More

    ನಿಖಿಲ್ ಮದುವೆಗೆ ನೀಡಿದ ಪಾಸ್ ಕುರಿತು ಇನ್ನೂ ಏಕೆ ವರದಿ ಸಲ್ಲಿಸಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

    ಬೆಂಗಳೂರು: ಲಾಕ್‌ಡೌನ್ ನಡುವೆಯೂ ರಾಮನಗರದಲ್ಲಿ ಇತ್ತೀಚೆಗೆ ನಡೆದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಸಮಾರಂಭಕ್ಕಾಗಿ ಎಷ್ಟು ವಾಹನ ಪಾಸ್‌ಗಳನ್ನು ನೀಡಲಾಗಿತ್ತು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

    ಕರೊನಾ ಸೋಂಕು ಹರಡುವಿಕೆ ತಡೆಯುವುದಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಲಾಕ್‌ಡೌನ್‌ನಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಹಲವು ಪಿಐಎಲ್ ಸಲ್ಲಿಕೆಯಾಗಿದೆ.

    ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಮದುವೆ ಸಮಾರಂಭಕ್ಕೆ ವಿತರಿಸಿರುವ ಪಾಸ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.

    ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ನಿಖಿಲ್ ಮದುವೆ ಸಮಾರಂಭಕ್ಕಾಗಿ ಸರ್ಕಾರ ಸಾಕಷ್ಟು ವಾಹನ ಪಾಸ್‌ಗಳನ್ನು ನೀಡಿದೆ. ಮದುವೆಯಲ್ಲಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

    ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಮದುವೆ ಸಮಾರಂಭದಲ್ಲಿ ಎಷ್ಟು ಜನ ಭಾಗವಹಿಸಿದ್ದರು, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಏ. 21ರಂದೇ ಸೂಚನೆ ನೀಡಲಾಗಿತ್ತಾದರೂ, ಈವರೆಗೂ ಸರ್ಕಾರ ವರದಿ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

    ಇದಲ್ಲದೆ, ಶಾಸಕರು, ಸಂಸದರು ಸೇರಿ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಆಹಾರ, ದಿನಸಿ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ ಬಹುತೇಕ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

    ಅಂತಿಮವಾಗಿ, ನಿಖಿಲ್ ಮದುವೆ ಸಮಾರಂಭ ಸಂಬಂಧ ಎಷ್ಟು ವಾಹನ ಪಾಸ್ ನೀಡಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು. ಇದೇ ವೇಳೆ, ನಗರದಲ್ಲಿ ವಾಹನ ಪಾಸ್‌ಗಳ ದುರ್ಬಳಕೆ ಸಂಬಂಧ ಬಂದಿರುವ ದೂರುಗಳ ಬಗ್ಗೆ ಯಾವ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆಯೂ ವರದಿ ಸಲ್ಲಿಸುವಂತೆ ನಿರ್ದೇಶಿಸಿತು.

    ಸಿಆರ್‌ಪಿಎಫ್​ ಯೋಧನ ವಿರುದ್ಧ ಕೇಸು ದಾಖಲು ಪ್ರಕರಣ: ಸದಲಗಾ ಸಬ್ ಇನ್ಸ್​ಪೆಕ್ಟರ್​ ತಲೆದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts