More

    ಶೀತ, ಜ್ವರ, ಗಂಟಲು ನೋವು ವ್ಯಾಪಕ, ಹವಾಮಾನ ವೈಪರೀತ್ಯ ಎಫೆಕ್ಟ್

    ಹರೀಶ್ ಮೋಟುಕಾನ ಮಂಗಳೂರು

    ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ನಡುವೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶೀತ, ಜ್ವರ, ಗಂಟಲು ನೋವು, ಕೆಮ್ಮು ವ್ಯಾಪಕವಾಗಿ ಹರಡುತ್ತಿದ್ದು, ಮಕ್ಕಳು, ಹಿರಿಯರೆನ್ನದೆ ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಪ್ರಸ್ತುತ ವೈದ್ಯರ ಬಳಿ ಶೀತ, ಜ್ವರಕ್ಕೆಂದು ಔಷಧ ಪಡೆಯುತ್ತಿರುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
    ಬದಲಾಗುತ್ತಿರುವ ಹವಾಮಾನ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಿಸುತ್ತದೆ. ಹೆಚ್ಚಾಗಿ ತೊಂದರೆ ನೀಡುವುದು ಶೀತ, ಜ್ವರ ಹಾಗೂ ಗಂಟಲು ನೋವು. ಶೀತದೊಂದಿಗೆ ಗಂಟಲು ನೋವು ಆರಂಭವಾದರೆ ಒಂದು ವಾರದ ತನಕ ಕಡಿಮೆಯಾಗುವುದಿಲ್ಲ. ಇದರಿಂದ ಸುಸ್ತು, ನಿತ್ರಾಣ ಉಂಟಾಗಿ ಮಲಗಿಕೊಂಡೇ ವಿಶ್ರಾಂತಿ ಪಡೆಯಬೇಕಾಗಿದೆ.

    ಸಾಮಾನ್ಯವಾಗಿ ಜನವರಿ ಹಾಗೂ ಫೆಬ್ರವರಿ ಆರಂಭದ ಅವಧಿ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗುವ ಕಾಲ. ಈ ಅವಧಿಯಲ್ಲಿ ದಿನದಿಂದ ದಿನಕ್ಕೆ ಚಳಿ ಕಡಿಮೆಯಾಗುತ್ತದೆ. ದಿನವಿಡೀ ವಾತಾವರಣ ತಂಪಾಗಿರುತ್ತದೆ. ಬ್ಯಾಕ್ಟೀರಿಯಾ, ವೈರಸ್‌ಗಳಿಗೆ ಬದುಕಲು ಈ ವಾತಾವರಣ ಪೂರಕ. ಈ ಸಮಯದಲ್ಲಿ ಅವುಗಳ ವಂಶಾಭಿವೃದ್ಧಿಯೂ ಹೆಚ್ಚಾಗುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ, ವೈರಸ್‌ಗಳು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಮೂಲಕ ಶೀತ, ಗಂಟಲು ನೋವು, ಕೆಮ್ಮು, ಜ್ವರ ಕಾಣಿಸಿಕೊಂಡು ಒದ್ದಾಡುವಂತೆ ಮಾಡುತ್ತಿವೆ.

    ನಿಯಂತ್ರಣ ಹೇಗೆ?: ಕುದಿಸಿ ಆರಿಸಿದ ಶುದ್ಧ ನೀರನ್ನೇ ಸೇವಿಸಬೇಕು. ರಾತ್ರಿ ಹಾಗೂ ಬೆಳಗ್ಗಿನ ಜಾವ ವಾಕಿಂಗ್, ಸೈಕ್ಲಿಂಗ್ ಹೋಗುವ ಅಭ್ಯಾಸ ಇರುವವರು ತಲೆ, ಕಿವಿ ಮುಚ್ಚುವ ಟೊಪ್ಪಿ ಧರಿಸಬೇಕು. ಇಬ್ಬನಿ ಸೋಂಕದಂತೆ ಎಚ್ಚರ ವಹಿಸಬೇಕು. ಐಸ್‌ಕ್ರೀಂ, ತಂಪು ಪಾನೀಯ ಸೇವನೆ ಮಾಡದೆ ಇರುವುದು ಉತ್ತಮ. ಹೆಚ್ಚು ಖಾರ ಸೇವನೆ ಮಾಡದಿರುವುದು ಒಳ್ಳೆಯದು. ಬಿಸಿ ಬಿಸಿಯಾದ ಆಹಾರ ಸೇವನೆ ಉತ್ತಮ ಎನ್ನುತ್ತಾರೆ ವೈದ್ಯರು.

    ಮನೆ ಔಷಧ ಏನು?:  ಶೀತ, ಗಂಟಲು ನೋವಿಗೆ ಹೆಚ್ಚಿನ ಮಂದಿ ವೈದ್ಯರ ಬಳಿಗೆ ಹೋಗುವುದು ಕಡಿಮೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮನೆ ಮದ್ದು ಮಾಡುವವರೇ ಅಧಿಕ. ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿಗೆ ಮುಕ್ತಿ ದೊರೆಯುತ್ತದೆ. ಉಪ್ಪು ನೀರಲ್ಲಿ ಸೋಂಕು ನಿರೋಧಕ ಇರುವುದರಿಂದ ದಿನದಲ್ಲಿ ನಾಲ್ಕು ಬಾರಿ ಹೀಗೆ ಮಾಡುವುದರಿಂದ ನೋವು ಉಪಶಮನವಾಗುತ್ತದೆ. ಗಂಟಲು ನೋವಿಗೆ ಜೇನು ಕೂಡಾ ಉತ್ತಮ ಔಷಧ. ಒಂದು ಲೋಟ ನೀರಿಗೆ ಎರಡು ಟೇಬಲ್ ಸ್ಪೂನ್‌ಗಳಷ್ಟು ಜೇನು ಸೇರಿಸಿ ದಿನಕ್ಕೆ ಐದಾರು ಬಾರಿ ಸೇವಿಸಿದರೆ ಶೀತ, ಗಂಟಲು ನೋವಿನಿಂದ ಮುಕ್ತಿ ದೊರೆಯುತ್ತದೆ.
    ಗಂಟಲು ನೋವಿನಿಂದ ನಿತ್ರಾಣರಾಗಿದ್ದರೆ ಮಲಗುವ ಮುನ್ನ ಜೇನನ್ನು ಸೇವಿಸಿ. ಲಿಂಬೆ ಕೂಡ ಗಂಟಲು ಸೋಂಕಿಗೆ ಉತ್ತಮ ಸಿದ್ಧೌಷಧ. ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಲಿಂಬೆಯ ತುಂಡಿಗೆ ಚಿಮುಕಿಸಿ ನಂತರ ಲಿಂಬೆಯನ್ನು ಚಪ್ಪರಿಸಬೇಕು. ಲಿಂಬೆಯ ರಸವನ್ನು ಬಿಸಿ ನೀರಿನೊಂದಿಗೆ ಮಿಶ್ರ ಮಾಡಿಕೊಂಡು ಬಾಯಿ ಮುಕ್ಕಳಿಸುವುದರಿಂದಲೂ ನೋವು ಶಮನವಾಗುತ್ತದೆ.

    ಸೆಕೆ ಮತ್ತು ಚಳಿ ವಾತಾವರಣದಿಂದ ಕಫ, ಶೀತ, ವೈರಲ್ ಜ್ವರ ಪ್ರಕರಣ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಜ್ವರ ಇದ್ದವರು ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದಾರೆ. ಬಹಳ ಮಂದಿಯಲ್ಲಿ ನೆಗೆಟಿವ್ ಬರುತ್ತಿದೆ. ವೈರಲ್ ಜ್ವರ, ಶೀತ, ಕೆಮ್ಮು ಇನ್ನೊಬ್ಬರಿಗೆ ಬೇಗನೆ ಹರಡುವುದರಿಂದ ಮುಂಜಾಗ್ರತೆ ಕ್ರಮಕೈಗೊಳ್ಳುವುದು ಅತಿ ಅಗತ್ಯ.

    ಡಾ. ಮಧುಸೂಧನ ನಾಯಕ್, ಜಿಲ್ಲಾ ಶಸ್ತ್ರಚಿಕಿತ್ಸಕರು, ಉಡುಪಿ

    ಇದು ಶೀತ, ಕೆಮ್ಮು, ಜ್ವರ, ಗಂಟಲು ನೋವು ಹರಡುವ ಕಾಲ. ಬಹುತೇಕ ರೋಗಿಗಳು ಈಗ ಇದೇ ಸಮಸ್ಯೆಯಿಂದ ಬಳಲುತ್ತಿದ್ದು, ಔಷಧಕ್ಕೆಂದು ಬರುತ್ತಿದ್ದಾರೆ. ಬ್ಯಾಕ್ಟೀರಿಯಾ, ವೈರಸ್‌ಗಳಿಗೆ ಈಗಿನ ತಾಪಮಾನ ಬದುಕಲು ಪೂರಕ. ರೋಗಾಣುಗಳು ತ್ವರಿತವಾಗಿ ಪರಸ್ಪರ ಹರಡುತ್ತದೆ. ಮುಂಜಾಗ್ರತೆ ಹಾಗೂ ಔಷಧೋಪಚಾರ ಮಾಡಿದರೆ ಕಡಿಮೆಯಾಗುತ್ತದೆ.

    ಡಾ.ಭಾನುಮತಿ, ವೈದ್ಯೆ, ಯೆಯ್ಯಡಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts