More

    ತುಮಕೂರು ತಲುಪಿದ ಕರೊನಾ ವ್ಯಾಕ್ಸಿನ್ ; 12 ಸಾವಿರ ಡೊಸೇಜ್‌ಗೆ ಪೊಲೀಸ್ ಕಾವಲು

    ತುಮಕೂರು : ಶೀಘ್ರದಲ್ಲಿಯೇ ಕರೊನಾ ವಾರಿಯರ್ಸ್‌ಗಳಿಗೆ ಹಂಚಿಕೆಯಾಗಲಿರುವ ಬಹುನಿರೀಕ್ಷಿತ ಕರೊನಾ ವ್ಯಾಕ್ಸಿನ್ ಪೊಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ರಾತ್ರಿ ತುಮಕೂರು ಜಿಲ್ಲಾಸ್ಪತ್ರೆ ತಲುಪಿತು.

    12000 ಡೋಸೇಜ್ ಕೋವಿಶೀಲ್ಡ್ ವ್ಯಾಕ್ಸಿನ್ ಬೆಂಗಳೂರಿನಿಂದ ಜಿಲ್ಲೆಗೆ ವರ್ಗಾವಣೆಯಾಗಿದ್ದು ಸರ್ಕಾರದ ಮಾಗಸೂಚಿಯಂತೆ ಜ.16ರಿಂದ 13 ಕೇಂದ್ರಗಳಲ್ಲಿ ವಾಕ್ಸಿನ್ ನೀಡಲಾಗುತ್ತದೆ. ಜಿಲ್ಲೆಗೆ ಬಂದ ಎಲ್ಲ ಡೋಸೇಜ್‌ಗಳನ್ನು ಜಿಲ್ಲಾಸ್ಪತ್ರೆಯ ಶೀತಲಕೇಂದ್ರದಲ್ಲಿ ಶೇಖರಿಸಿಡಲಾಗಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.

    ಬುಧವಾರ ರಾತ್ರಿ ಜಿಲ್ಲೆಗೆ ಬಂದ ವ್ಯಾಕ್ಸಿನ್‌ಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ನೇತೃತ್ವದ ವೈದ್ಯರ ತಂಡ ಪರಿಶೀಲಿಸಿ, ಪೂರ್ವ ನಿರ್ಧಾರಿತ ಶೇಖರಣಾ ಕೇಂದ್ರಗಳಿಗೆ ರವಾನಿಸಿತು. ಈ ಸಂದರ್ಭದಲ್ಲಿ ಆರ್‌ಸಿಎಚ್ ವೈದ್ಯಾಧಿಕಾರಿ ಡಾ.ಕೇಶವ್‌ರಾಜ್, ಡಿಎಸ್‌ಒ ಡಾ.ಮೋಹನ್‌ದಾಸ್ ಹಾಗೂ ಆರೋಗ್ಯ ಸಿಬ್ಬಂದಿ ಹಾಜರಿದ್ದು, ದೃಢೀಕರಿಸಿದರು.

    ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಕರೊನಾ ಲಸಿಕಾ ಅಭಿಯಾನ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಕರೊನಾ ತಂತ್ರಾಂಶದ ಮೂಲಕ ಲಸಿಕೆ ವಿತರಣೆ, ಫಲಾನುಭವಿಗಳಿಗೆ ಸಂದೇಶ, ಲಸಿಕಾ ಮಾಹಿತಿ ನಮೂದಿಸುವ ವ್ಯವಸ್ಥೆಯಾಗಿದೆ.

    ನರ್ಸಿಂಗ್ ವಿದ್ಯಾರ್ಥಿಗಳಿಗೂ ವ್ಯಾಕ್ಸಿನ್ : ವ್ಯಾಕ್ಸಿನ್ ನೀಡಲು ತಾಲೀಮು ಕೂಡ ನಡೆಸಲಾಗಿದ್ದು, ಜಿಲ್ಲಾಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ, ನಗರ ಪ್ರಾಥಮಿಕ ಕೇಂದ್ರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶೇಖರಿಸಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕೌನ್ಸೆಲಿಂಗ್ ನಡೆಸಿ, ವ್ಯಾಕ್ಸಿನ್ ಕೊಟ್ಟ ನಂತರ ಅರ್ಧ ಗಂಟೆ ವಿಶ್ರಾಂತಿ ಪಡೆಯಲು ಸೂಚಿಸುವ ಜತೆಗೆ ನಿಗಾದಲ್ಲಿಟ್ಟು ನಂತರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೂ ವ್ಯಾಕ್ಸಿನ್ ಲಭ್ಯವಾಗಲಿದೆ.

    ಕರೊನಾದಿಂದ ತತ್ತರಿಸಿರುವ ನಮಗೆಲ್ಲಾ ಶುಭ ಸುದ್ದಿ ಬಂದಿದ್ದು, ಜಿಲ್ಲೆಗೆ 12 ಸಾವಿರ ಡೋಸೇಜ್ ಕರೊನಾ ವ್ಯಾಕ್ಸಿನ್ ಬುಧವಾರ ರಾತ್ರಿ ಬಂದುತಲುಪಿದೆ. ಸರ್ಕಾರದ ಮಾರ್ಗಸೂಚಿಯಂತೆ ಜ.16ರಿಂದ ಜಿಲ್ಲೆಯಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕರೊನಾ ವಿರುದ್ಧ ಕಾರ್ಯನಿರ್ವಹಿಸುತ್ತಿರುವವರಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ.
    ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ

    ಕರೊನಾಗೆ ಹೆಬ್ಬೂರಿನ ಯುವತಿ ಬಲಿ : ಕಳೆದೊಂದು ವಾರದಿಂದ ಕರೊನಾ ಸೋಂಕಿತರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು ಬುಧವಾರ 8 ಜನರಿಗೆ ಸೋಂಕು ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 173ಕ್ಕೆ ಇಳಿದಿದ್ದು, ಜಿಲ್ಲಾಸ್ಪತ್ರೆ ಐಸಿಯುನಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 23467ಕ್ಕೇರಿದ್ದು, ಆಸ್ಪತ್ರೆಯಿಂದ 31 ಜನರು ಬಿಡುಗಡೆಯಾಗಿ ಈವರೆಗೆ 22848 ಸೋಂಕಿತರು ಗುಣಮುಖರಾಗಿದ್ದಾರೆ. ತುಮಕೂರು ತಾಲೂಕು ಹೆಬ್ಬೂರಿನ 29 ವರ್ಷದ ಯುವತಿ ಕರೊನಾಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ, ಜ್ವರ, ಶೀತ ಹಾಗೂ ಎದೆನೋವು ಕಾರಣಕ್ಕೆ ಜ.7ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನಲ್ಲಿ 3 ಜನರಿಗೆ ಸೋಂಕು ದೃಢವಾಗಿದ್ದು, ಉಳಿದೆಲ್ಲಾ ತಾಲೂಕಿನಲ್ಲಿಯೂ ಕನಿಷ್ಠ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts