More

    ಕೊರೊನಾ ಪರಿಣಾಮ ತೈಲ ಬೆಲೆ ಕುಸಿತ: ಭಾರತಕ್ಕೆ ವರದಾನ

    ಕರೊನಾ ಸೋಂಕಿನ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ತೀವ್ರ ಕುಸಿತ ಕಂಡಿದ್ದು, ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 50.11 ಡಾಲರ್​ಗೆ ಇಳಿದಿದೆ. ಜನವರಿ 6ಕ್ಕೆ ಹೋಲಿಸಿದರೆ ಶೇ. 21 (ಆಗ ಪ್ರತಿ ಬ್ಯಾರೆಲ್​ಗೆ 63.27 ಇತ್ತು) ದರ ಇಳಿಮುಖವಾಗಿದೆ. ಬ್ರೆಂಟ್ ಕಚ್ಚಾತೈಲದ ಬೇಡಿಕೆ ಕೂಡ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್​ಗೆ 54.45ಕ್ಕೆ ಮುಟ್ಟಿದೆ. ಸುಮಾರು 2.17 ಡಾಲರ್ (ಶೇ. 3.8) ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿತದಿಂದಾಗಿ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದೆರಡು ವಾರದಿಂದ ಇಳಿಕೆಯ ಹಾದಿಯಲ್ಲಿದ್ದು, ಸುಮಾರು -ಠಿ; 2 ತಗ್ಗಿದೆ.

    ತೈಲ ಆಮದುದಾರರ ರಾಷ್ಟ್ರಗಳ ಪೈಕಿ ಚೀನಾ ಮುಂಚೂಣಿಯಲ್ಲಿದೆ. ಆದರೆ, ಈಗ ಅದು ಕರೊನಾ ಸೋಂಕಿನಿಂದ ತತ್ತರಿಸಿದೆ. ಹೀಗಾಗಿ ಸಾರಿಗೆ ವಾಹನ ಬಳಕೆ ಅತ್ಯಂತ ಕಡಿಮೆಯಾಗಿರುವುದರಿಂದ ಚೀನಾದಿಂದ ತೈಲ ಬೇಡಿಕೆ ಇಳಿಮುಖವಾಗಿದೆ. ಜತೆಗೆ ಚೀನಾದಲ್ಲಿ ಸೋಂಕು ವ್ಯಾಪಕವಾಗಿರುವ ಕಾರಣ ಆ ರಾಷ್ಟ್ರಕ್ಕೆ ಪ್ರಯಾಣ ಕೈಗೊಳ್ಳದಂತೆ ಬಹುತೇಕ ರಾಷ್ಟ್ರಗಳು ಸೂಚನೆ ನೀಡಿರುವುದರಿಂದಲೂ ತೈಲ ಬೇಡಿಕೆ ಸರಾಸರಿ ಶೇ. 20 ಕಡಿಮೆಯಾಗಿದೆ. ಇದೆಲ್ಲದರ ಪರಿಣಾಮ ಕಚ್ಚಾ ತೈಲ ದರ ತಗ್ಗಿದೆ. ದರ ಕುಸಿತದಿಂದ ಕಂಗಾಲಾಗಿರುವ ಪೆಟ್ರೋಲ್ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ (ಒಪೆಕ್) ಈ ವಾರದಲ್ಲೇ ತುರ್ತು ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

    ದರ ಕುಸಿತಕ್ಕೆ ಕಾರಣ?

    ಮಾರಣಾಂತಿಕ ಕರೊನಾ ವೈರಸ್ ಹಾವಳಿಯಿಂದ ಚೀನಾದಲ್ಲಿ ಸಾರಿಗೆ ವ್ಯವಸ್ಥೆ ಮಾತ್ರವಲ್ಲದೆ, ಕೈಗಾರಿಕೆಗಳು, ಕಚೇರಿ, ಅಂಗಡಿಗಳು ಬಹುತೇಕ ಮುಚ್ಚಲ್ಪಟ್ಟಿವೆ. ವಿಮಾನದ ಬಳಕೆಯೂ ಕಡಿಮೆಯಾಗಿದೆ. ಇದರಿಂದ ತೈಲ ಬಳಕೆ ಗಣನೀಯ ಇಳಿಮುಖವಾಗಿದೆ. ಚೀನಾ ಪ್ರತಿ ದಿನ ಸರಾಸರಿ 1.40 ಕೋಟಿ ಬ್ಯಾರೆಲ್ ತೈಲ ಬಳಕೆ ಮಾಡುತ್ತದೆ. ಈ ಪೈಕಿ 1.10 ಕೋಟಿ ಬ್ಯಾರಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಜಾಗತಿಕ ಕಚ್ಚಾ ತೈಲ ಉತ್ಪಾದನೆಯಲ್ಲಿ ಶೇ. 10 ಆಗಿದೆ. ಕರೊನಾ ಸೋಂಕು ವ್ಯಾಪಕವಾದ ನಂತರ ಚೀನಾದಲ್ಲಿ ಪ್ರತಿದಿನದ ತೈಲ ಬಳಕೆ 30 ಲಕ್ಷ ಬ್ಯಾರೆಲ್​ಗೆ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ. ಏಷ್ಯಾದಲ್ಲೇ ಬೃಹತ್ ತೈಲ ಸಂಸ್ಕರಣಾ ಕಂಪನಿಯಾದ ಚೀನಾದ ಸಿನೊಪೆಕ್, ನಿತ್ಯ 6 ಲಕ್ಷ ಬ್ಯಾರೆಲ್ (ಶೇ. 12) ತೈಲ ಸಂಸ್ಕರಣೆಯನ್ನು ತಗ್ಗಿದೆ. ದಶಕದ ನಂತರ ಸಿನೊಪೆಕ್ ಸಂಸ್ಕರಣೆಯನ್ನು ಕಡಿತ ಮಾಡಿದೆ. ರಷ್ಯಾ ಕೂಡ 5 ಲಕ್ಷ ಬ್ಯಾರಲ್ ತೈಲ ಸಂಸ್ಕರಣೆಯನ್ನು ತಗ್ಗಿಸುವ ನಿರ್ಧಾರ ಕೈಗೊಂಡಿದೆ. ಅಮೆರಿಕದಲ್ಲೂ ತೈಲ ಬೇಡಿಕೆ 2.8ರಷ್ಟು ತಗ್ಗಿಸಿದೆ.

    ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ

    ತೈಲ ದರ ಇಳಿಕೆಯು ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ತೈಲ ರಫ್ತುದಾರರ ರಾಷ್ಟ್ರಗಳು ಮಧ್ಯಪ್ರಾಚ್ಯದಲ್ಲೇ ಹೆಚ್ಚು ಇವೆ. ಇವುಗಳಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳು ಅಮೆರಿಕದ ಕರೆನ್ಸಿ ಡಾಲರ್​ನಲ್ಲಿ ಪಾವತಿ ಮಾಡುತ್ತವೆ. ಬೇಡಿಕೆಯೇ ಕಡಿಮೆಯಾಗಿರುವ ಕಾರಣ ತೈಲ ವ್ಯಾಪಾರ ಇಳಿಕೆಯಾಗಿ, ಪಾವತಿಯೂ ತಗ್ಗುತ್ತದೆ. ಇದರಿಂದ ವಿದೇಶಿ ವಿನಿಮಯದ ಮೇಲೆ ನೇರ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಮತ್ತಷ್ಟು ಮಂದಗೊಳ್ಳುತ್ತದೆ.

    ಜಾಗತಿಕವಾಗಿ ಎರಡನೇ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾಕ್ಕೂ ಆರ್ಥಿಕ ಹಿನ್ನಡೆಯ ದೊಡ್ಡ ಹೊಡೆತ ತಟ್ಟುತ್ತದೆ. ಈಗಾಗಲೇ 3 ದಶಕಗಳ ಹಿಂದಿನ ಸ್ಥಿತಿಗೆ ಚೀನಾದ ಆರ್ಥಿಕತೆ ತಗ್ಗಿದೆ. ಈಗ ವ್ಯಾಪಾರೋದ್ಯಮವೂ ನೆಲಕಚ್ಚಿದ್ದರಿಂದ ಮತ್ತಷ್ಟು ಆರ್ಥಿಕ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಈ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಆರ್ಥಿಕ ಪ್ರಗತಿ ದರ ಶೇ. 5ಕ್ಕಿಂತ ಕಡಿಮೆ ಇರಲಿದೆ ಎಂದು ಆರ್ಥಿಕ ತಜ್ಞ ಜಾಂಗ್​ವಿುಂಗ್ ಹೇಳಿದ್ದಾರೆ.

    # ಕಳೆದ 15 ದಿನಗಳಿಂದ ಪೆಟ್ರೋಲ್, ಡೀಸೆಲ್ ಲೀಟರ್​ಗೆ 2 ರೂಪಾಯಿ ಇಳಿಕೆ

    # ಬೇಡಿಕೆಯಲ್ಲಿ ಸರಾಸರಿ ಶೇ. 20 ಕುಸಿತ

    # ಪ್ರತಿ ಬ್ಯಾರಲ್​ಗೆ 50.11 ಡಾಲರ್

    # ಚೀನಾದಿಂದ ತಗ್ಗಿದ ಬೇಡಿಕೆ

    # ದರ ಇಳಿಕೆ ಹಿನ್ನೆಲೆಯಲ್ಲಿ ಈ ವಾರದಲ್ಲೆ ಒಪೆಕ್ ರಾಷ್ಟ್ರಗಳ ಸಭೆ

    ಭಾರತಕ್ಕೆ ವರದಾನ

    ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ ಏರುಪೇರಿನ ಪರಿಣಾಮ ಭಾರತಕ್ಕೆ ವರದಾನವಾಗಿದೆ. ಮಂದಗತಿಯ ಆರ್ಥಿಕತೆಯಿಂದ ಕಂಗೆಟ್ಟಿದ್ದ ಭಾರತಕ್ಕೆ ಹೊಸ ಹುರುಪು ನೀಡಿದೆ. ವಿದೇಶಿ ವಿನಿಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚುತ್ತಿರುವುದರಿಂದ ವಿದೇಶಿ ವ್ಯಾಪಾರದಲ್ಲಿ ತುಸು ಉಳಿತಾಯವೂ ಆಗುತ್ತಿದೆ. ಕಚ್ಚಾ ತೈಲ ದರ ತಗ್ಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ 15 ದಿನಗಳಿಂದ ಪ್ರತಿ ಲೀಟರ್​ಗೆ ಸುಮಾರು -ಠಿ; 2ರಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಎರಡು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಭಾರತ ಒಟ್ಟಾರೆ ತೈಲ ಅಗತ್ಯದಲ್ಲಿ ಶೇ. 80ರಷ್ಟು ಆಮದು ಮಾಡಿಕೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts