More

    ಅಂತಿಮ ಹಂತದಲ್ಲಿ ಕೋರ್ಟ್ ಕಟ್ಟಡ ಕಾಮಗಾರಿ

    ಕಾರ್ಕಳ: ತಾಲೂಕಿನ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಆಗಸ್ಟ್ ಮೊದಲ ವಾರಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯೊಂದಿಗೆ ಅಹೋರಾತ್ರಿ ಕೆಲಸ ನಡೆಯುತ್ತಿತ್ತು. ಆದರೆ ಕರೊನಾ ವೈರಸ್‌ನಿಂದಾಗಿ ಇಲ್ಲಿ ದುಡಿಯುತ್ತಿದ್ದ ಉತ್ತರ ಭಾರತದ ಬಹುತೇಕ ಕಾರ್ಮಿಕರು ಊರಿಗೆ ಮರಳಿರುವುದರಿಂದ ಕಾಮಗಾರಿ ಮೊಟಕುಗೊಂಡಿತು. ಈಗ ಮತ್ತೆ ಆರಂಭಗೊಂಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆಳುವಾಯಿ ನಜೀರ್ ಸಾಹೇಬ್ ಮುತುವರ್ಜಿಯಿಂದಾಗಿ ಕಾರ್ಕಳದಲ್ಲಿ ನ್ಯಾಯಾಲಯದ ನೂತನ ಕಟ್ಟಡ ಆರಂಭಗೊಂಡಿತ್ತು. ನ್ಯಾಯಾಲಯ ಕಟ್ಟಡಗಳ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತು.

    ನಾಲ್ಕು ನ್ಯಾಯಾಲಯಗಳು ಕಾರ್ಯ ನಿರ್ವಹಿಸುವಂತಹ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿ ಕಟ್ಟಡ 3350 ಚದರ ಮೀಟರ್ ವಿಸ್ತಾರ ಒಳಗೊಂಡಿದೆ. ಇದರಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ಒಳಗೊಂಡಿದೆ.

    ಕಟ್ಟಡ ವಿಶೇಷತೆಗಳು: ನಾಲ್ಕು ನ್ಯಾಯಾಲಯಗಳು, ಕಾರಾಗೃಹ, ಭದ್ರತಾ ಕೊಠಡಿ, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ, ನ್ಯಾಯಾಧೀಶರ ಕಚೇರಿ, ತಾಯಿ-ಮಗುವಿನ ಕೊಠಡಿ, ಲಿಫ್ಟ್, ಜನರೇಟರ್, ಬೋರ್‌ವೆಲ್, ಶುದ್ಧ ಕುಡಿಯುವ ನೀರಿನ ಘಟಕ, ರೆಕಾರ್ಡ್ ರೂಂ, ಶೌಚಗೃಹ, ನ್ಯಾಯಾಲಯ ಹೊರಾಂಗಣದಲ್ಲಿ ಡಾಂಬರು ಕಾರ್ಯ, ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ, ವಿಶ್ರಾಂತಿ ಕೊಠಡಿ ಇವೆ.

    ಪೂರ್ವಾಭಿಮುಖವಾಗಿ ಬದಲಾವಣೆ: ಸರ್ವೆ ನಂಬ್ರ 88/2, ಸರ್ವೇ ನಂಬ್ರ 84/17 ಬಿ 1ರಲ್ಲಿ ಒಟ್ಟು 2.41 ಎಕರೆ ಪ್ರದೇಶದಲ್ಲಿ ಒಳಗೊಂಡಿರುತ್ತದೆ. 1004.04 ಚದರ ಮೀಟರ್ ವಿಸ್ತಾರದಲ್ಲಿ ಪಶ್ಚಿಮಾಭಿಮುಖವಾಗಿ ನ್ಯಾಯಾಲಯದ ಹಳೇ ಕಟ್ಟಡವಿತ್ತು. ನೂತನ ಕಟ್ಟಡವು 1.65 ಎಕರೆ ಪ್ರದೇಶ ವ್ಯಾಪ್ತಿಯೊಳಗೆ ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದೆ.
    ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬೆಳುವಾಯಿ ಅಬ್ದುಲ್ ನಜೀರ್ ಅವರು 2019 ಜೂನ್ 8ರಂದು ನೂತನ ನ್ಯಾಯಾಲಯದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts