More

    ಗಿರಿಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಪ್ರವೇಶ ನಿಷೇಧ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದು ವಾರದಿಂದ ವರುಣನ ಅರ್ಭಟ ಮುಂದುವರಿದಿದ್ದು ಬೆಳೆ, ಮನೆ ಹಾನಿ ಸಂಭವಿಸುತ್ತಿವೆ. ಮಲೆನಾಡು ಭಾಗದಲ್ಲಿ ಮಳೆ ಅಬ್ಬರಕ್ಕೆ ನದಿ, ತೊರೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು ತಾಲೂಕಿನ ಗಿರಿಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜತೆಗೆ ಪ್ರವಾಸಿಗರು ಜಿಲ್ಲೆಯ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಿಕೊಳ್ಳುವಂತೆ ತಿಳಿಸಿದೆ.

    ತುಂಗಾ, ಭದ್ರಾ, ಹೇಮಾವತಿ ನದಿ ಸೇರಿದಂತೆ ಜಿಲ್ಲೆಯ ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿವೆ. ಜನರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯಬಾರದು, ಹೋಂ ಸ್ಟೆ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ.
    ಮಳೆ ಅಬ್ಬರಕ್ಕೆ ಕೆಲವು ಕಡೆ ನದಿ ಅಕ್ಕಪಕ್ಕದ ಕೃಷಿ ಜಮೀನಿಗೆ ನೀರು ನುಗ್ಗಿದ್ದು, ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರು ಭಾಗದಲ್ಲಿ ಮಳೆ ಆರ್ಭಟ ಜೋರಾಗಿಯೇ ಇದೆ. ಕಡೂರು, ತರೀಕೆರೆ, ಬೀರೂರು, ಸಖರಾಯಪಟ್ಟಣ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ.
    ಹೇಮಾವತಿ, ಭದ್ರಾ, ತುಂಗಾ, ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿವೆ. ನೀರಿನ ಹರಿವಿನ ಮಟ್ಟ ಹೆಚ್ಚಾಗಿರುವುದರಿಂದ ಅಕ್ಕಪಕ್ಕದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಿದೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ತುಂಗಾ ನದಿ ನೀರು ಕೃಷಿ ಜಮೀನಿಗೆ ನುಗ್ಗಿ ಹಾನಿಯಾಗಿದೆ. ಸತತವಾಗಿ ಮಳೆಯಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗುತ್ತಲೇ ಇದೆ.
    ಕೆಲ ಕಡೆ ಗುಡ್ಡಗಳು ಕುಸಿದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿವಿಧ ಕಾರ್ಯಕ್ರಮಗಳ ನಿಮಿತ್ತ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸಿರುವ ಸಾರ್ವಜನಿಕರು ಅಶ್ರಯಪಡೆದುಕೊಳ್ಳಲು ಪರದಾಡುವಂತಾಗಿದೆ.
    ತಾಲೂಕುವಾರು ವಿಪತ್ತು ನಿರ್ವಹಣಾ ಸಮಿತಿಗಳು ಮಳೆ ಹಾನಿ ಸ್ಥಳಗಳನ್ನು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಪ್ರತಿದಿನ ವರದಿ ಸಲ್ಲಿಸುತ್ತಿವೆೆ. ಯಾವುದೇ ಪ್ರಾಣ ಹಾನಿ ಸಂಭವಿಸಿದಾಗ ಅಥವಾ ವಾಸದ ಮನೆಗಳು, ಸರ್ಕಾರಿ ಶಾಲಾ ಕಟ್ಟಡಗಳು ಕುಸಿದಾಗ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುತ್ತಿದ್ದಾರೆ.
    ಹೆಚ್ಚು ಮಳೆಯಾಗುತ್ತಿರುವ ಪ್ರದೇಶದ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
    ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಮಳೆ ಅನಾಹುತದ 75 ಸ್ಥಳಗಳನ್ನು ಗುರುತಿಸಿದ್ದು, ಕೆಲ ಭಾಗಗಳಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
    ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದ ಕೆಲ ಕಡೆ ಗುಡ್ಡ ಕುಸಿದಿದ್ದು ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಒಂದೂವರೆ ತಾಸಿಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಗುಡ್ಡ ಕುಸಿತದಿಂದ ರಸ್ತೆಗೆ ಬಿದ್ದಿದ್ದ ಕಲ್ಲು, ಮಣ್ಣು ತೆರವುಗೊಳಿಸಿದ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಗಿರಿಭಾಗಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಪಾಂಡವರವಳ್ಳಿ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಾಗಿ ಮಳೆಯಾಗುತ್ತಿರುವ ಕಾರಣದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ಮುಂದೂಡುವಂತೆ ಎಸ್ಪಿ ಉಮಾ ಪ್ರಶಾಂತ್ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts