More

    ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣಕ್ಕಿಲ್ಲ ಶೌಚಗೃಹ

    ಹಟ್ಟಿಚಿನ್ನದಗಣಿ: ಪಟ್ಟಣದ ಅಧಿಸೂಚಿತ ಪ್ರದೇಶ ಸಮಿತಿ ಕ್ಯಾಂಪ್‌ನ ಬಸ್ ನಿಲ್ದಾಣದಲ್ಲಿ ಶೌಚಗೃಹವಿಲ್ಲದೆ ಜನ ಪರದಾಡುವಂತಾಗಿದೆ.
    ದೇಶಕ್ಕೆ ದೇಶವೇ ಸ್ವಚ್ಛ ಭಾರತ ಅಭಿಯಾನ ಸಾರಿ ಶೌಚಗೃಹ ನಿರ್ಮಿಸಲು ಆದ್ಯತೆ ನೀಡುತ್ತಿದ್ದರೆ, ಹಟ್ಟಿ ಕ್ಯಾಂಪಿನಲ್ಲಿ ಮಾತ್ರ ಅದು ತಮಗೆ ಸಂಬಂಧವಿಲ್ಲವೆಂಬಂತೆ ಸ್ಥಳೀಯ ಅಧಿಸೂಚಿತ ಪ್ರದೇಶ ಸಮಿತಿ ಆಡಳಿತ ವರ್ತಿಸುತ್ತಿದೆ.

    ಕ್ಯಾಂಪ್ ಬಸ್ ನಿಲ್ದಾಣದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಅಂಚೆಕಚೇರಿ, 3 ರಾಷ್ಟ್ರೀಕೃತ ಬ್ಯಾಂಕುಗಳು, ಪೊಲೀಸ್ ಠಾಣೆ ಇತರ ಪ್ರಮುಖ ಕಚೇರಿಗಳಿವೆ. ಇಷ್ಟು ಜನ ಸಂದಣಿಯಿದ್ದರೂ ಒಂದು ಶೌಚಗೃಹ ಇಲ್ಲದಿರುವುದು ವಿಪರ್ಯಾಸವೇ ಸರಿ.

    ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಪಕ್ಕ ಅಧಿಸೂಚಿತ ಪ್ರದೇಶದ ಅನುದಾನದಲ್ಲಿ ಮೂತ್ರಾಲಯ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿ, ಅಸಮರ್ಪಕ ನಿರ್ವಹಣೆ, ನೀರಿನ ಸಂಪರ್ಕವಿಲ್ಲದೆ ಅದು ಹಾಳಾಗಿದೆ. ಇದರ ದುರಸ್ತಿಗಾಗಲಿ ಅಥವಾ ಹೊಸ ಶೌಚಗೃಹ ನಿರ್ಮಾಣಕ್ಕೆ ಅಧಿಸೂಚಿತ ಪ್ರದೇಶ ಆಡಳಿತ ಕೈಹಾಕಿಲ್ಲ.

    ಪುರುಷರಿಗೆ ಗೋಡೆಗಳೇ ಆಸರೆ

    ಶೌಚಗೃಹವಿಲ್ಲದ ಕ್ಯಾಂಪಿನ ಬಸ್ ನಿಲ್ದಾಣ ಸುತ್ತಲಿನ ಅಂಗಡಿ ಮುಂಗಟ್ಟುಗಳ ಗೋಡೆ-ಸಂದುಗೊಂದುಗಳೇ ಮೂತ್ರಾಲಯಗಳಾಗಿ ಮಾರ್ಪಟ್ಟಿವೆ. ಇನ್ನು ಶೌಚಕ್ಕೆ ಹೋಗಬೇಕೆಂದರೆ 2ಕಿಮೀ ಕ್ರಮಿಸಿ ಹಳೇ ಬಸ್ ನಿಲ್ದಾಣ ತಲುಪುವ ಪರಿಸ್ಥಿತಿ ಇದೆ. ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ಕೂಡಲೆ ಮುಖ್ಯಾಧಿಕಾರಿಗಳು ಕ್ಯಾಂಪಿನ ಬಸ್ ನಿಲ್ದಾಣ ಬಳಿ ಶೌಚಗೃಹ ನಿರ್ಮಿಸಬೇಕೆಂಬುದು ಸಾರ್ವಜನೀಕರ ಆಗ್ರಹವಾಗಿದೆ.

    ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ ಹಟ್ಟಿಯಲ್ಲಿದ್ದೂ ಇಲ್ಲದಂತಾಗಿದೆ. ಒಂದು ರೂ.ಅನುದಾನವಿಲ್ಲ. ಒಂದೂ ಅಭಿವೃದ್ಧಿ ಕಾರ್ಯವಿಲ್ಲ, ಕನಿಷ್ಠ ಬಸ್ ನಿಲ್ದಾಣದಲ್ಲಿ ಶೌಚಗೃಹ ನಿರ್ಮಿಸಿಕೊಡುವಷ್ಟು ಕಾಳಜಿಯನ್ನು ಮುಖ್ಯಾಧಿಕಾರಿ ತೋರಿಸುತ್ತಿಲ್ಲ. ಕಚೇರಿ ಅಧಿಕಾರಿಗಳು, ಸಿಬ್ಬಂದಿಯನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ.
    ಶಿವು ಹರ್ಷಾ ನಿವಾಸಿ
    ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯಲ್ಲಿ ರಸ್ತೆ, ಶೌಚಗೃಹ, ಕುಡಿವ ನೀರು ಇತರ ಸೌಕರ್ಯ ಒದಗಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು, ಕ್ಯಾಂಪ್ ಪ್ರದೇಶದಲ್ಲಿರುವ ಶೌಚಗೃಹ ದುರಸ್ತಿ ಹಾಗೂ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಕ್ರಮಕೈಗೊಳ್ಳಲಾಗುವುದು.
    ಜಗನ್ನಾಥ್ ಕುಲಕರ್ಣಿ
    ಪಪಂ ಹಾಗೂ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಯ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts