More

    ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ: ಮಂಗಳೂರಿನಲ್ಲೂ ಒಮಿಕ್ರಾನ್ ಪರಿಣಾಮ

    ಮಂಗಳೂರು: ಕೆಲದೇಶಗಳಲ್ಲಿ ಕೋವಿಡ್‌ನ ಒಮಿಕ್ರಾನ್ ವೈರಾಣು ಹಾವಳಿ ಹೆಚ್ಚಿರುವುದು ಹಾಗೂ ದೇಶಗಳು ಹಲವು ನಿರ್ಬಂಧಗಳನ್ನು ಹೇರುತ್ತಿರುವ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಆಗುತ್ತಿದೆ. ಒಂದೆರಡು ದಿನಗಳಿಂದ ಪ್ರಯಾಣಿಕರ ಆಗಮನ, ನಿರ್ಗಮನದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

    ‘ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ತಮ್ಮ ಪ್ರಯಾಣವನ್ನು ಅನೇಕರು ರದ್ದು ಮಾಡುತ್ತಿದ್ದಾರೆ ಅಥವಾ ಮುಂದೂಡುತ್ತಿದ್ದಾರೆ. ಇದರಿಂದ ವೈಮಾನಿಕ ಯಾನ ಕ್ಷೇತ್ರದ ಮೇಲೆ ಪರಿಣಾಮ ಕಂಡುಬಂದಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲೂ ಕೆಲದಿನಗಳಿಂದ ಪ್ರಯಾಣಿಕರ ಸಂಖ್ಯೆ ತುಸು ಇಳಿಕೆಯಾಗಿದೆ’ ಎಂದು ಏರ್‌ಲೈನ್‌ವೊಂದರ ಅಧಿಕಾರಿ ತಿಳಿಸಿದ್ದಾರೆ.

    ಹಬ್ಬಕ್ಕೆ ಊರಿಗೆ ಬರಲು ಆತಂಕ: ಮಂಗಳೂರು, ಉಡುಪಿ ಭಾಗದ ಅನೇಕ ಮಂದಿ ವಿದೇಶಗಳಲ್ಲಿದ್ದು, ಕ್ರಿಸ್‌ಮಸ್‌ಗೆ ಊರಿಗೆ ಬರಬೇಕಿತ್ತು. ಈಗ ಒಮಿಕ್ರಾನ್ ಕಾರಣದಿಂದ ಈ ಬಾರಿಯೂ ಹಬ್ಬಕ್ಕೆ ಊರಿಗೆ ಬರುವುದಕ್ಕೆ ಆತಂಕ ಎದುರಾಗಿದೆ. ಅನೇಕರು ಟಿಕೆಟ್ ಬುಕ್ ಮಾಡಿರುವುದನ್ನು ರದ್ದುಪಡಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಊರಿಗೆ ಬರಲಾಗದೆ ಇರುವವರು ಈ ಕ್ರಿಸ್‌ಮಸ್‌ಗೆ ಬರಲೇಬೇಕು ಎಂದುಕೊಂಡವರೂ ಈಗ ಮತ್ತೆ ಯೋಚಿಸುವಂತಾಗಿದೆ.
    ಇನ್ನು ಊರಿಗೆ ಈಗಾಗಲೇ ಬಂದಿರುವ ಕೆಲವೊಂದು ಎನ್‌ಆರ್‌ಐಗಳು ಹಬ್ಬ ಮುಗಿದ ಬಳಿಕ ತೆರಳಬೇಕಾದವರು, ಇಲ್ಲೇ ಉಳಿದರೆ ಮುಂದೆ ಮತ್ತೆ ಕೋವಿಡ್ ಹೆಚ್ಚಿ ನಿರ್ಬಂಧ ಬಂದರೆ ಗಲ್ಫ್‌ಗೆ ಹೋಗಲು ಆಗಲಿಕ್ಕಿಲ್ಲ. ಹಾಗಾದರೆ ಉದ್ಯೋಗಕ್ಕೆ ಕುತ್ತು ಬರಬಹುದು ಎಂದು ತುರ್ತಾಗಿ ತೆರಳುತ್ತಿರುವ ಪ್ರಸಂಗಗಳೂ ಕಂಡುಬಂದಿವೆ.

    ದೇಶದ ವಿವಿಧ ರಾಜ್ಯಗಳ ನಿಯಮಾವಳಿಗಳಲ್ಲಿ ಇರುವ ಗೊಂದಲಗಳಿಂದಾಗಿಯೂ ಜನರಿಗೆ ಅಸ್ಪಷ್ಟತೆ ಉಂಟಾಗಿದೆ. ಹಾಗಾಗಿಯೂ ತಮ್ಮ ಪ್ರಯಾಣವನ್ನು ಮುಂದೂಡುವ ಅಥವಾ ರದ್ದು ಪಡಿಸುವ ಪ್ರವೃತ್ತಿ ಕಾಣುತ್ತಿದೆ.
    – ವಿಮಾನ ಸಂಸ್ಥೆಯೊಂದರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts