More

    ಕೂಸಿಗೂ ಕರೊನಾ ಜಾಗೃತರಾಗೋಣ: ಒಂದೇ ದಿನ 9 ಹೊಸ ಪ್ರಕರಣ ಪತ್ತೆ

    ಬೆಂಗಳೂರು: ಸಾಕಷ್ಟು ಮುಂಜಾಗ್ರತೆ ನಡುವೆಯೂ ರಾಜ್ಯದಲ್ಲಿ ಕರೊನಾ ಸೋಂಕು ವ್ಯಾಪಕವಾಗುತ್ತಿದ್ದು, ಬಂಟ್ವಾಳದ ಸಜಿಪನಡು ಗ್ರಾಮದ 10 ತಿಂಗಳ ಮಗು (ಸೋಂಕಿತ-56) ಸೇರಿ ಶುಕ್ರವಾರ ಒಂದೇ ದಿನ 9 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮಗುವಿನ ಕುಟುಂಬ ಕೇರಳದಲ್ಲಿರುವ ಸಂಬಂಧಿಕರ ಮನೆಗೆ ಕೆಲದಿನಗಳ ಹಿಂದೆ ಹೋಗಿ ಬಂದಿದ್ದು, ಆಗ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಮಾ.23ರಂದು ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ದೃಢಪಟ್ಟಿದ್ದರಿಂದ ಮಗುವಿನ ತಾಯಿ ಸಹಿತ 6 ಮಂದಿಯನ್ನು ಪ್ರತ್ಯೇಕ ಇರಿಸಿ, ಸಂಬಂಧಿಕರ ಮೇಲೂ ನಿಗಾ ವಹಿಸಲಾಗಿದೆ. ಸಜಿಪನಡು ಗ್ರಾಮವನ್ನು ಸಂಪೂರ್ಣ ಕ್ವಾರಂಟೈನ್ ಮಾಡಿದ್ದು, ಜನರ ಆಗಮನ-ನಿರ್ಗಮನ ನಿರ್ಬಂಧಿಸಲಾಗಿದೆ.

    ಭಟ್ಕಳದ ಇನ್ನೊಬ್ಬನಿಗೆ ಸೋಂಕು: ಭಟ್ಕಳದ ಇನ್ನೊಬ್ಬ ವ್ಯಕ್ತಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ದುಬೈನಿಂದ ಆಗಮಿಸಿದ 22 ವರ್ಷದ ಯುವಕನಿಗೆ (ಸೋಂಕಿತ-62)ಸೋಂಕು ಇರುವುದು ಶಿವಮೊಗ್ಗ ಪ್ರಯೋಗಾಲಯದಿಂದ ಖಚಿತವಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಪುಣೆಗೆ ಕಳಿಸಲಾಗಿದೆ. ಈ ವ್ಯಕ್ತಿಗೆ ಸೋಂಕಿರುವುದು ಖಚಿತವಾದಲ್ಲಿ ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಲಿದೆ. ಇನ್ನೂ 56 ಜನರ ಗಂಟಲ ದ್ರವದ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ ತಿಳಿಸಿದ್ದಾರೆ.

    • ಸೋಂಕಿತ-57: ಕೊಲಂಬೊ ದೇಶದ ಪ್ರಯಾಣ ಮುಗಿಸಿ ಮಾ.15 ರಂದು ಭಾರತಕ್ಕೆ ಹಿಂದಿರುವ ಬೆಂಗಳೂರು ನಿವಾಸಿ 20 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
    • ಸೋಂಕಿತ-58: ಲಂಡನ್ ಪ್ರವಾಸ ಮುಗಿಸಿ ಮಾ.18 ಭಾರತಕ್ಕೆ ವಾಪಸಾಗಿರುವ ಬೆಂಗಳೂರಿನ 25 ವರ್ಷದ ಮಹಿಳೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
    • ಸೋಂಕಿತ-59, 60: ಬೆಂಗಳೂರಿನ 35 ವರ್ಷದ ಹಾಗೂ 33 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. ಇವರಿಬ್ಬರಿಗೂ ಮನೆ ಕೆಲಸದ ಮಹಿಳೆ 25ನೇ ಸೋಂಕಿತ ರೋಗಿಯ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ.
    • ಸೋಂಕಿತ-61: ತುಮಕೂರು ಜಿಲ್ಲೆ ಶಿರಾ ತಾಲೂಕಿನ 65 ವರ್ಷದ ವೃದ್ಧನಿಗೆ ಸೋಂಕು ತಗುಲಿ ಮೃತಪಟ್ಟಿದ್ದಾನೆ. ಈತನ ದೆಹಲಿಯ ಜಾಮಿಯಾ ಮಸೀದಿಗೆ ತೆರಳಿ ವಾಪಸಾಗಿದ್ದ.
    • ಸೋಂಕಿತ-64: ದಕ್ಷಿಣ ಕನ್ನಡ ಜಿಲ್ಲೆಯ 22 ವರ್ಷದ ವ್ಯಕ್ತಿ ದುಬೈ ಪ್ರಯಾಣ ಮುಗಿಸಿ ಮಾ.22ರಂದು ವಾಪಸ್ಸಾಗಿರುವ ಹಿನ್ನೆಲೆ ಹೊಂದಿದ್ದು ಸೋಂಕು ದೃಢಪಟ್ಟಿದೆ.

    ಮೊದಲ ಐವರು ಸೋಂಕಿತರು ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಮೊದಲು ಪತ್ತೆಯಾದ ಐವರು ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿರುವುದು ಕೊಂಚ ನಿರಾಳತೆ ಮೂಡಿಸಿದೆ. ಅಮೆರಿಕದ ಟೆಕ್ಸಾಸ್​ನ ಆಸ್ಟಿನ್​ಗೆ ತೆರಳಿ ಫೆ.29ರಂದು ಬೆಂಗಳೂರಿಗೆ ವಾಪಸ್ಸಾಗಿದ್ದ 40 ವರ್ಷದ ಟೆಕ್ಕಿಗೆ (ರೋಗಿ-1) ಸೋಂಕು ದೃಢಪಟ್ಟಿತ್ತು. ಇದು ರಾಜ್ಯದಲ್ಲಿ ಪತ್ತೆಯಾದ ಮೊದಲ ಕರೊನಾ ಪ್ರಕರಣವಾಗಿತ್ತು. ನಂತರ ಈತನ ಪತ್ನಿ (ರೋಗಿ-2) ಹಾಗೂ 13 ವರ್ಷದ ಮಗಳಿಗೂ (ರೋಗಿ-3) ಸೋಂಕು ದೃಢಪಟ್ಟು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಅಮೆರಿಕ ಹಾಗೂ ಲಂಡನ್ ಪ್ರವಾಸ ಮುಗಿಸಿ ಮಾ.8ರಂದು ಬೆಂಗಳೂರಿಗೆ ಬಂದಿದ್ದ 50 ವರ್ಷದ ಟೆಕ್ಕಿಯಲ್ಲೂ (ರೋಗಿ-4) ಸೋಂಕು ದೃಢಪಟ್ಟಿತ್ತು. ಇನ್ನೊಂದು ಪ್ರಕರಣದಲ್ಲಿ ಮುಂಬೈ ಮೂಲದ ಟೆಕ್ಕಿ ದಂಪತಿ ಫೆ. 23ರಂದು ಹನಿಮೂನ್​ಗೆ ಗ್ರೀಸ್​ಗೆ ತೆರಳಿ ಮಾ. 6ರಂದು ಮುಂಬೈಗೆ ವಾಪಸಾಗಿದ್ದರು. ಪತ್ನಿ ತವರು ಆಗ್ರಾಗೆ ಹೋದರೆ, ಬೆಂಗಳೂರಿಗೆ ಬಂದಿದ್ದ ಪತಿಯಲ್ಲಿ (ರೋಗಿ-5) ಸೋಂಕು ದೃಢಪಟ್ಟಿತ್ತು. ಈ ಐವರೂ ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಕೆಲಕಾಲ ವೈದ್ಯಕೀಯ ನಿಗಾದಲ್ಲೇ ಇರುವಂತೆ ಸಲಹೆ ಸೂಚನೆಗಳನ್ನು ಕೊಡಲಾಗಿದೆ. ಕರೊನಾ ಸೋಂಕಿನ ಲಕ್ಷಣಗಳಿರುವ 166 ಜನರನ್ನು ಐಸೋಲೇಷನ್ ವಾರ್ಡ್​ನಲ್ಲಿರಿಸಿ ವೈದ್ಯಕೀಯ ನಿಗಾ ವಹಿಸಲಾಗಿದೆ.

    ಕರೊನಾ ಪರೀಕ್ಷಿಸಿ ಎಂದ ಯೋಧ

    ಬೆಳಗಾವಿ: ಕರೊನಾ ಸೋಂಕಿನ ಲಕ್ಷಣಗಳಿದ್ದು ನನ್ನನ್ನು ಪರೀಕ್ಷೆಗೆ ಒಳಪಡಿಸಿ ಎಂದು ಬೆಳಗಾವಿ ಮೂಲದ ಯೋಧ ಜಾಲತಾಣದ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದಾರೆ. ಸವದತ್ತಿ ತಾಲೂಕು ಹಂಚಿನಾಳ ಗ್ರಾಮದ ಯೋಧ, ಸಿಆರ್​ಪಿಎಫ್​ನಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದು ಮಾ. 17ರಂದು ಹೈದರಾಬಾದ್​ನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಬಳಿಕ ಕೆಮ್ಮು, ನೆಗಡಿಯಿಂದ ಬಳಲಿದ್ದು, ಇದೀಗ ಕೊಠಡಿಯೊಂದರಲ್ಲಿ ಸೆಲ್ಪ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಮೂರ್ನಾಲ್ಕು ದಿನದ ಹಿಂದೆ ಚಿಕಿತ್ಸೆಗಾಗಿ ಕಿಮ್್ಸ ಆಸ್ಪತ್ರೆಗೆ ತೆರಳಿದ್ದಾಗ ಅಲ್ಲಿನ ವೈದ್ಯರು ನಿಮ್ಮಲ್ಲಿ ಕರೊನಾ ಗುಣಲಕ್ಷಣಗಳಿಲ್ಲ. ಅಲ್ಲದೆ, ವಿದೇಶದಿಂದ ಬಂದವರಿಗೆ ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದಿದ್ದರು. ಆದರೆ, ಈಗ ತಮ್ಮ ವೃದ್ಧ ತಾಯಿಯಲ್ಲೂ ಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತಿದೆ ತಕ್ಷಣವೇ ನನ್ನನ್ನು ಹಾಗೂ ಕುಟುಂಬಸ್ಥರನ್ನು ಕರೊನಾ ವೈರಸ್ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.

    ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts