More

    ಕರೊನಾ ಸೋಂಕು ಭೀತಿ

    ಮಂಗಳೂರು: ಹತ್ತಿರದ ಕೇರಳದಲ್ಲಿ ಕರೊನಾ ವೈರಾಣು ಸೋಂಕು ಮೂವರಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಂಕು ಸಂಪರ್ಕ ಸಾಧ್ಯತೆಯ ಬಗ್ಗೆ ಹೆಚ್ಚಿನ ನಿಗಾ ಇರಿಸಿದೆ. ವಿಶೇಷವಾಗಿ ವಿದೇಶದಿಂದ ಸ್ವದೇಶಕ್ಕೆ ವಾಪಸ್ಸಾದವರು ಮತ್ತು ವಿದೇಶಿ ಪ್ರವಾಸಿಗರ ಮೇಲೆ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಪಣಂಬೂರು ನವಮಂಗಳೂರು ಬಂದರಿಗೆ ಮಂಗಳವಾರ 1800 ಪ್ರಯಾಣಿಕರನ್ನು ಹೊತ್ತೊಯ್ಯುವ ವಿದೇಶಿ ಪ್ರವಾಸಿ ಹಡಗೊಂದು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರ ಸ್ಕ್ರೀನಿಂಗ್ ನಡೆಸಲಾಗಿದೆ. ಆರೋಗ್ಯ ತಪಾಸಣೆಯ ಬಳಿಕ ಪ್ರಯಾಣಿಕರು ನಗರದ ವಿವಿಧೆಡೆ ಸುತ್ತಾಟ ನಡೆಸಲು ಅವಕಾಶ ನೀಡಲಾಗಿದೆ.
    * ಇಬ್ಬರು ಚೀನಾ ಪ್ರಜೆಗಳು: ಹಡಗಿನಲ್ಲಿದ್ದವರ ಪೈಕಿ ಓರ್ವ ಪ್ರಯಾಣಿಕ ಹಾಗೂ ಓರ್ವ ಹಡಗು ಸಿಬ್ಬಂದಿ ಚೀನಾದವರಾಗಿದ್ದು, ಅವರು ಮಂಗಳೂರಿನಲ್ಲಿ ಇಳಿದಿಲ್ಲ. ಇಟಲಿಯಿಂದ ಬಂದಿರುವ ‘ಕೋಸ್ಟ ವಿಕ್ಟೋರಿಯಾ’ ಹೆಸರಿನ ಈ ಹಡಗು ಮುಂಬೈಗೆ ಬಂದು ಅಲ್ಲಿಂದ ನವಮಂಗಳೂರು ಬಂದರು ತಲುಪಿದೆ. ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಮುಂಬೈ ಬಂದರಿನಲ್ಲೊಮ್ಮೆ ನಡೆದಿದ್ದು, ನವಮಂಗಳೂರು ಬಂದರಿನಲ್ಲಿ ಮತ್ತೊಮ್ಮೆ ನಡೆದಿದೆ ಎಂದು ಬಂದರು ಮೂಲ ತಿಳಿಸಿದೆ.

    ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿದೇಶಿ ಪ್ರಯಾಣಿಕರ ಮೇಲೆ ವಿಶೇಷ ನೀಗಾವಿಡಲಾಗಿದೆ. ಶಂಕಿತ ಪ್ರಯಾಣಿಕರ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಕೋರೋನಾ ಸೋಂಕಿನ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಪ್ರವಾಸದಿಂದ ವಾಪಸ್ಸಾದವರ ಪರೀಕ್ಷೆ: ಆರೋಗ್ಯ ಇಲಾಖೆಯ ಆಯುಕ್ತರು ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಬೆಳಗ್ಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ಕರೊನಾ ಸೋಂಕು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತಾವಿತ ಸೋಂಕು ಬಗ್ಗೆ ಯಾವುದೇ ಹೊಸ ಮಾಹಿತಿ ದೊರೆತರೂ ತಕ್ಷಣ ಇಲಾಖೆ ಅಧಿಕಾರಿಗಳ ಜತೆ ಹಂಚಿಕೊಳ್ಳಬೇಕು. ವಿವಿಧ ದೇಶಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರ ದಾಖಲೆಗಳ ಬಗ್ಗೆ ಗಮನವಿರಿಸಬೇಕು ಎಂದು ಸೂಚಿಸಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಮುಖ್ಯವಾಗಿ ಚೀನಾ ಹಾಗೂ ಪ್ರಸ್ತಾವಿತ ಸೋಂಕು ಪತ್ತೆಯಾದ ದೇಶಗಳ ನಡುವೆ ಸಂಚಾರ ನಡೆಸುತ್ತಿರುವ ಪ್ರಯಾಣಿಕರು ಸ್ವಯಂಪ್ರೇರಿತವಾಗಿ ಆರೋಗ್ಯ ಇಲಾಖೆ ಜತೆ ಮಾಹಿತಿ ವಿನಿಮಯ ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಿಕೊಳ್ಳುವಂತೆ ಅವರು ವಿನಂತಿಸಿದರು. ಜಿಲ್ಲೆಯಲ್ಲಿ ಇಲ್ಲಿವರೆಗೆ ಯಾವುದೇ ಸಂಶಯಾಸ್ಪದ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಇಲಾಖೆ ಜಾಗೃತ ಸ್ಥಿತಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ರಾಮಕೃಷ್ಣ ತಿಳಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಶೀತ, ಜ್ವರ ತಲೆ ನೋವಿನಿಂದ ದಾಖಲಾಗಿ ಚಿಕಿತ್ಸೆ ಪಡೆದ ಫಿಲಿಪೈನ್ಸ್ ದಂಪತಿಯಲ್ಲಿ ಕರೊನಾ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. ಅದೊಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.

    ಕೇರಳ ರೈಲು ಪ್ರಯಾಣಿಕರ ತಪಾಸಣೆಗೆ ಗೋವಾ ಆಗ್ರಹ: ಕರ್ನಾಟಕದ ಮೂಲಕ ಕೊಂಕಣ ರೈಲ್ವೆ ಮಾರ್ಗದಲ್ಲಿ ಗೋವಾಕ್ಕೆ ಆಗಮಿಸುವ ಕೇರಳದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಬೇಕು ಎಂದು ಗೋವಾ ವಿಧಾನಸಭೆಯಲ್ಲಿ ಶಾಸಕರು ಆಗ್ರಹಿಸಿದ್ದಾರೆ. ಚೀನಾದಿಂದ ಗೋವಾಕ್ಕೆ ಬರುವವರು ಕೆಲವರು ಮಾತ್ರ. ಆದರೆ ಕೇರಳದಿಂದ ಗೋವಾಕ್ಕೆ ಅಧಿಕ ಮಂದಿ ಬರುತ್ತಾರೆ. ಹಾಗಾಗಿ ವಿಮಾನ ನಿಲ್ದಾಣಗಳಿಗಿಂತ ರೈಲ್ವೆ ನಿಲ್ದಾಣಗಳತ್ತ ಗಮನ ಹರಿಸಬೇಕಿದೆ ಎಂದು ದಿಗಂಬರ ಕಾಮತ್ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಕೇಂದ್ರ ಸರ್ಕಾರ ನೀಡಿರುವ ಒಂದು ಸ್ಕಾೃನರನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಬೇರೆ ಸ್ಕಾೃನರ್‌ಗಳಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಸ್ಕಾೃನರ್ ಅಳವಡಿಕೆಗೆ ಪ್ರಯತ್ನ ಮುಂದುವರಿದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts