More

    ಕರಾವಳಿ ಪ್ರಾಧಿಕಾರ ಮೇಲ್ದರ್ಜೆಗೆ ಚಿಂತನೆ

    ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಯೋಜನೆ, ಸಾಂಖ್ಯಿಕ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.
    ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಶುಕ್ರವಾರ ಮಂಗಳೂರಿನಲ್ಲಿ 2 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು.

    ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮೂರು ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗುತ್ತಿವೆ. ಪ್ರಾಧಿಕಾರಕ್ಕೆ ಇನ್ನಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಮಂಡಳಿ ರಚಿಸುವ ಚಿಂತನೆ ನಡೆಯುತ್ತಿದೆ ಎಂದರು.

    ಕರಾವಳಿಯ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಮಂಗಳೂರಿಗೆ ಹೆಚ್ಚಿನ ಕ್ರೀಡಾ ಸೌಲಭ್ಯ ನೀಡಲು ಸರ್ಕಾರ ಗಮನ ಹರಿಸಬೇಕು, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ನೀಡಲು ಸರ್ಕಾರ ಯೋಜನೆ ಜಾರಿಗೆ ತರಬೇಕು. ಕ್ಯಾಬಿನೆಟ್ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ವಿನಂತಿಸಿದರು.
    ತರಬೇತುಗೊಂಡ ಎಸ್‌ಸಿ ಎಸ್‌ಟಿ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾವಸತಿ ನಿಲಯ ಕ್ರೀಡಾಪಟುಗಳಿಗೆ ಕ್ರೀಡಾ ಪರಿಕರಗಳ ಕಿಟ್ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ದಿವಾಕರ ಪಾಂಡೇಶ್ವರ, ಉಪಮೇಯರ್ ವೇದಾವತಿ, ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ರೀಡಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿ, ಪ್ರಭಾಕರ ಎಲ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    500 ಕೋಟಿ ರೂ.ಗೆ ಬೇಡಿಕೆ: ಅತ್ರಾಡಿ-ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿಗೆ ಶಕ್ಯತಾ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಂಗಳೂರು-ಕಾರವಾರ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ 780 ಕೋಟಿ ರೂ. ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರಾವಳಿ ಜಿಲ್ಲೆಗಳಲ್ಲಿ 46 ಮೀನು ಮಾರುಕಟ್ಟೆ, ಕಾಲುಸಂಕಗಳನ್ನು ನಿರ್ಮಿಸಲಾಗಿದೆ. ಒಟ್ಟು 834 ಕೋಟಿ ರೂ.ಗಳಲ್ಲಿ 166 ಕಾಮಗಾರಿಗಳ ಪೈಕಿ 69 ಕೆಲಸ ಪೂರ್ತಿಯಾಗಿದ್ದು, 97 ಪ್ರಗತಿಯಲ್ಲಿವೆ. ಮುಂದಿನ ಬಜೆಟ್‌ನಲ್ಲಿ ಪ್ರಾಧಿಕಾರಕ್ಕೆ 500 ಕೋಟಿ ರೂ. ಅನುದಾನ ನೀಡಬೇಕೆಂದು ವಿನಂತಿಸಿದರು.

    ರಾಜ್ಯದಲ್ಲಿ 2.5 ಕೋಟಿ ಯುವಜನರಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಉತ್ತುಂಗದ ಸಾಧನೆ ಮಾಡಬೇಕು ಎಂಬುದು ಸರ್ಕಾರದ ಆಶಯ. ಕ್ರೀಡೆಗೆ ಅಗತ್ಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ಕ್ರೀಡಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು.
    ಕೆ.ಸಿ.ನಾರಾಯಣ ಗೌಡ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ

    ಪೂರ್ತಿ ಅನುದಾನ ಬಳಸಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರಾದ ಅನುದಾನವನ್ನು ಪೂರ್ತಿಯಾಗಿ ಬಳಸಿ. ಎಲ್ಲ ಕಾಮಗಾರಿಗಳನ್ನೂ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸದರ ಹಾಗೂ ಶಾಸಕರ ಅನುದಾನ ಇಲಾಖೆಯಲ್ಲಿ ಉಳಿಕೆಯಾಗಿರುವುದು ವಿವಿಧ ಜಿಲ್ಲೆಗಳಲ್ಲಿ ಕಂಡುಬಂದಿದೆ. ದ.ಕ ಜಿಲ್ಲೆಯಲ್ಲಿ 26 ಕೋಟಿ ರೂ.ಅನುದಾನ ಪೂರ್ತಿ ಬಳಕೆಯಾಗಿಲ್ಲ. ಕಾಮಗಾರಿಗಳು ಬಹುತೇಕ ಮುಕ್ತಾಯ ಹಂತದಲ್ಲಿದೆ. ಬೇಗನೆ ಕಾಮಗಾರಿ ಪೂರ್ತಿಗೊಳಿಸಬೇಕು. ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಪೂರಕ ಕ್ರೀಡಾ ಸೌಲಭ್ಯ ಒದಗಿಸಲು ಇಲಾಖೆ ಆದ್ಯತೆ ನೀಡಿದೆ ಎಂದರು.
    ಶಾಸಕ ಡಿ.ವೇದವ್ಯಾಸ ಕಾಮತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

    ಹೈಟೆಕ್ ಮೀನು ಪಾರ್ಕ್: ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕರಾವಳಿಯಲ್ಲಿ ಮೀನು ಉತ್ಪಾದನೆ ಹಾಗೂ ಮೌಲ್ಯವರ್ಧನೆಗಾಗಿ ಹೈಟೆಕ್ ಮಾದರಿಯ ಮೀನು ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿ ಮೀನಿನ ಸಂಸ್ಕರಣೆ, ಪ್ಯಾಕಿಂಗ್, ಮೀನಿನ ಉತ್ಪನ್ನಗಳ ಮಾರಾಟ, ಉಪ ಉತ್ಪನ್ನಗಳ ತಯಾರಿಗೆ ಅವಕಾಶ ಕಲ್ಪಿಸಲಾಗುವುದು. ಮೀನುಗಾರಿಕಾ ಇಲಾಖೆ ಜತೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಮೀನು ಪಾರ್ಕ್ ರಚನೆಯಾಗಲಿದೆ ಎಂದು ಸಚಿವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts