More

    ಕಾಂಗ್ರೆಸ್ ನಾಯಕರಿಂದ ಕೋವಿಡ್ ಶಿಷ್ಟಾಚಾರ ಉಲ್ಲಂಘನೆ?

    ಮಂಗಳೂರು: ಕರೊನಾದಿಂದ ಮೃತ ಮಹಿಳೆಯ ಅಂತ್ಯಕ್ರಿಯೆ ವೇಳೆ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಸಹಿತ ಹಲವು ಕಾಂಗ್ರೆಸ್ ನಾಯಕರ ಸಮಕ್ಷಮ ಮೃತದೇಹದ ಮುಖದ ಭಾಗದ ಪ್ಯಾಕಿಂಗ್ ತೆರೆದಿರುವುದು ವಿವಾದಕ್ಕೆ ಕಾರಣವಾಗಿದೆ.
    ಕಾಂಗ್ರೆಸ್ ಮುಖಂಡರು ಮೃತದೇಹದ ಸುತ್ತ ನಿಂತಿರುವುದು, ಪಿಪಿಇ ಕಿಟ್ ಇರುವ ಸಿಬ್ಬಂದಿಯೂ ಸುತ್ತ ನಿಂತಿರುವುದು ಹಾಗೂ ಮೃತದೇಹದ ಮುಖಭಾಗದ ಕವರ್ ತೆರೆದಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಕೋವಿಡ್ ಮೃತದೇಹದ ವಿಲೇವಾರಿ ಶಿಷ್ಟಾಚಾರದ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ.

    ಅವರದ್ದೇ ಅಭಿಮಾನಿಗಳ ಫೇಸ್‌ಬುಕ್ ಪುಟದಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಮಂಗಳೂರಿನ ಬೋಳೂರು ಶವಾಗಾರದಲ್ಲಿ ಶುಕ್ರವಾರ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ ಹಾಗೂ ಇತರ ಕೆಲವು ನಾಯಕರೂ ಬೋಳೂರಿನ ಶವಾಗಾರಕ್ಕೆ ತೆರಳಿದ್ದರು. ಅಲ್ಲಿಗೆ ಆಗಮಿಸಿದ ಮೃತದೇಹವನ್ನು ನೆಲದಲ್ಲಿರಿಸಿ ಮುಖದ ಮೇಲಿನ ಕವರ್ ಸರಿಸಿ ಎಲ್ಲರೂ ಅಂತಿಮ ದರ್ಶನ ಪಡೆಯುವುದು, ಬಳಿಕ ಮೃತದೇಹವನ್ನು ಕೊಂಡೊಯ್ಯುವ ದೃಶ್ಯ ಈ ವಿಡಿಯೋದಲ್ಲಿದೆ.
    ಕೋವಿಡ್ ಶಿಷ್ಟಾಚಾರದಂತೆ ಮೃತಶರೀರದ ಕವರ್ ತೆರೆಯುವಂತಿಲ್ಲ, ಆಗಿರುವ ಘಟನೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ತಿಳಿಸುತ್ತಾರೆ.

    ನಾವು ಮೃತದೇಹ ಮುಟ್ಟಿಲ್ಲ, ಖಾದರ್ ಸ್ಪಷ್ಟನೆ
    ಶಾಸಕ ಯು.ಟಿ.ಖಾದರ್ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಶವವನ್ನು ಮುಟ್ಟಿಲ್ಲ, ಪಿಪಿಇ ಕಿಟ್ ಹಾಕಿದವರಷ್ಟೇ ಮುಖ ಭಾಗದ ಕವರ್ ತೆರೆದಿದ್ದಾರೆ, ಮುಖವನ್ನು ನಮಗೆ ತೋರಿಸಿದ್ದಾರೆ. ಸುರಕ್ಷಿತ ಅಂತರದಿಂದ ನಾವು ಅಂತಿಮ ದರ್ಶನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಕೋವಿಡ್ ಶಿಷ್ಟಾಚಾರದಲ್ಲಿ ಬದಲಾವಣೆ ಆಗಬೇಕಿದೆ, ಪೂರ್ತಿ ಮುಚ್ಚುವ ಬದಲು ಮುಖಭಾಗವನ್ನು ತೋರಿಸುವ ಪಾರದರ್ಶಕ ಶೀಟ್‌ನಿಂದ ಸುತ್ತಬೇಕು, ಅದರಿಂದ ಕನಿಷ್ಠ ಮೃತರ ಕುಟುಂಬದವರು ಬಂದು ಅಂತಿಮ ದರ್ಶನ ಪಡೆಯಲು ಸಾಧ್ಯ ಎಂದೂ ಖಾದರ್ ಒತ್ತಾಯಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts