ಸಿಡ್ನಿ: ಚೀನಾದಲ್ಲಿ ಮರಣ ಮೃದಂಗ ಮುಂದುವರಿಸಿ ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಮಾರಕ ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯಲು ಅನೇಕ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತೀಯ ಮೂಲದ ವಿಜ್ಞಾನಿ ಇದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತ ಮೂಲದ ವಿಜ್ಞಾನಿ ಎಸ್.ಎಸ್.ವಾಸನ್ ನೇತೃತ್ವದ ತಂಡವು ಮಾರಕ ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ 630ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದುಕೊಂಡಿದ್ದು, 31 ಸಾವಿರ ಮಂದಿಗೆ ಸೋಂಕು ತಗುಲಿದೆ. ಈ ಅಪಾಯಕಾರಿ ಕೊರೊನಾ ನಾಶ ಮಾಡುವ ಲಸಿಕೆ ತಯಾರಿಸಲು ಪ್ರಯೋಗಾಲಯದಲ್ಲಿ ಮೊದಲ ಗುಂಪಿನ ವೈರಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದ ಪ್ರಮುಖ ವೈಜ್ಞಾನಿಕ ಸಂಸ್ಥೆ ಕಾಮನ್ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರೀಸರ್ಚ್ ಆರ್ಗನೈಸೇಶನ್(ಸಿಎಸ್ಐಆರ್ಒ)ನಲ್ಲಿರುವ ಹೈ ಸೆಕ್ಯುರಿಟಿ ಪ್ರಯೋಗಾಲಯದಲ್ಲಿ ಮೊದಲ ಗುಂಪಿನ ವೈರಸ್ ಅನ್ನು ಎಸ್.ಎಸ್.ವಾಸನ್ ಮತ್ತು ತಂಡ ಅಭಿವೃದ್ಧಿ ಪಡಿಸಿದ್ದಾರೆ.
ಮೊಲ್ಬೋರ್ನ್ ದೊಹೆರ್ಟಿ ಸಂಸ್ಥೆಯಿಂದಾಗಿ ವಾಸನ್ ತಂಡಕ್ಕೆ ಒಳ್ಳೆಯ ಸುಳಿವು ದೊರಕಿತು. ದೊಹೆರ್ಟಿ ಸಂಸ್ಥೆಯಲ್ಲಿನ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸ್ಯಾಂಪಲ್ ಅನ್ನು ಅಭಿವೃದ್ಧಿಪಡಿಸಿದ್ದರು. ಅಲ್ಲದೆ, ಕೊರೊನಾ ವೈರಸ್ ಸೋಂಕು ತಗುಲಿದ ಮಾನವ ರಕ್ತದ ಮಾದರಿಯಿಂದ ವೈರಸ್ ಅನ್ನು ಪ್ರತ್ಯೇಕಿಸುವುದರಲ್ಲಿ ಯಶಸ್ವಿಯಾಗಿದ್ದರು. ಇದೇ ಸುಳಿವನ್ನು ಇಟ್ಟುಕೊಂಡು ಸಿಎಸ್ಐಆರ್ಒ ಪೂರ್ವಭಾವಿ ಪ್ರಯೋಗಳನ್ನು ನಡೆಸಿದ್ದು, ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿಎಸ್ಐಆರ್ಒ, ಆಸ್ಟ್ರೇಲಿಯಾ ಪ್ರಾಣಿ ಆರೋಗ್ಯ ಪ್ರಯೋಗಾಲಯವು ಪ್ರಸ್ತುತ ವೈರಸ್ ಗುಣಲಕ್ಷಣಗಳನ್ನು ಖಚಿತಪಡಿಸಿಕೊಳ್ಳಲು ನಮ್ಮ ಸಂಶೋಧನೆಗೆ ಸಹಕಾರಿಯಾಗಲಿದೆ. ಲಸಿಕೆ ಕಂಡುಹಿಡಿಯುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.
ಹೊಸ ಕೊರೊನಾ ವೈರಸ್ ಸ್ಪಷ್ಟ ಚಿತ್ರವನ್ನು ಬಿಡಿಸುವ ಗುರಿಯನ್ನು ಸಂಶೋಧನಾ ತಂಡ ಹೊಂದಿದೆ. ಇದರೊಂದಿಗೆ ಕೊರೊನಾ ವೈರಸ್ ಅಭಿವೃದ್ಧಿ ಹೊಂದಲು ತೆಗೆದುಕೊಳ್ಳುವ ಸಮಯ, ಮತ್ತದರ ಪುನಾರಾವರ್ತನೆ, ಉಸಿರಾಟದ ವ್ಯವಸ್ಥೆಯ ಮೇಲೆ ಅದರ ಪ್ರಭಾವ ಹಾಗೂ ಅದೇಗೆ ಹರಡುತ್ತದೆ ಎಂಬುದು ಸಂಶೋಧನಾ ಗುರಿಯಾಗಿದೆ ಎಂದು ಸಿಎಸ್ಐಆರ್ಒ ಹೇಳಿದೆ.
ವರದಿಗಳ ಪ್ರಕಾರ ಸಿಎಸ್‍ಆರ್‍ಒ ವಿಜ್ಞಾನಿಗಳು ಮಾನವರ ಮೇಲೆ ಕರೋನ ವೈರಸ್ಗೆ ಲಸಿಕೆ ಪರೀಕ್ಷಿಸಲು 16 ವಾರಗಳ ಗಡುವನ್ನು ಪಡೆಯುವ ಗುರಿಯನ್ನು ಹೊಂದಿದ್ದಾರೆ, ಯಾವುದೇ ಲಸಿಕೆಯನ್ನು ಮೊದಲು ಫೆರೆಟ್ ಪ್ರಾಣಿಗಳ ಮೇಲೆ ಪರೀಕ್ಷಿಸಲಾಗುತ್ತದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ವಾಸನ್, ಪಿಳನಿಯ ಬಿರ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಈ ಮೊದಲು ಡೆಂಘೆ ಹಾಗೂ ಝಿಕಾ ವೈರಸ್ ಮೇಲೂ ವಾಸನ್ ಅಧ್ಯಯನ ಮಾಡಿದ್ದಾರೆ. (ಏಜೆನ್ಸೀಸ್)