೆಗೆ ಯೋಗೇಶ್ವರ್ ಏಕಾಂಗಿ ಹೋರಾಟ

    ಬೆಂಗಳೂರು: ಬಿಜೆಪಿಯೊಳಗೇ ಪ್ರತಿಪಕ್ಷದ ರೀತಿಯಲ್ಲಿ ಕೆಲಸ ಮಾಡಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನಡೆಯುತ್ತಿರುವ ಷಡ್ಯಂತ್ರ ಬಯಲಾದ ಬೆನ್ನಲ್ಲೇ, ಬಂಡಾಯ ಬಣದ ಅನೇಕ ಶಾಸಕರು ತಟಸ್ಥಗೊಂಡಿದ್ದು, ಸಚಿವ ಸಿ.ಪಿ. ಯೋಗೇಶ್ವರ್ ಮಾತ್ರ ನಾಯಕತ್ವ ಬದಲಾವಣೆಗೆ ಒಬ್ಬಂಟಿ ಸೈನಿಕನಾಗಿ ‘ಸಮರ’ ಮುಂದುವರಿಸಿರುವುದು ಜಗಜ್ಜಾಹೀರಾಗಿದೆ.

    ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವಿಧಾನಪರಿಷತ್ ಸದಸ್ಯರಾಗಲು ಹಾಗೂ ಸಂಪುಟ ದರ್ಜೆ ಸಚಿವರಾಗಲು ಅನುವು ಮಾಡಿಕೊಟ್ಟರೂ ಅಪಸ್ವರ ಎತ್ತಿರುವ ಯೋಗೇಶ್ವರ್ ವಿರುದ್ಧ ಸಚಿವರು, ಪಕ್ಷದ ಶಾಸಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇಡೀ ಬೆಳವಣಿಗೆಯ ಚಿತಾವಣೆಯ ಮೂಲಪುರುಷ ಎಂಬ ಕಾರಣಕ್ಕೆ ಪಕ್ಷದ ಶಾಸಕರೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯೊಳಗೇ ಪ್ರತಿಪಕ್ಷವಾಗಿ ಬಿ-ಟೀಂ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿಜಯವಾಣಿ ಗುರುವಾರ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರಿಂದ ಅತೃಪ್ತರು ದಿಗಿಲುಗೊಂಡಿದ್ದಾರೆ.

    ಗುರುವಾರ ಬೆಳಗ್ಗೆ ಸಂಪುಟ ಸಭೆಗೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಅತೃಪ್ತಿ ಹೊರಹಾಕಿದರು. ‘ರಾಜ್ಯದಲ್ಲಿ ಕೋವಿಡ್​ನಿಂದ ಜನರು ಪರಿತಪಿಸುತ್ತಿದ್ದಾರೆ. ಕರೊನಾ ನಿವಾರಣೆ ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಷ್ಟೂ ಶಕ್ತಿಯೂ ನನಗಿಲ್ಲ’ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ‘ಸಂದರ್ಭ ಬರಲಿ ನೋಡೋಣ’ ಎಂದಷ್ಟೇ ಹೇಳಿದರು.

    ಈ ನಡುವೆ ಸಿಎಂ ಯಡಿಯೂರಪ್ಪ ಕೂಡ ಯೋಗೇಶ್ವರ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೋ ಒಬ್ಬರು ದೆಹಲಿಗೆ ಹೋಗಿದ್ದರು. ವರಿಷ್ಠರು ಅವರಿಗೆ ಸರಿಯಾದ ಉತ್ತರ ಕೊಟ್ಟು ಕಳುಹಿಸಿದ್ದಾರೆ’ ಎನ್ನುವ ಮೂಲಕ ತಮ್ಮ ನಾಯಕತ್ವ ಅಬಾಧಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ‘ನಾಯಕತ್ವ ಬದಲಾವಣೆ, ಅದಕ್ಕಾಗಿ ಪ್ರಯತ್ನ ನಡೆದಿದೆ ಎಂಬುದು ಗೊತ್ತಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರೊನಾ ಸೋಂಕು ಹತೋಟಿಗೆ ತಂದು ಜನರ ಜೀವ ಸುರಕ್ಷತೆಗಾಗಿ ಸಚಿವ, ಶಾಸಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ’ ಎಂದ ಅವರು ಕರೊನಾ ಸಂಕಷ್ಟ ಕಾಲದಲ್ಲಿ ನಿಭಾಯಿಸಬೇಕಾದ ಜವಾಬ್ದಾರಿ ಏನು ಎನ್ನುವುದನ್ನು ದೆಹಲಿಗೆ ಹೋಗಿದ್ದವರಿಗೆ ಪರೋಕ್ಷವಾಗಿ ಹೇಳಿದರು.

    ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಷಯ ಪ್ರಸ್ತಾಪವಾದಾಗ ಗರಂ ಆದ ಬಿಎಸ್​ವೈ, ಯಾವಾಗ ಏನು ಮಾಡಬೇಕೆಂದು ಗೊತ್ತಿದೆ ಎಂದು ಖಡಕ್ ಆಗಿ ಹೇಳಿದರು. ತೋರಿಕೆಗೆ ಕೆಲವು ವಿಷಯ ಮುಂದಿಟ್ಟುಕೊಂಡು ಕೆಲವರು ದೆಹಲಿಗೆ ಹೋದದ್ದು, ವರಿಷ್ಠರ ಭೇಟಿಗೆ ಕಾಲಾವಕಾಶ ಸಿಗದೆ ನಿರಾಶರಾಗಿದ್ದಾರೆ ಎಂದರು. ಬಿಡುವಿಲ್ಲದ ಕರೊನಾ ನಿರ್ವಹಣೆ ಸಭೆಗಳು, ಓಡಾಟದ ಮಧ್ಯೆ ಪ್ರತಿಯೊಬ್ಬ ಸಚಿವ, ಶಾಸಕರ ನಡೆಯನ್ನು ಬಿಎಸ್​ವೈ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವರಿಷ್ಠರ ಮಟ್ಟದಲ್ಲಿ ಯಾರ್ಯಾರು ಯಾವ ಕಸರತ್ತು ನಡೆಸಿದರೆಂಬ ಮಾಹಿತಿ ಸಿಕ್ಕಿದೆ ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆನ್ನಿಗಿದ್ದಾರೆ ಎಂದು ಬಿಎಸ್​ವೈ ಸೂಚ್ಯವಾಗಿ ಭಿನ್ನಮತೀಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ರಾಜೂಗೌಡ ಸೇರಿ ಹತ್ತಕ್ಕಿಂತ ಹೆಚ್ಚು ಶಾಸಕರು ಸಿ.ಪಿ. ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ.

    ಕಟೀಲ್ ಮೌನ

    ಕರೊನಾ ಸಂದರ್ಭದಲ್ಲಿ ರಾಜಕೀಯ ರಗಳೆ ತೆಗೆದು ಜನರು, ಪಕ್ಷದ ಕಾರ್ಯಕರ್ತರೂ ಸಿಟ್ಟಿಗೇಳುವ ಬೆಳವಣಿಗೆ ನಡೆದರೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತುಟಿಬಿಚ್ಚದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ. ಕರೊನಾ ತೀವ್ರತೆ ಪಡೆದುಕೊಂಡ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ವಿರುದ್ಧ ಸಹಿ ಸಂಗ್ರಹ, ದೆಹಲಿಯಲ್ಲಿ ಲಾಬಿ, ಸರ್ಕಾರದ ವಿರುದ್ಧ ಹೇಳಿಕೆ ಬರುತ್ತಿದ್ದರೂ ತಮಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲವೆಂಬಂತೆ ಕಟೀಲ್ ಅಂತರ ಕಾಯ್ದುಕೊಂಡು ಅಚ್ಚರಿ ಮೂಡಿಸಿದ್ದಾರೆ.

    ಯೋಗೇಶ್ವರ್ ಹೇಳಿದ್ದೇನು?

    – ನಾನು ವೈಯಕ್ತಿಕ ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. 15 ದಿನಗಳ ಹಿಂದೆ ಹಾಗೂ ಒಂದು ವಾರದ ಹಿಂದೆ ದೆಹಲಿಗೆ ಹೋಗಿದ್ದೆ. ಇದಕ್ಕೆ ಇಷ್ಟು ದೊಡ್ಡ ಮಟ್ಟದ ಚರ್ಚೆ ಏಕೆ ಆಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ.

    – ವೈಯಕ್ತಿಕವಾಗಿ ನನಗೆ ಕೆಲವು ವಿಷಯಗಳಲ್ಲಿ ನೋವಾಗಿದೆ. ಹೀಗಾಗಿ ಪಕ್ಷದ ವರಿಷ್ಠರಿಗೆ ಹೇಳಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಕೆಲವು ವಿಷಯಗಳನ್ನು ಚರ್ಚೆ ಮಾಡಿದ್ದೇನೆ.

    – ಪಕ್ಷ ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿಸಿ ಸಚಿವನನ್ನಾಗಿ ಮಾಡಿದೆ. 2023ರ ಚುನಾವಣೆಯಲ್ಲಿ ನಾನು ಮತ್ತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬರಬೇಕು. ಇದಕ್ಕೆ ತಕ್ಕ ವಾತಾವರಣವನ್ನು ಪಕ್ಷ ಹಾಗೂ ಸರ್ಕಾರದಲ್ಲಿ ಮೂಡಿಸಬೇಕು.

    – ಪಕ್ಷದ ಚೌಕಟ್ಟಿನಲ್ಲಿ ಹಲವಾರು ವಿಷಯಗಳನ್ನು ರ್ಚಚಿಸಿದ್ದೇನೆ. ನನಗೆ ನನ್ನದೇ ಆದ ಕೆಲವು ಚಿಂತನೆಗಳಿವೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಕೆಲವು ವಿಷಯಗಳನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ.

    – ರಾಜ್ಯದಲ್ಲಿ ಶುದ್ಧ ಬಿಜೆಪಿ ಸರ್ಕಾರವಿಲ್ಲ. ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರವಿದೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ವಿರೋಧ ಪಕ್ಷಗಳ ಜೊತೆ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ.

    – ನಮ್ಮ ಎದುರಾಳಿ ಪಕ್ಷಗಳ ಜತೆ ನಮ್ಮ ಪಕ್ಷದವರು ಹಾಗೂ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದ್ದು, ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲಬೇಕು. ಹೀಗಾಗಿ, ನನ್ನ ದುಃಖವನ್ನು ತೋಡಿಕೊಂಡಿರುವೆ.

    – ನಾನು ಈಗ ಮಂತ್ರಿಯಾಗಿದ್ದೇನೆ. ನನ್ನ ಇಲಾಖೆಯಲ್ಲಿ ಮಗ ಅಧಿಕಾರ ಚಲಾಯಿಸಲು ನಾನು ಬಿಡುವುದಿಲ್ಲ. ಅದೇ ರೀತಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಬೇರೆಯವರು ಅಧಿಕಾರ ಚಲಾಯಿಸಬಾರದು.

    – ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಪಕ್ಷದ ಚೌಕಟ್ಟಿನೊಳಗೆ ನಾಲ್ಕು ಗೋಡೆಗಳ ಮದ್ಯೆ ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರ ಮುಂದೆ ಕೆಲವು ವಿಷಯಗಳನ್ನು ಹೇಳಿಕೊಂಡಿದ್ದೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts