More

    ಯುವಕರ ತಂಡಕ್ಕೆದಾರಿದೀಪವಾದ ಹೈನುಗಾರಿಕೆ

    ಪುರುಷೋತ್ತಮ ಪೆರ್ಲ ಕಾಸರಗೋಡು
    ಕೋವಿಡ್ -19 ಸಂದರ್ಭ ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ವಾಪಸಾಗಿರುವ ನೆಕ್ರಾಜೆಯ ಅಮ್ಮಂಗಾಲ್ ನಿವಾಸಿ ಹಮೀದ್ ಹಾಗೂ ಅವರ ತಂಡದ ಬದುಕಿಗೆ ಹೈನುಗಾರಿಕೆ ಊರುಗೋಲಾಗುತ್ತಿದೆ.

    ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹಮೀದ್, ಅಶ್ರಫ್, ಮುನೀರ್, ಕಬೀರ್ ಹಾಗೂ ರಫೀಕ್ ಊರಿಗೆ ವಾಪಸಾದ ನಂತರ ಉದ್ಯೋಗಕ್ಕಾಗಿ ಪ್ರಯತ್ನ ನಡೆಸಿ ಕೊನೆಗೆ ಹೈನುಗಾರಿಕೆಯತ್ತ ಒಲವು ತೋರಿಸಿ ‘ಕಾರುಣ್ಯ ಅನಿವಾಸಿ ಸಂಘ’ ಎಂಬ ಹೆಸರಿನಲ್ಲಿ ತಂಡ ರಚಿಸಿದರು. ಜಾನುವಾರು ಸಾಕಣೆ ಆರಂಭಿಸಿ ಪ್ರಸಕ್ತ ಯಶಸ್ಸಿನ ಪಥದತ್ತ ಸಾಗುತ್ತಿದ್ದಾರೆ.

    ಆರಂಭದಲ್ಲಿ ಐದು ಆಡು ಖರೀದಿಸಿ ಸಾಕಿ ಬಳಿಕ ಹಸು ಸಾಕಣೆಯತ್ತ ಗಮನ ಹರಿಸಿದರು. ಜಿಲ್ಲಾ ಪಂಚಾಯಿತಿಯ ಮಿನಿ ಡೇರಿ ಯೂನಿಟ್ ಯೋಜನೆ ಇದಕ್ಕೆ ಪೂರಕವಾಗಿ ಲಭಿಸಿತು. ಐವರಿಗೆ ತಲಾ ಒಂದು ಲಕ್ಷದಂತೆ ಐದು ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ದೊರೆಯುವ ಯೋಜನೆ ಇದು. ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಪಶು ಆಸ್ಪತ್ರೆ ಬೆಂಬಲವೂ ಸಿಕ್ಕಿತು. ಯೋಜನೆಗಾಗಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಎರಡು ತಂಡಗಳಲ್ಲಿ ಕಾರುಣ್ಯ ಮಿನಿ ಡೇರಿ ಘಟಕ ಒಂದು. ಕಾರುಣ್ಯ ಅನಿವಾಸಿ ಸಂಘದ ಸದಸ್ಯ ಹಮೀದ್, ಮಿನಿ ಡೇರಿ ಘಟಕವನ್ನು ಇತರ ನಾಲ್ವರಿಗೆ ವಹಿಸಿಕೊಟ್ಟು ತಾವು ಪ್ರತ್ಯೇಕ ಸ್ವಂತ ಹೈನುಗಾರಿಕೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

    ಜಾನುವಾರುಗಳಿಗೆ ವಿಮೆ: ಅಶ್ರಫ್, ಮುನೀರ್, ಕಬೀರ್ ಹಾಗೂ ರಫೀಕ್ ನೇತೃತ್ವದ ತಂಡ ಯೋಜನೆಯ ಮೊದಲ ಹಂತವಾಗಿ ಸ್ವಂತ ಮತ್ತು ಗುತ್ತಿಗೆಗೆ ಪಡೆದ ಜಾಗದಲ್ಲಿ ಹುಲ್ಲು ಬೆಳೆಯಲು ಆರಂಭಿಸಿ, ಎರಡು ಎಕರೆ ಜಾಗದಲ್ಲಿ ಸೂಪರ್ ನೇಪ್ಪಿಯರ್, ಸಂಪೂರ್ಣ ವಿಭಾಗಗಳ ಹುಲ್ಲು ಬೆಳೆ ಕೈಗೊಂಡರು. ಜೈವಿಕ ತ್ಯಾಜ್ಯಗಳನ್ನು ಹುಲ್ಲು ಬೆಳೆಯುವಲ್ಲಿ ಹರಿದು ಬರುವ ರೀತಿ ಎತ್ತರದ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಜತೆಗೆ ಬಯೋಗ್ಯಾಸ್ ಪ್ಲಾಂಟ್ ಕೂಡ ಇದೆ. ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ವಿಮೆ ಮಾಡಲಾಗಿದೆ.

    ವಿದೇಶದಲ್ಲಿ ಕೆಲಸ ಕಳೆದುಕೊಂಡು ಆತಂಕದ ಮಧ್ಯೆಯೇ ಊರಿಗೆ ವಾಪಸಾಗಿದ್ದೇವೆ. ಕಾರುಣ್ಯ ಅನಿವಾಸಿ ಸಂಘ ಹುಟ್ಟು ಹಾಕಿ ಹೈನುಗಾರಿಕೆ ಆರಂಭಿಸಿದ್ದು, ಹಸುವೊಂದಕ್ಕೆ ಸರಾಸರಿ 15 ಲೀಟರ್‌ನಂತೆ ದಿನಕ್ಕೆ 150 ಲೀಟರ್ ಹಾಲು ಫಾರ್ಮ್‌ನಲ್ಲಿ ಲಭಿಸುತ್ತಿದೆ. ಜತೆಗೆ ಸೆಗಣಿ, ಗೋಮೂತ್ರ ಇತ್ಯಾದಿಗಳ ಆದಾಯವೂ ಬರತೊಡಗಿದೆ. ದನಗಳ ಸಂಖ್ಯೆ ಹೆಚ್ಚಿಸಿ ಫಾರ್ಮ್ ವಿಸ್ತರಿಸುವ ಯೋಜನೆ ಇದೆ.
    ಕಬೀರ್ ಕಾರ್ಯದರ್ಶಿ, ಕಾರುಣ್ಯ ಅನಿವಾಸಿ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts