More

    ಈ ದಂಪತಿ ಪೊಲೀಸ್ ಸ್ಟೇಷನ್​ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೇಕೆ?

    ಕೊಚ್ಚಿ: ತಮ್ಮ ವಿವಾಹ ವಾರ್ಷಿಕೋತ್ಸವವನ್ನು ದಂಪತಿಗಳು ಅದ್ದೂರಿಯಾಗಿ ತಮ್ಮಿಷ್ಟದ ಜಾಗದಲ್ಲಿ ಆಚರಿಸುತ್ತಾರೆ. ಮದುವೆಯಾದ ದಿನವನ್ನು ಸ್ಮರಣೀಯವಾಗಿ ಆಚರಿಸಲೆಂದೇ ವಿದೇಶಕ್ಕೆ ತೆರಳುವವರೂ ಇದ್ದಾರೆ. ಆದರೆ ಈ ದಂಪತಿ ಮಾತ್ರ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿದ್ದಾರೆ. ಇವರಿಬ್ಬರ ಸಂತಸದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿಯೂ ಪಾಲ್ಗೊಂಡಿದ್ದಾರೆ.

    ಕಳೆದ ಎಂಟು ವರ್ಷಗಳ ಹಿಂದೆ ಅಭಿಲಾಷ್ ಮುರಳೀಧರನ್ ಎಂಬಾತ ಮಾಯಾಮೋಲ್ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿ ನೇರವಾಗಿ ವಕಥನಂ ಪೊಲೀಸ್ ಠಾಣೆಗೆ ಬಂದಿತ್ತು. ಬಂದವನೇ, ಮಾಯಾಮೋಲ್ ಮನೆಯವರು ನಮ್ಮನ್ನು ವಿರೋಧಿಸುತ್ತಿದ್ದಾರೆ. ಅವರ ವಿರೋಧದ ನಡುವೆಯೂ ನಾವು ಒಬ್ಬರಿಗೊಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದೇವೆ. ನಮಗೆ ಯಾವುದೇ ತೊಂದರೆ ಕೊಡದಂತೆ ಅವರಿಗೆ ತಿಳಿಹೇಳಿ ಎಂದು ಅಭಿಲಾಷ್ ಪೊಲೀಸರಲ್ಲಿ ಸಹಾಯ ಕೇಳಿದ್ದ.

    ಅಭಿಲಾಷ್​ನ ಕೋರಿಕೆಯಂತೆ ಪೊಲೀಸರು ಮಾಯಾಮೋಲ್​ಳ ಮನೆಯವರಿಗೆ ಇವರ ವಿವಾಹದ ಬಗ್ಗೆ ತಿಳಿಹೇಳಿದ್ದರು. ಹೀಗಾಗಿ ಇವರಿಬ್ಬರ ವಿವಾಹ ವಿಚಾರವಾಗಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಇದರಿಂದ ಪತ್ನಿಯೊಂದಿಗೆ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಅಭಿಷೇಕ್​ಗೆ ಸಾಧ್ಯವಾಗಿತ್ತು.

    ಮಾಯಾಮೋಲ್ ಮತ್ತು ಅಭಿಲಾಷ್ ವಿವಾಹವಾಗಿ ಎಂಟು ವರ್ಷಗಳೇ ಕಳೆದಿದ್ದು, ಇಬ್ಬರು ಪುತ್ರರಿದ್ದಾರೆ. ಇದಕ್ಕಿಂತಲೂ ವಿಶೇಷವೆಂದರೆ ಅಂದು ಸಹಾಯಕೋರಿ ಬಂದಿದ್ದ ಪೊಲೀಸ್ ಠಾಣೆಯ ಡ್ರೈವರ್ ಆಗಿ ಇಂದು ಅಭಿಲಾಷ್ ಕಾರ್ಯನಿರ್ವಹಿಸುತ್ತಿದ್ದಾನೆ. ಮಯಾಮೋಲ್ ವೆಲ್ಲುತುರುತಿ ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಲಾಷ್, ನಾವಿಂದು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ವಕಥನಂ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಹೀಗಾಗಿ ಅವರ ಜತೆಗೆ ನಮ್ಮ ವಿವಾಹ ವಾರ್ಷಿಕೋತ್ಸವನನ್ನು ಆಚರಿಸಿದ್ದೇನೆ. ನಾವು ಮದುವೆಯಾಗುತ್ತಿದ್ದಂತೆ ಪತ್ನಿಯ ಮನೆಯವರು ಮುನಿಸಿಕೊಂಡಿದ್ದರು. ಆದರೆ ವಿವಾಹವಾಗಿ ಮೂರು ತಿಂಗಳು ಕಳೆಯುತ್ತಿದ್ದಂತೆ ನಮ್ಮ ನಿರ್ಧಾರವನ್ನು ಬೆಂಬಲಿಸಿದರು ಎಂದು ಹೇಳಿಕೊಂಡಿದ್ದಾನೆ.

    ಅಭಿಲಾಷ್ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿದ್ದರೆ, ಅದೇ ಬಸ್ಸಿನಲ್ಲಿ ಮಾಯಾ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಆದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರು ಪರಸ್ಪರ ನಿರ್ಧರಿಸಿಕೊಂಡು 2014ರಲ್ಲಿ ವಿವಾಹವಾಗಿದ್ದರು. ಇದಾಗಿ 2017ರಲ್ಲಿ ಅಭಿಲಾಷ್ ಪೊಲೀಸ್ ಇಲಾಖೆಗೆ ಡ್ರೈವರ್ ಆಗಿ ಸೇರಿಕೊಂಡಿದ್ದಾನೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts