More

    ದತ್ತ ಜಯಂತಿಗೆ ಆರ್ಥಿಕ ಸಂಕಷ್ಟದ ಕರಿನೆರಳು

    ಚಿಕ್ಕಮಗಳೂರು: ದತ್ತಪೀಠದಲ್ಲಿ ಜಿಲ್ಲಾಡಳಿತ ಆಚರಿಸುವ ವಾರ್ಷಿಕ ದತ್ತ ಜಯಂತಿಗೆ ಕರೊನಾ ಭೀತಿ ಆವರಿಸಿರುವುದರ ಜತೆಗೆ ಆರ್ಥಿಕ ಸಂಕಷ್ಟ ತಲೆದೋರಿದೆ. ಆರ್ಥಿಕ ಮುಗ್ಗಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ದತ್ತ ಜಯಂತಿ ಆಚರಣೆಗಾಗಿ ಕನಿಷ್ಠ 15 ಲಕ್ಷ ರೂ. ಬಿಡುಗಡೆ ಮಾಡುವಂತೆ ಮುಜರಾಯಿ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.

    ಮುಜರಾಯಿ ಇಲಾಖೆಗೆ ಸೇರಿದ ಇನಾಂ ದತ್ತಾತ್ರೇಯ ಪೀಠ ಹಾಗೂ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ ಹಾಗೂ ಉರುಸ್ ಸಮಾರಂಭವನ್ನು ಜಿಲ್ಲಾಡಳಿತವೇ ನಡೆಸುತ್ತಿದೆ. ಪ್ರತಿ ವರ್ಷ ನಡೆಯುವ ದತ್ತ ಜಯಂತಿಗೆ ಮುಜರಾಯಿ ದೇವಸ್ಥಾನಗಳಿಂದ ಸಂಗ್ರಹವಾದ ಹುಂಡಿ ಹಣ ಬಳಸಲಾಗುತ್ತಿತ್ತು.

    ಕರೊನಾ ಸಂಕಷ್ಟ ತಲೆದೋರಿರುವ ಕಾರಣ ಜಿಲ್ಲೆಯ ಯಾವುದೇ ಮುಜರಾಯಿ ದೇವಸ್ಥಾನದ ಹುಂಡಿಯಲ್ಲಿ ನಿರೀಕ್ಷಿತ ಪ್ರಮಾಣದ ಕಾಣಿಕೆ ಹಣ ಸಂಗ್ರಹವಾಗಿಲ್ಲ. ಹಾಗಾಗಿ ದತ್ತ ಜಯಂತಿ ಉತ್ಸವಕ್ಕೆ ಮೀಸಲಾದ ನಿಧಿಯಲ್ಲಿ ಹಣವೇ ಇಲ್ಲದಂತಾಗಿದೆ.

    ಡಿ.28ರಿಂದ 30ರವರೆಗೆ ನಡೆಯುವ ದತ್ತ ಜಯಂತಿ ಸಂದರ್ಭ ಭಕ್ತರಿಗೆ ಪ್ರಸಾದ, ಮೂಲ ಸೌಕರ್ಯ ಸೇರಿ ಸರ್ಕಾರಿ ಆಚರಣೆಯ ಸಕಲ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕಿದೆ. ಹಾಗಾಗಿ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.

    ಸರ್ಕಾರದಿಂದ 11 ಲಕ್ಷ ರೂ. ತಸ್ತೀಕ್: ಜಿಲ್ಲೆಯ ಮುಜರಾಯಿ ಇಲಾಖೆಗೆ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ 11 ಲಕ್ಷ ರೂ. ತಸ್ತೀಕ್ ಹಣ ಹೊರತುಪಡಿಸಿ ಇನ್ಯಾವುದೇ ಅನುದಾನ ದೊರೆಯುತ್ತಿಲ್ಲ. ಇಲಾಖೆಯ ಎಲ್ಲ ವೆಚ್ಚಗಳನ್ನು ದೇವಸ್ಥಾನಗಳಿಂದ ಸಂಗ್ರಹವಾಗುವ ಕಾಣಿಕೆ ಹಣದಲ್ಲೇ ಸರಿದೂಗಿಸಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ದತ್ತ ಜಯಂತಿಗೆ ಹಣ ಹೊಂದಿಸಲು ಸಾಧ್ಯವಾಗದು ಎಂದೇ ಹೇಳಲಾಗುತ್ತಿದೆ.

    ಗಿರಿತಪ್ಪಲಿನಲ್ಲಿ ಸದಾ ಗಾಳಿ, ಮಳೆ ವಾತಾವರಣವಿರುವ ಕಾರಣಕ್ಕೆ ಆಗಾಗ ವಿದ್ಯುತ್ ಸಮಸ್ಯೆ ತಲೆದೋರುತ್ತಿದೆ. ಹಾಗಾಗಿ ಜನರೇಟರ್ ಬಳಸುವ ಅನಿವಾರ್ಯತೆ ಇದೆ. ದತ್ತಪೀಠದ ನಿರ್ವಹಣೆ ಹಾಗೂ ಉಸ್ತುವಾರಿಗಾಗಿ 10 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ವಾರದಲ್ಲಿ ಕನಿಷ್ಠ ಎರಡ್ಮೂರು ಬಾರಿ ದತ್ತಪೀಠಕ್ಕೆ ಹೋಗಿಬರಬೇಕಾಗುತ್ತದೆ. ಇದೆಲ್ಲದಕ್ಕೂ ಹಣದ ಸಮಸ್ಯೆ ಎದುರಾಗಿದೆ.

    ಬಜೆಟ್​ನಲ್ಲಿ ಹಣ ಕಾಯ್ದಿರಿಸುವುದು ಸೂಕ್ತ: ದತ್ತ ಜಯಂತಿ ಕಾರ್ಯಕ್ರಮ ಸೇರಿ ದತ್ತಪೀಠದ ನಿರ್ವಹಣೆ ನಿರಂತರ ನಡೆಯುವ ಹಿನ್ನೆಲೆಯಲ್ಲಿ ಬಜೆಟ್​ನಲ್ಲೇ ಪ್ರತಿ ವರ್ಷ ಕನಿಷ್ಠ 50 ಲಕ್ಷ ರೂ. ಕಾಯ್ದಿರಿಸಿದರೆ ಕಾರ್ಯಕ್ರಮಕ್ಕೆ ಅಡಚಣೆಯಾಗದು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆಯಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ.

    ಮುಜರಾಯಿ ಇಲಾಖೆಗೆ ಸೇರಿದ ಜಿಲ್ಲೆಯ 880 ದೇವಾಲಯಗಳಲ್ಲಿ 3 ಎ ದರ್ಜೆ, 8 ಬಿ ದರ್ಜೆ ಹಾಗೂ ಉಳಿದವು ಸಿ ದರ್ಜೆ ದೇವಾಲಯಗಳಿವೆ. ಕರೊನಾದಿಂದ ಈ ವರ್ಷ ಧಾರ್ವಿುಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಆದಾಯವೇ ಇಲ್ಲದಂತಾಗಿದೆ.

    ಠೇವಣಿ ಬಳಸುವ ಅನಿವಾರ್ಯತೆ: ಎ ದರ್ಜೆಯ ಕಳಸದ ಕಲಶೇಶ್ವರ, ಕಿಗ್ಗಾ ಋಷ್ಯಶೃಂಗೇಶ್ವರ, ಇನಾಂ ದತ್ತಾತ್ರೇಯ ಪೀಠದ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾ ಮುಚ್ಚಿದ್ದರಿಂದ ಆದಾಯವಿಲ್ಲದೆ ನಿರ್ವಹಣೆಗೆ ಠೇವಣಿ ಹಣ ಬಳಸುವ ಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ಕಲಶೇಶ್ವರ ದೇವಾಲಯದಿಂದ ಒಂದು ಕೋಟಿ, ಋಷ್ಯಶೃಂಗೇಶ್ವರ ದೇವಾಲಯದಿಂದ 55 ಲಕ್ಷ ಹಾಗೂ ಐಡಿ ಪೀಠದಿಂದ 82 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಶೇ.5ರಷ್ಟು ಸಹ ಆದಾಯ ಸಂಗ್ರಹವಾಗಿಲ್ಲ ಎಂಬ ಮಾಹಿತಿ ಇದೆ.

    ಬಿ ವರ್ಗದಲ್ಲಿರುವ ಬಿಸಗ್ನಿಮಠದ ಸಿದ್ದೇಶ್ವರ, ಬಿಂಡಿಗ ದೇವೀರಮ್ಮ, ಮೂಡಿಗೆರೆ ತಾಲೂಕು ಅತ್ತಿಗೆರೆ ಅಣ್ಣಪ್ಪಸ್ವಾಮಿ, ಬಾಳೆಹೊಳೆಯ ಚನ್ನಕೇಶವ, ತರೀಕೆರೆ ತಾಲೂಕು ಅಮೃತಾಪುರದ ಅಮೃತೇಶ್ವರ, ಭಕ್ತನಕಟ್ಟೆಯ ಜುಂಜಪ್ಪಸ್ವಾಮಿ, ಸಖರಾಯಪಟ್ಟಣದ ಶಕುನರಂಗನಾಥಸ್ವಾಮಿ, ಅಂತರಘಟ್ಟೆ ದುರ್ಗಾಂಬಾ ದೇವಾಲಯಗಳ ಆದಾಯವೂ ಕಡಿಮೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts