More

    ಮೂರು ಹಂತದಲ್ಲಿ ಲಸಿಕೆ ತಾಲೀಮು ; ತುಮಕೂರು ಜಿಲ್ಲೆಯ 7 ಕೇಂದ್ರಗಳಲ್ಲಿ ಡ್ರೈ ರನ್

    ತುಮಕೂರು : ಕರೊನಾ ವ್ಯಾಕ್ಸಿನ್ ವಿತರಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಸಿದ್ಧತೆ ನಡೆಸುವ ಮುನ್ನ ಶುಕ್ರವಾರ ಜಿಲ್ಲೆಯಲ್ಲಿ ಲಸಿಕ ವಿತರಣೆ ತಾಲೀಮು ನಡೆಸಲಾಯಿತು. ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ನೇತೃತ್ವದಲ್ಲಿ ಡ್ರೈರನ್ ನಡೆಯಿತು.

    ಈಗಾಗಲೇ ಹೆಸರು ನೊಂದಾಯಿಸಿದ್ದ 175 ಫಲಾನುಭವಿಗಳು ಡ್ರೈರನ್‌ನಲ್ಲಿ ಭಾಗವಹಿಸಿದ್ದರು. 7 ಕಡೆ ತಲಾ 25 ಜನರಂತೆ ಭಾಗವಹಿಸಿದ್ದು ಬೆಳಗ್ಗೆ 9.30ಕ್ಕೆ ತಾಲೀಮು ಆರಂಭವಾಯಿತು. ಮೊದಲಿಗೆ ಲಸಿಕೆ ಪಡೆಯುವರ ದಾಖಲೆಗಳ ಪರಿಶೀಲನೆ, ನಂತರ ಅಣಕು ಲಸಿಕೆ ವಿತರಣೆ ಹಾಗೂ ವಿಶ್ರಾಂತಿ ಕೊಠಡಿಯಲ್ಲಿ ಅರ್ಧಗಂಟೆ ಅವರನ್ನು ನಿಗಾದಲ್ಲಿಡುವ ಮೂರು ಹಂತಗಳ ತಾಲೀಮು ನಡೆಸಲಾಯಿತು. ಯಾರಿಗೂ ಲಸಿಕೆ ನೀಡಲಿಲ್ಲ.

    ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕರೊನಾ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೋವಿಡ್ ತಂತ್ರಾಂಶದ ಮೂಲಕ ಲಸಿಕೆ ವಿತರಣೆ, ಫಲಾನುಭವಿಗಳಿಗೆ ಸಂದೇಶ, ಮಾಹಿತಿ ನಮೂದಿಸುವ ವ್ಯವಸ್ಥೆ ಸಂಯೋಜಿತಗಳ ಬಗ್ಗೆ ಪರಿಶೀಲಿಸಲಾಯಿತು. ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಮಾತನಾಡಿ, ಜಿಲ್ಲೆಯ 7 ಕೇಂದ್ರಗಳಲ್ಲಿ ಡ್ರೈರನ್ ಮಾಡಲಾಗಿದೆ, ಲಸಿಕೆ ಕೊಡುವ ಮುನ್ನ ಮಾಡಿಕೊಂಡಿರುವ ಸಿದ್ಧತೆಯನ್ನು ಪರಿಶೀಲಿಸಲು ಹಾಗೂ ಅವಶ್ಯಕತೆಯಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.

    ಕೇಂದ್ರ ಸರ್ಕಾರದ ಕೋವಿಡ್ ಪೋರ್ಟಲ್‌ನಲ್ಲಿ ಎಲ್ಲ ಆರೋಗ್ಯ ಕಾರ್ಯಕರ್ತರ ಮಾಹಿತಿ ನಮೂದು ಮಾಡಲಾಗಿದೆ. ಈ ಆಪ್ ಮೂಲಕ ಅವರು ಯಾವಾಗ ಬರಬೇಕು ಎಂಬ ಬಗ್ಗೆ ಸಂದೇಶ ರವಾನೆಯಾಗಲಿದ್ದು, ಆ ಸಮಯಕ್ಕೆ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು, 132 ಸ್ಥಳಗಳಲ್ಲಿ ವ್ಯಾಕ್ಸಿಲೇಷನ್ ಡ್ರೈರನ್ ಮಾಡಲಾಗುತ್ತಿದೆ. ಈಗ ಪೂರ್ವಭಾವಿಯಾಗಿ 7 ಕೇಂದ್ರಗಳಲ್ಲಿ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಡಿಹೆಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಡಾ.ರಜನಿ, ಡಾ.ಕೇಶವರಾಜ್, ಡಾ.ಮೋಹನ್‌ದಾಸ್ ಮತ್ತಿತರರು ಇದ್ದರು.

    7 ಕಡೆಗಳಲ್ಲಿ ಪ್ರಕ್ರಿಯೆ: ಜಿಲ್ಲಾಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ, ನಗರ ಪ್ರಾಥಮಿಕ ಕೇಂದ್ರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಈ ಪ್ರಕ್ರಿಯೆ ಮಾಡಲಾಗುತ್ತಿದ್ದು, ಬದಲಾವಣೆ ಅಗತ್ಯವಿದ್ದರೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದ ಜಿಲ್ಲಾಧಿಕಾರಿ, ಮೊದಲ ಹಂತವಾಗಿ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕೌನ್ಸಿಲಿಂಗ್ ನಡೆಸಿ, ವ್ಯಾಕ್ಸಿನ್ ಕೊಟ್ಟ ನಂತರ ಅರ್ಧ ಗಂಟೆ ವಿಶ್ರಾಂತಿ ಪಡೆಯುವಂತೆ ಸೂಚಿಸಿ ನಿಗಾದಲ್ಲಿರಿಸಲಾಗುವುದು. ನಂತರ ಅವರನ್ನು ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಶುಕ್ರವಾರ ಯಾವುದೇ ರೀತಿಯ ಲಸಿಕೆ ನೀಡಲಿಲ್ಲವಾದರೂ ಪೂರ್ವಭಾವಿ ಸಿದ್ಧತೆ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ ಅಷ್ಟೆ, ಈಗಾಗಲೇ ಲಸಿಕೆಯನ್ನು ಯಾವ ರೀತಿ ಕೊಡಬೇಕು ಎಂಬುದರ ಬಗ್ಗೆಯೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಇರುವ ಕಡೆಗೆ ನಾವೇ ಹೋಗಿ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳುತ್ತೇವೆ.
    ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts