More

    ಮಳೆ ಅಬ್ಬರಕ್ಕೆ ಹಾಳಾದ ಹತ್ತಿ ಬೆಳೆ

    ಶಿರಹಟ್ಟಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಮಾಚೇನಹಳ್ಳಿ, ರಣತೂರ, ಭಾವನೂರ, ನವೇಭಾವನೂರ ಗ್ರಾಮ ವ್ಯಾಪ್ತಿಯಲ್ಲಿ ಹತ್ತಿ ಬೆಳೆ ನಾಶವಾಗಿದೆ.

    ಸಕಾಲಕ್ಕೆ ಮುಂಗಾರು ಮಳೆಯಾಗದಿದ್ದರಿಂದ ಹಂಗಾಮಿನಲ್ಲಿ ಹೆಸರು ಬೆಳೆ ಬೆಳೆಯಲಾಗಲಿಲ್ಲ. ಸಂಕಷ್ಟ ಪರಿಸ್ಥಿತಿಯಲ್ಲೂ ರೈತರು ಹೆಸರು ಬಿಟ್ಟು ಹತ್ತಿ, ಗೋವಿನಜೋಳ ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಗೊಬ್ಬರ, ಔಷಧ ಸಿಂಪಡಿಸಿದ್ದರಿಂದ ಹತ್ತಿ ಬೆಳೆ ಉತ್ತಮವಾಗಿತ್ತು. ಜತೆಗೆ ಈಗಾಗಲೇ ಕಾಯಿ ಬಿಟ್ಟಿದ್ದವು. ಆದರೆ, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಯಿ ಕಪ್ಪುಬಣ್ಣಕ್ಕೆ ತಿರುಗಿವೆ. ಜತೆಗೆ ಕಾಯಿಗಳು ನೆಲಕ್ಕೆ ಉದುರುತ್ತಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

    ಮತ್ತೊಂದೆಡೆ ಫಲಭರಿತ ಮಾಗಿದ ಕಾಯಿಯಿಂದ ತೊಳೆ ಹೊರ ಬರಲಾರಂಭಿಸಿದ್ದು ಅದೂ ಸಹ ನೀರು ಪಾಲಾಗುತ್ತಿದೆ. ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಟ್ಟಾರೆ ಅತಿವೃಷ್ಟಿ ಹಾವಳಿಗೆ ಸಿಲುಕಿದ ರೈತರ ಪರಿಸ್ಥಿತಿ ಅಧೋಗತಿಯಾಗಿದೆ.

    ಪರಿಹಾರಕ್ಕೆ ಆಗ್ರಹ

    ಮುಂಗಾರು ಮಳೆ ಕೊರತೆಯಿಂದಾಗಿ ರೈತರು ಹೆಸರು ಬೆಳೆ ಬದಲಾಗಿ ಧೈರ್ಯ ಮಾಡಿ ಹತ್ತಿ, ಗೋವಿನಜೋಳ ಬಿತ್ತನೆ ಮಾಡಿದ್ದಾರೆ. ಕಾಯಿ ಬಿಡುವ ಹಂತದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಾಯಿ ಕಪ್ಪುಬಣ್ಣಕ್ಕೆ ತಿರುಗಿ ಕೊಳೆಯಲಾರಂಭಿಸಿದೆ. ಇದರಿಂದ ಹತ್ತಿ ಫಸಲು ರೈತರ ಕೈ ಸೇರುವ ಲಕ್ಷಣ ಕಾಣುತ್ತಿಲ್ಲ. ಬೆಳೆನಾಶದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಪರಿಹಾರ ವಿತರಿಸಬೇಕು ಎಂದು ಮಾಚೇನಹಳ್ಳಿ ಗ್ರಾಮದ ರೈತ ಶಂಕರ ಮರಾಠೆ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts