

ಜಲಗಾಂವ್: ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಎಂಟು ದಿನಗಳ ಹಿಂದೆ ನಾಪತ್ತೆಯಾದ, ಭೂಸಾವಲ್ ಮೂಲದ ವೃದ್ಧೆ (82) ಅದೇ ಆಸ್ಪತ್ರೆಯ ಶೌಚಾಲಯದೊಳಗೆ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಜಿಲ್ಲಾಪೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಕ್ಬರ್ ಪಟೇಲ್ ಹೇಳುವಂತೆ, ಜಲಗಾಂವ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಆಕೆಯ ಕುಟುಂಬಸ್ಥರು ಜೂನ್ 2 ರಂದು ಆಕೆ ಕಾಣಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಂತರ ಭೂಸಾವಲ್ನಲ್ಲಿ ಸಂಪೂರ್ಣ ವಿಚಾರಣೆ ನಡೆಸಲಾಗಿತ್ತು. ಆಕೆಯ ಸಂಬಂಧಿಕರ ಸಮ್ಮುಖದಲ್ಲೇ ಎಲ್ಲ ರೋಗಿಗಳ ರೆಜಿಸ್ಟರ್ಗಳನ್ನು ಪರಿಶೀಲಿಸಿದ್ದೂ ಆಗಿತ್ತು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ನಂತರ ಜೂನ್ 6 ರಂದು ದೂರು ದಾಖಲಿಸಿರುವುದಾಗಿ ಪಟೇಲ್ ತಿಳಿಸಿದರು.
ಮೇ 27 ರಂದು ಆ ವೃದ್ಧೆಗೆ ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮೊದಲು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಣೆಯಾದ ಮಾಹಿತಿ ಬಂದ ನಂತರ ತನಿಖೆಗಾಗಿ ಪೊಲೀಸ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು.
ಜೂನ್ 2 ರವರೆಗೆ ಆಕೆ ವಾರ್ಡ್ನಲ್ಲಿ ಕಾಣಿಸಿಕೊಂಡಿದ್ದರೆಂದು ಜಲಗಾಂವ್ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದು, ನಂತರ ಆಕೆ ಎಲ್ಲಿದ್ದಾರೆ ಎಂದು ತಿಳಿದಿರಲಿಲ್ಲ. ಇಂದು ಆಸ್ಪತ್ರೆಯ ಶೌಚಾಲಯವೊಂದರಲ್ಲಿ ದುರ್ವಾಸನೆ ಬಂದಿದ್ದು. ಹೋಗಿ ನೋಡಿದಾಗ ಅಲ್ಲಿ ಮಹಿಳೆಯ ಶವ ಕಂಡುಬಂತು. ಈ ಕುರಿತು ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪಟೇಲ್ ಹೇಳಿದರು.
ಅಜ್ಜಿಯ ಸಾವಿನಿಂದ ಆಕ್ರೋಶಗೊಂಡ ಆಕೆಯ ಮೊಮ್ಮಗ ಈ ಸಾವಿನ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯವಹಿಸಿದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ವೀಡಿಯೋ ಸಂದೇಶ ಕಳುಹಿಸಿ ಮನವಿ ಮಾಡಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಕಾಣೆಯಾದ ಕೋವಿಡ್ -19 ರೋಗಿಗಳು ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ.
ಮಂಗಳವಾರ, ಕೋವಿಡ್ -19 ರೋಗದಿಂದ ಬಳಲುತ್ತಿದ್ದ 80 ವರ್ಷದ ವೃದ್ಧನ ಶವ ಪತ್ತೆಯಾದ ನಂತರ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ತನಿಖೆಗೆ ಆದೇಶಿಸಿದ್ದರು. ಆ ರೋಗಿ ಭಾನುವಾರ ಕಂಡಿವಲಿಯ ಡಾ.ಬಿ.ಆರ್. ಅಂಬೇಡ್ಕರ್ ಶತಾಬ್ದಿ ಆಸ್ಪತ್ರೆಯಿಂದ ಕಾಣಿಯಾಗಿದ್ದು, ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಶವ ಬೋರಿವಲಿ ನಿಲ್ದಾಣದ ಬಳಿ ಪತ್ತೆಯಾಗಿತ್ತು.