More

    ವೇಗವಾಗಿ ಮುನ್ನುಗ್ಗುತ್ತಿದೆ ಕರೊನಾ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್​ನ 2ನೇ ಅಲೆಯ ಹರಡುವಿಕೆ ಅಪಾಯ ಸ್ಥಿತಿಗೆ ತಲುಪುತ್ತಿದೆ. ಒಂದು ತಿಂಗಳ ಅವಧಿಯಲ್ಲಿ 2,667 ಜನರಿಗೆ ಸೋಂಕು ಹರಡಿದೆ. 50 ಜನರನ್ನು ಬಲಿ ತೆಗೆದುಕೊಂಡಿದ್ದು ಕರಾಳತೆಯ ಮುನ್ಸೂಚನೆ ನೀಡಿದೆ.

    ಏಪ್ರಿಲ್ 7ರವರೆಗೆ ಜಿಲ್ಲೆಯಲ್ಲಿ ಮೊದಲ ಅಲೆ ಸೇರಿ 11,354 ಜನರಲ್ಲಿ ಸೋಂಕು ಖಚಿತಪಟ್ಟಿತ್ತು. ಮೇ 7ರ ವೇಳೆಗೆ ತನ್ನ ಕಬಂಧಬಾಹುವನ್ನು ವಿಸ್ತರಿಸಿ 2,667 ಜನರಿಗೆ ಹರಡಿದೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಮಂದಗತಿಯಲ್ಲಿದ್ದ ವೈರಸ್ ಹರಡುವಿಕೆ ಏಪ್ರಿಲ್​ನಲ್ಲಿ ವೇಗ ಪಡೆದುಕೊಂಡಿತು. ಮೇ ತಿಂಗಳಲ್ಲಂತೂ ಕೇವಲ 6 ದಿನಗಳಲ್ಲಿ 1,468 ಜನರಲ್ಲಿ ಸೋಂಕು ಕಂಡುಬಂದಿದ್ದು, 20 ಜನರನ್ನು ಬಲಿ ಪಡೆದಿದೆ.

    ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 11,221ರಷ್ಟಿತ್ತು. ಅಲ್ಲಿಂದ ಮೇ 6ರವರೆಗೆ ಬರೋಬ್ಬರಿ 2,800 ಜನರಲ್ಲಿ ಹರಡಿದೆ. ಅಂದರೆ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ 2ನೇ ಅಲೆಯ ಸೋಂಕು ಹರಡಿದ್ದು, 133 ಜನರಿಗೆ ಮಾತ್ರ. ಏಪ್ರಿಲ್ ಅಂತ್ಯ ಹಾಗೂ ಮೇ ಆರಂಭದಲ್ಲಿ ದಿನಕ್ಕೆ ಸರಾಸರಿ 150ರಿಂದ 200 ಜನರಲ್ಲಿ ಸೋಂಕು ಹರಡತೊಡಗಿದೆ. ಅಲ್ಲದೆ ದಿನಕ್ಕೆ ಸರಾಸರಿ 3ರ ಲೆಕ್ಕದಲ್ಲಿ ಸಾವಿನ ಸಂಖ್ಯೆಯೂ ಕಂಡುಬರತೊಡಗಿದೆ. ಅಲ್ಲದೆ ಮೊದಲ ಅಲೆಗಿಂತ 2ನೇ ಅಲೆಯ ಹರಡುವಿಕೆ ವೇಗವಾಗಿದ್ದು, ಮೊದಲ ಅಲೆಯಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ 200ರ ಗಡಿ ದಾಟಿರಲಿಲ್ಲ. ಆದರೆ, 2ನೇ ಅಲೆಯಲ್ಲಿ ಮೇ 4ರಂದು ಸೋಂಕಿತರ ಸಂಖ್ಯೆ 400 ಗಡಿ ದಾಟಿ ದಾಖಲೆ ಸೃಷ್ಟಿಸಿದೆ.

    ಎಚ್ಚರಿಕೆ ವಹಿಸುವುದು ಸೂಕ್ತ: ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಗಮನಿಸಿದರೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತ. ಕರೊನಾ ವೈರಸ್ ನಿಯಂತ್ರಣಕ್ಕೆ ಲಾಕ್​ಡೌನ್ ಮದ್ದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಲಾಕ್​ಡೌನ್ ಘೊಷಣೆಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಜನತೆ ಸ್ವಯಂ ಎಚ್ಚರಿಕೆ ವಹಿಸದಿದ್ದರೆ ಮುಂದೆ ಜಿಲ್ಲೆಯ ಆಸ್ಪತ್ರೆಗಳಲ್ಲಿಯೂ ಬೆಡ್ ಸಿಗದ ಸ್ಥಿತಿ ನಿರ್ವಣವಾಗಬಹುದು.

    ಜಿಲ್ಲೆಯಲ್ಲಿ ಕೇವಲ 1,115ಬೆಡ್​ಗಳು: ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 150ರಿಂದ 200 ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಆದರೆ, ಅವರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಕೇವಲ 1,115ಬೆಡ್​ಗಳು ಇವೆ. ಅವುಗಳಲ್ಲಿ ಶುಕ್ರವಾರದ ವೇಳೆಗೆ 577 ಬೆಡ್​ಗಳು ಭರ್ತಿಯಾಗಿದ್ದು, 538 ಬೆಡ್​ಗಳು ಖಾಲಿಯಿವೆ.

    ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 172, ಬ್ಯಾಡಗಿ ಆಸ್ಪತ್ರೆಯಲ್ಲಿ 50, ಹಾನಗಲ್ಲ ಆಸ್ಪತ್ರೆಯಲ್ಲಿ 48, ರಾಣೆಬೆನ್ನೂರ ಆಸ್ಪತ್ರೆಯಲ್ಲಿ 30, ಹಿರೇಕೆರೂರ 30, ಸವಣೂರ ಆಸ್ಪತ್ರೆಯಲ್ಲಿ 45, ಶಿಗ್ಗಾಂವಿ ಆಸ್ಪತ್ರೆಯಲ್ಲಿ 44 ಬೆಡ್​ಗಳು ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 419 ಬೆಡ್​ಗಳಿವೆ. ಇದರಲ್ಲಿ ಶುಕ್ರವಾರದ ವೇಳೆಗೆ 268 ಬೆಡ್​ಗಳು ಭರ್ತಿಯಾಗಿವೆ. 151 ಬೆಡ್​ಗಳು ಮಾತ್ರ ಖಾಲಿಯಿವೆ. ಅದರಲ್ಲಿಯೂ ಶಿಗ್ಗಾಂವಿ ಹಾಗೂ ರಾಣೆಬೆನ್ನೂರನಲ್ಲಿ ಬೆಡ್​ಗಳೆಲ್ಲ ಭರ್ತಿಯಾಗಿವೆ. ಹಾನಗಲ್ಲನಲ್ಲಿ 4, ಹಿರೇಕೆರೂರ 12, ಬ್ಯಾಡಗಿ 27, ಸವಣೂರ 28, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 80 ಬೆಡ್​ಗಳು ಖಾಲಿಯಿವೆ. ಹಾವೇರಿಯಲ್ಲಿ 2, ರಾಣೆಬೆನ್ನೂರನಲ್ಲಿ 2 ಸೇರಿ 4 ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ಆರಂಭಿಸಿವೆ. ಇಲ್ಲಿ ಒಟ್ಟು 141 ಬೆಡ್​ಗಳಿದ್ದು, ಅದರಲ್ಲಿ 59 ಭರ್ತಿಯಾಗಿದ್ದು, 82 ಖಾಲಿಯಿವೆ.

    ಕೋವಿಡ್ ಕೇರ್ ಸೆಂಟರ್​ಗಳಲ್ಲಿ 555 ಬೆಡ್: ಜಿಲ್ಲೆಯ 7 ತಾಲೂಕುಗಳಲ್ಲಿ ತಲಾ ಒಂದರಂತೆ 7 ಕೋವಿಡ್ ಕೇರ್​ಗಳನ್ನು ತೆರೆಯಲಾಗಿದೆ. ಇಲ್ಲಿ 555 ಬೆಡ್​ಗಳಿದ್ದು, 250 ಬೆಡ್​ಗಳು ಭರ್ತಿಯಾಗಿದ್ದು, 305 ಬೆಡ್​ಗಳು ಖಾಲಿ ಉಳಿದಿವೆ.

    ಸೋಂಕು ವ್ಯಾಪಕವಾಗಲು ಕಾರಣ

    ಜಿಲ್ಲೆಯಲ್ಲಿ ಕರೊನಾ ಸೋಂಕು ಬೇಕಾಬಿಟ್ಟಿಯಾಗಿ ಹರಡಲು ಆರೋಗ್ಯ ಇಲಾಖೆಯ ಕೆಲವು ನಿರ್ಣಯಗಳು ಕಾರಣವಾಗುತ್ತಿವೆ ಎಂಬ ಸಂಶಯ ಮೂಡತೊಡಗಿದೆ. ಸೋಂಕು ಕಂಡು ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗುತ್ತದೆ. ಆದರೆ, ಸ್ವ್ಯಾಬ್ ಟೆಸ್ಟ್ ವರದಿ ಕೆಲವೊಮ್ಮೆ ವಾರಗಟ್ಟಲೇ ಬರುವುದೇ ಇಲ್ಲ. ಅಲ್ಲದೆ, ವರದಿ ಬರುವ ಮುನ್ನವೇ ಕ್ವಾರಂಟೈನ್​ನಲ್ಲಿದ್ದವರನ್ನು ಮನೆಗೆ ಕಳಿಸಲಾಗುತ್ತಿದೆ. ಬಳಿಕ ಪಾಸಿಟಿವ್ ವರದಿ ಬಂದರೆ ಆಸ್ಪತ್ರೆಗೆ ಕರೆ ತರುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಅಲ್ಲದೆ ಪಾಸಿಟಿವ್ ಬಂದವರ ಪ್ರಥಮ ಸಂರ್ಪತರನ್ನು ಪತ್ತೆ ಹಚ್ಚುವ ಕಾರ್ಯವೂ ಚುರುಕಾಗಿ ನಡೆಯುತ್ತಿಲ್ಲ. ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡಲು ಕಾರಣವಾಗಿದೆ ಎಂಬ ದೂರುಗಳು ಕೇಳಿಬರತೊಡಗಿವೆ.

    ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆಯಿಲ್ಲ. ಪಾಸಿಟಿವ್ ಬಂದಿದ್ದರೂ ರೋಗದ ಯಾವುದೇ ಲಕ್ಷಣಗಳಿಲ್ಲದವರನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಬೆಡ್​ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುತ್ತಿದೆ.

    | ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts