More

    ಹಂತ 3ಕ್ಕೆ ಕರೊನಾ? ಆತಂಕದಲ್ಲಿ ಜನ!: ವಿದೇಶದಿಂದ ಬಂದವರ ಜತೆ ಸಂಪರ್ಕವಿರದ ವ್ಯಕ್ತಿಗೂ ಸೋಂಕು

    ಬೆಂಗಳೂರು: ಇಡೀ ವಿಶ್ವದ ನಿದ್ದೆಗೆಡಿಸಿರುವ ಮಹಾಮಾರಿ ಕರೊನಾ ಸೋಂಕು ರಾಜ್ಯದಲ್ಲಿ ಎರಡನೇ ಹಂತ ದಾಟಿ ಮೂರನೇ ಹಂತಕ್ಕೆ ಕಾಲಿಟ್ಟಿರುವ ಅಪಾಯ ಎದುರಾಗಿದೆ. ವಿದೇಶ ಪ್ರಯಾಣ ಮಾಡದ ಹಾಗೂ ವಿದೇಶದಿಂದ ಬಂದವರ ಜತೆ ಸಂಪರ್ಕ ಹೊಂದದ ವ್ಯಕ್ತಿಯೊಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು, 3ನೇ ಹಂತವಾದ ಸಮುದಾಯಕ್ಕೆ ಹರಡುವ ಆತಂಕ ಶುರುವಾಗಿದೆ. ಮೈಸೂರು ಮೂಲದ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

    ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಗುಣನಿಯಂತ್ರಕ ವಿಭಾಗದಲ್ಲಿ ಉದ್ಯೋಗಿ. ಇವರು ಅನೇಕ ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕ ಹೊಂದಿದ್ದದ್ದು ಗೊತ್ತಾಗಿದೆ. ವೈದ್ಯಕೀಯ ತನಿಖೆ ಕೈಗೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಏಳು ಜನರನ್ನು ಗುರುತಿಸಿ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿಡಲಾಗಿದೆ. ಈವರೆಗೂ ವಿದೇಶದಿಂದ ಬಂದವರು ಮತ್ತು ಅವರ ಪ್ರಥಮ ಸಂಪರ್ಕದಲ್ಲಿರುವವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸೋಂಕು, ಈಗ ಹೊರ ವ್ಯಕ್ತಿಗೂ ಆವರಿಸಿದೆ. ಈ ಪ್ರಕರಣವನ್ನು ವೈದ್ಯಕೀಯ ತನಿಖೆಗೆ ವಹಿಸಲಾಗಿದ್ದು, ವ್ಯಕ್ತಿಯ ಚಲನವಲನದ ವರದಿಗಳು ಬಂದ ಬಳಿಕವೇ ಎಲ್ಲಿ? ಹೇಗೆ? ಸೋಂಕು ತಗುಲಿದೆ ಎಂದು ತಿಳಿಯಲಿದೆ. ಜತೆಗೆ ಸೋಂಕು ಸಮುದಾಯಕ್ಕೆ ಹರಡಿದೆಯಾ (ಮೂರನೇ ಹಂತಕ್ಕೆ )ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    55ಕ್ಕೇರಿದ ಸೋಂಕಿತರ ಸಂಖ್ಯೆ

    ರಾಜ್ಯದಲ್ಲಿ ಬರೀ 4 ದಿನದಲ್ಲಿ 29 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಸೋಮವಾರ ಮತ್ತು ಮಂಗಳವಾರ 16, ಬುಧವಾರ ಮತ್ತು ಗುರುವಾರ 13 ಹೊಸ್ ಪ್ರಕರಣ ದೃಢಪಟ್ಟಿವೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 55ಕ್ಕೇರಿದೆ. ಬೆಂಗಳೂರಿನ 63 ವರ್ಷದ ವ್ಯಕ್ತಿ ಹಾಗೂ ಈತನ 59 ವರ್ಷದ ಪತ್ನಿಗೆ ಸೋಂಕು ದೃಢಪಟ್ಟಿದೆ. ಸೌತ್ ಅಮೆರಿಕ-ಬ್ರೆಜಿಲ್-ಅರ್ಜೆಂಟಿನಾ ಮುಖಾಂತರ ಮಾ.19ರಂದು ಬೆಂಗಳೂರಿಗೆ ಆಗಮಿಸಿದ್ದಾರೆ.

    ರೋಗಿ-45: ಬೆಂಗಳೂರಿನ 26 ವರ್ಷದ ವ್ಯಕ್ತಿಗೆ ಸೋಂಕು ಹರಡಿಸಿರುವುದು ವೈದ್ಯಕೀಯ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈತನ ಸ್ಪೇನ್ ದೇಶಕ್ಕೆ ಭೇಟಿ ನೀಡಿ ದುಬೈ ಮುಖಾಂತರ ಮಾ.14ರಂದು ಬೆಂಗಳೂರಿಗೆ ಬಂದಿದ್ದ.

    ರೋಗಿ-46: ಬೆಂಗಳೂರಿನ 26 ವರ್ಷದ ವ್ಯಕ್ತಿಯಾಗಿದ್ದು, ಈತ ಕೂಡ ಸ್ಪೇನ್ ದೇಶಕ್ಕೆ ಭೇಟಿ ನೀಡಿ ದುಬೈ ಮುಖಾಂತರ ಬೆಂಗಳೂರಿಗೆ ಬಂದಿದ.

    ರೋಗಿ-47, 48, 49, 50: ಬೆಂಗಳೂರಿನ 69 ವರ್ಷದ ಪತಿ, 63 ವರ್ಷದ ಪತ್ನಿ ಹಾಗೂ ಇವರ 7 ವರ್ಷದ ಹಾಗೂ 9 ವರ್ಷದ ಪುತ್ರಿಯರಿಗೆ ಸೋಂಕು ತಗುಲಿದೆ. ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದು, ಮಾ.18ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ರೋಗಿ-51: ಉಡುಪಿಯ 34 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮಾ.18ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ರೋಗಿ-52: ಮೈಸೂರು ಮೂಲದ 35 ವರ್ಷದ ವ್ಯಕ್ತಿ ವಿದೇಶ ಪ್ರಯಾಣ ಹಾಗೂ ವಿದೇಶದಿಂದ ಬಂದ ವ್ಯಕ್ತಿಗಳ ಜತೆ ನೇರ ಸಂಪರ್ಕ ಹೊಂದಿರಲಿಲ್ಲ. ರೋಗಿ-53: ಚಿಕ್ಕಬಳ್ಳಾಪುರದ 70 ವರ್ಷದ ಮಹಿಳೆ ಸೋಂಕು ಬಂದಿದೆ. ಮೆಕ್ಕಾ ಯಾತ್ರೆ ಮುಗಿಸಿ ಸೌದಿ ಅರೇಬಿಯಾದಿಂದ ಮಾ.14ರಂದು ಬೆಂಗಳೂರಿಗೆ ಬಂದಿದ್ದರು. (2 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವು) ವರದಿಯಲ್ಲಿ ಸೋಂಕು ದೃಢಪಟ್ಟಿದೆ.

    ರೋಗಿ-54: ಆಂಧ್ರ ಪ್ರದೇಶ ಅನಂತಪುರ ನಿವಾಸಿ 64 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ. ಫ್ರಾನ್ಸ್ ಪ್ರಯಾಣ ಮುಗಿಸಿ ಮಾ.1 ರಂದು ಭಾರತಕ್ಕೆ ವಾಪಸಾಗಿದ್ದರು. ಹಿಮಾಚಲ ಪ್ರದೇಶದ ಪುಟ್ಟಪರ್ತಿ ಮೂಲಕ ಮಾ.21ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ರೋಗಿ-55: ಬೆಂಗಳೂರಿನ 45 ವರ್ಷದ ಸೆಕ್ಯುರಿಟಿ ಗಾರ್ಡ್​ಗೆ ಕರೊನಾ ಸೋಂಕು ಪತ್ತೆಯಾಗಿದೆ. ಇವರು ವಿದೇಶದಿಂದ ಬಂದಿದ್ದ ಸೋಂಕಿತ ವ್ಯಕ್ತಿಯೊಬ್ಬರ (ರೋಗಿ 25) ಸಂಪರ್ಕ ಹೊಂದಿದ್ದರು.

    2ನೇ ಬಲಿ

    ಕರೊನಾ ಸೋಂಕಿಗೆ ರಾಜ್ಯದಲ್ಲಿ 2ನೇ ಬಲಿಯಾಗಿದೆ. ಮೆಕ್ಕಾಗಿ ಹೋಗಿ ಬಂದಿದ್ದ 71 ವರ್ಷದ ವೃದ್ಧ ಕಲಬುರ್ಗಿಯಲ್ಲಿ ಮೃತಪಟ್ಟಿದ್ದ. ಈಗ ಚಿಕ್ಕಬಳ್ಳಾಪುರದ 70 ವರ್ಷದ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ಈಕೆ ಮೆಕ್ಕಾ ಯಾತ್ರೆ ಮುಗಿಸಿ ಸೌದಿ ಅರೇಬಿಯಾದಿಂದ ಮಾ.14ರಂದು ಬೆಂಗಳೂರಿಗೆ ಬಂದಿದ್ದರು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    Coronavirus, Covid 19, State Govt, Pandemic,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts