More

    ಸಹಜ ಜನಜೀವನಕ್ಕೆ ಕರೊನಾ ಬಿಸಿ

    ಮಂಗಳೂರು: ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಂಪು ಗುಂಪಾಗಿ ಜನ ಸೇರುವ ಮಾಲ್, ಚಿತ್ರಮಂದಿರಗಳನ್ನು ರಾಜ್ಯ ಸರ್ಕಾರ ಒಂದು ವಾರ ಬಂದ್ ಮಾಡುವಂತೆ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಶನಿವಾರ ಅಘೋಷಿತ ಬಂದ್ ವಾತಾವರಣ ಕಂಡು ಬಂತು.
    ಜನ ಗುಂಪಾಗಿ ಸೇರುವ ತಾಣಗಳಾದ ಚಿತ್ರಮಂದಿರ, ಮಾಲ್‌ಗಳು, ಪಬ್, ಪಾರ್ಕ್, ಈಜುಕೊಳ, ಸಭೆ ಸಮಾರಂಭಗಳು ಸೇರಿದಂತೆ ಹಲವು ತಾಣಗಳನ್ನು ಬಂದ್ ಮಾಡಿರುವುದರಿಂದ ದೈನಂದಿನ ವ್ಯಾಪಾರ, ವಹಿವಾಟು ಇಲ್ಲದೆ ಸಣ್ಣಮಟ್ಟಿನ ವ್ಯಾಪಾರಿಗಳು, ಕೂಲಿ ಕಾರ್ಮಿಕರು ತೊಂದರೆ ಅನುಭವಿಸಿದ್ದಾರೆ.

    ಮಾಲ್‌ಗಳು ಬಂದ್: ನಗರದ ಪ್ರಮುಖ ಮಾಲ್‌ಗಳಾದ ಬಿಗ್ ಬಜಾರ್, ಸಿಟಿ ಸೆಂಟರ್, ಫೋರಂ ಪಿಝಾ ಮೊದಲಾದ ಮಾಲ್‌ಗಳನ್ನು ಬೆಳಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬಳಿಕ ಬಂದ್ ಮಾಡಲಾಯಿತು. ಪ್ರವೇಶ ದ್ವಾರಗಳನ್ನೇ ಬಂದ್ ಮಾಡಿದ ಕಾರಣ ಯಾರಿಗೂ ಒಳ ಪ್ರವೇಶಿಸಲು ಅವಕಾಶ ಇರಲಿಲ್ಲ. ಬೆಳಗ್ಗೆ ಹಾಸ್ಟೆಲ್‌ಗಳಲ್ಲಿರುವ ಕೆಲವು ವಿದ್ಯಾರ್ಥಿಗಳು ಸಿಟಿ ಸೆಂಟರ್ ಮಾಲ್‌ಗೆ ಪ್ರವೇಶಿಸಿ ತಿರುಗಾಡುತ್ತಿದ್ದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ವಿಚಾರಿಸಿ ಹೊರಗೆ ಕಳುಹಿಸಿದ್ದಾರೆ. ಮಾಲ್‌ಗೆಂದು ಬಂದ ನೂರಾರು ಮಂದಿ ಹೊರಗಡೆ ಒಂದಷ್ಟು ಹೊತ್ತು ಸಮಯ ಕಳೆದು ಹಿಂತಿರುಗಿದ್ದಾರೆ. ಕೆಲವು ಮಾಲ್ ಸಿಬ್ಬಂದಿಗಳಿಗೂ ಬಂದ್ ಇರುವ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಅಲ್ಲಿ ತನಕ ಬಂದು ಹಿಂತಿರುಗಿದರು.

    ಚಿತ್ರ ಮಂದಿರಗಳು ಬಂದ್
    ಬೆಳಗ್ಗೆಯಿಂದಲೇ ಚಿತ್ರ ಮಂದಿರಗಳನ್ನು ಬಂದ್ ಮಾಡಲಾಗಿತ್ತು. ಪ್ರವೇಶ ದ್ವಾರದ ಗೇಟ್‌ಗಳನ್ನು ಬಂದ್ ಮಾಡಿದ್ದರು. ಮಾಲ್‌ಗಳು ಬಂದ್ ಆದ ಕಾರಣ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಕೂಡಾ ಬಂದ್ ಆಗಿದ್ದವು.

    ಊರಿಗೆ ಮರಳಿದ ವಿದ್ಯಾರ್ಥಿಗಳು
    ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಕೋರ್ಸ್‌ಗಳನ್ನು ಮಾಡುತ್ತಿರುವ ಹೊರ ರಾಜ್ಯದ, ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದಾರೆ. ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ರೈಲಿಗೆ ಕಾಯುತ್ತಿರುವ ದೃಶ್ಯ ಕಂಡು ಬಂತು.

    ಬಸ್‌ಗಳಲ್ಲೂ ಪ್ರಯಾಣಿಕರು ವಿರಳ
    ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಕಂಡು ಬಂದರು. ಮಂಗಳೂರಿನಿಂದ ಕೇರಳದ ಕಡೆಗೆ ಹೋಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಸ್ ಚಾಲಕ, ನಿರ್ವಾಹಕರು ಮಾಸ್ಕ್ ಧರಿಸಿ ಕಳೆದ ಹಲವು ದಿನಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮುಂಬೈ ಮೊದಲಾದ ಕಡೆಗೆ ಹೋಗುವ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಶನಿವಾರ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

    ಬೀದಿ ಬದಿ ವ್ಯಾಪಾರಿಗಳು ವಿರಳ
    ಬೀದಿ ಬದಿಗಳಲ್ಲಿ ಆಹಾರ ಮಾರಾಟ ಮಾಡದಂತೆ ಮಹಾನಗರಪಾಲಿಕೆ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸ್ಟೇಟ್‌ಬ್ಯಾಂಕ್, ಸೆಂಟ್ರಲ್ ಮಾರುಕಟ್ಟೆ, ಕಂಕನಾಡಿ ಮೊದಲಾದ ಕಡೆ ಬೀದಿ ವ್ಯಾಪಾರಸ್ಥರು ಸಂಖ್ಯೆ ಕಡಿಮೆಯಾಗಿತ್ತು.

    ಕ್ರಿಕೆಟ್ ಪಂದ್ಯಾವಳಿ ಸ್ಥಗಿತ
    ನಗರದ ನೆಹರು ಮೈದಾನದಲ್ಲಿ ತುಳು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ವತಿಯಿಂದ ಕೋಸ್ಟಲ್ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಸರ್ಕಾರದ ಆದೇಶವಿದ್ದರೂ ಕ್ರಿಕೆಟ್ ಮುಂದುವರಿದಾಗ ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿ ಪಂದ್ಯಾವಳಿ ಸ್ಥಗಿತ ಮಾಡುವಂತೆ ಸೂಚಿಸಿದರು. ಬಳಿಕ ಪಂದ್ಯಾಟ ಮೊಟಕುಗೊಳಿಸಿದರು.

    ಶಾಸಕ ವೇದವ್ಯಾಸ್ ಕಾಮತ್ ಪ್ರಾರ್ಥನೆ
    ಕರೊನಾ ಭೀತಿ ನಿವಾರಣೆಗಾಗಿ ಶಾಸಕ ಡಿ.ವೇದವ್ಯಾಸ್ ಕಾಮತ್ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಜಗತ್ತನ್ನು ಕಾಡುತ್ತಿರುವ ಕರೊನಾ ಮಹಾಮಾರಿ ಭಾರತದ ವಿವಿಧ ಕಡೆಗಳಲ್ಲಿ ಹಬ್ಬುತ್ತಿರುವುದು ಆತಂಕ ಉಂಟಾಗಿದೆ. ದೇಶದಲ್ಲಿ ಉಂಟಾಗಿರುವ ಕರೊನಾ ಭೀತಿ ದೂರವಾಗುವ ನಿಟ್ಟಿನಲ್ಲಿ ಮಂಗಳೂರಿನ ಎಲ್ಲ ದೇವಸ್ಥಾನ,ದೈವಸ್ಥಾನ, ಮಠ- ಮಂದಿರ, ಚರ್ಚ್, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಆಡಳಿತ ಮಂಡಳಿ ಹಾಗೂ ನಾಗರಿಕರಲ್ಲಿ ಮನವಿ ಮಾಡಿದರು. ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

    ಕರೊನಾ ಪರಿಹಾರಕ್ಕೆ ವಿಹಿಂಪ ವಿಶೇಷ ಪ್ರಾರ್ಥನೆ
    ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಪರಿಹರಿಸುವಂತೆ ಕೋರಿ ವಿಶ್ವ ಹಿಂದು ಪರಿಷತ್ ವತಿಯಿಂದ ಸೋಮನಾಥ ದೇವಾಲಯ ಉಳ್ಳಾಲ, ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಕುಂಪಲ, ವೈದ್ಯನಾಥ ದೈವಸ್ಥಾನ ಉಳ್ಳಾಲಬೈಲ್, ಕೊರಗಜ್ಜ ಆದಿ ದೈವಸ್ಥಾನ ಕುತ್ತಾರ್‌ನಲ್ಲಿ ಶುಕ್ರವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
    ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಗೋಪಾಲ್ ಕುತ್ತಾರ್, ಹಿಂದು ಸಮಾಜೋತ್ಸವ ಸಮಿತಿ ಉಳ್ಳಾಲ ಅಧ್ಯಕ್ಷ ಸುದರ್ಶನ ಶೆಟ್ಟಿ ನೆತ್ತಿಲಬಾಳಿಕೆ, ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಗೋರಕ್ಷ ಪ್ರಮುಖ್ ಗುರುಪ್ರಸಾದ್ ಉಳ್ಳಾಲ, ದುರ್ಗಾವಾಹಿನಿ ಪ್ರಮುಖ್ ಗೌಶಿತ ಕುತ್ತಾರ್‌ಉಳ್ಳಾಲ, ಪ್ರಖಂಡ ಪ್ರಮುಖರಾದ ಶೈಲೇಶ್ ಅಡ್ಕ, ಚೇತನ್ ಅಸೈಗೋಳಿ, ನವೀನ್ ಕೊಣಾಜೆ, ಶಿವಪ್ರಸಾದ್ ಕೊಣಾಜೆ ಉಪಸ್ಥಿತರಿದ್ದರು.

    ಬಡ ಜನರಿಗೆ ಸಹಾಯ ಮಾಡಲು ಮನವಿ
    ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಿಂದ ದಿನಕೂಲಿ ನೌಕರರು ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಜನಪ್ರತಿನಿಧಿಗಳು, ಸ್ಥಿತಿವಂತರು ಸಹಾಯ ಮಾಡಬೇಕು ಎಂದು ಬಿಜೆಪಿ ದ.ಕ ಜಿಲ್ಲಾ ವಕ್ತಾರ ಜಗದೀಶ ಶೇಣವ ಮನವಿ ಮಾಡಿದ್ದಾರೆ.
    ಬೀದಿ ಬದಿ ವ್ಯಾಪಾರಿಗಳು ಕೂಡ ಒಂದು ವಾರ ಬಂದ್ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ದುಡಿದು ತಿನ್ನುವ ಬಡ ವರ್ಗ ಒಂದು ಹೊತ್ತಿನ ಊಟಕ್ಕೆ ಸಂಕಷ್ಟ ಎದುರಾಗಿದೆ. ಅವರಿಗೆ ಸಮಾಜ ಸ್ಪಂದಿಸಬೇಕಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇಂದು ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ
    ವಿಶ್ವದ್ಯಾಂತ ವ್ಯಾಪಿಸಿರುವ ಮಾರಕ ಕಾಯಿಲೆ ಕರೊನಾ ಶಮನಕ್ಕಾಗಿ ಮಾ.15ರಂದು ಬೆಳಗ್ಗೆ 6ರಿಂದ ಕದ್ರಿ ಶ್ರೀ ಮಂಜುನಾಥ ದೇವಳ ಪ್ರಾಂಗಣದಲ್ಲಿ ಧನ್ವಂತರಿ ಪಾರಾಯಣ, ರುದ್ರ ಪಠಣ, ವಿಷ್ಣು ಸಹಸ್ರನಾಮ, 7.15ಕ್ಕೆ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ, ಸಾಮಾಜಿಕ ಪ್ರಮುಖರ ಉಪಸ್ಥಿತಿಯಲ್ಲಿ ಪ್ರಾರ್ಥನೆ ನೆರವೇರಲಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

    ಪಿಲಿಕುಳಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
    ಗುರುಪುರ: ರಾಜ್ಯದಲ್ಲಿ ಕರೊನಾ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಿದ್ದು, ಸರ್ಕಾರದ ಆದೇಶದಂತೆ ಪಿಲಿಕುಳ ಜೈವಿಕ ಉದ್ಯಾವನ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರ(ತಾರಾಲಯ)ದಲ್ಲಿ ಮಾ.14ರಿಂದ ಒಂದು ವಾರ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.
    ಪ್ರವಾಸಿ ತಾಣಗಳು ಮತ್ತು ಹೆಚ್ಚು ಜನರು ಸೇರುವಲ್ಲಿ ಕರೊನಾ ವೈರಸ್ ವೇಗವಾಗಿ ಹರಡುತ್ತದೆ ಎಂಬ ಕಾರಣಕ್ಕೆ ಸದ್ಯದ ಮಟ್ಟಿಗೆ ರಾಜ್ಯದ ಎಲ್ಲ ಪ್ರವಾಸಿ ತಾಣ ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಜಿಲ್ಲಾಡಳಿತ ಸುತ್ತೋಲೆ ರವಾನಿಸಿದೆ.
    ರಾಜ್ಯ ಸರ್ಕಾರದ ಆದೇಶದಂತೆ ಪಿಲಿಕುಳ ನಿಸರ್ಗಧಾಮ ಬಂದ್ ಆಗಿರುತ್ತದೆ. ಇದರಿಂದ ಒಂದು ವಾರದಲ್ಲಿ ಅಂದಾಜು 10 ಲಕ್ಷ ರೂ. ಆದಾಯ ಕಡಿತವಾಗಲಿದೆ. ಪರಿಸ್ಥಿತಿ ಸುಧಾರಿಸಿದರೆ ಆದೇಶ ಪರಿಷ್ಕರಣೆ ಆಗಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts