More

    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಕರೊನಾ ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ ಬುಧವಾರ 11 ಮಹಿಳೆಯರು, 10 ಪುರುಷರು, 1 ಮಗು ಸಹಿತ 22 ಮಂದಿಗೆ ಕರೊನಾ ಪಾಸಿಟಿವ್ ಹಾಗೂ 218 ಮಂದಿಗೆ ವರದಿ ನೆಗಟಿವ್ ಬಂದಿದೆ. 397 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.

    ಪಾಸಿಟಿವ್ ಬಂದವರಲ್ಲಿ 5 ಮಂದಿ ಮಹಾರಾಷ್ಟ್ರದಿಂದ, ಬೆಂಗಳೂರು, ತೆಲಂಗಾಣದಿಂದ ತಲಾ ಒಬ್ಬರು ಆಗಮಿಸಿದ್ದಾರೆ. 14 ಮಂದಿ ಸಂಪರ್ಕ ಹಿನ್ನಲೆ ಹೊಂದಿದ್ದಾರೆ. ಅಬುಧಾಬಿಯಿಂದ ಆಗಮಿಸಿದ ಕಾಪು ತಾಲೂಕಿನ 1 ವರ್ಷದ ಮಗುವಿಗೆ ಕರೊನಾ ಪಾಸಿಟಿವ್ ಬಂದಿದೆ. ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ 156 ಸಕ್ರಿಯ ಪ್ರಕರಣಗಳಿವೆ. 263 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, 20 ಮಂದಿ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ.
    ಬೈಂದೂರು ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಬುಧವಾರ ಕರೊನಾ ಪಾಸಿಟಿವ್ ಬಂದಿದ್ದು, ಈಕೆಯ ಸಂಪರ್ಕ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ ಎಂದು ಡಿಎಚ್‌ಒ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. 2 ಪರೀಕ್ಷೆ ಬರೆದ ಬಳಿಕ ಈಕೆಗೆ ಜ್ವರ ಕಾಣಿಸಿಕೊಂಡಿತ್ತು.

    ಉಡುಪಿಯಲ್ಲಿ ಮನೆಮನೆ ಸಮೀಕ್ಷೆ: ಉಡುಪಿ: ಜಿಲ್ಲೆಯಲ್ಲಿ ಸಂಪರ್ಕ ಹಿನ್ನೆಲೆ ಇಲ್ಲದ ಯಾವುದೇ ಪ್ರಕರಣಗಳು ಸದ್ಯಕ್ಕೆ ಕಂಡುಬಂದಿಲ್ಲ. ಹಾಗಾಗಿ ಕರೊನಾ ಸಮುದಾಯಕ್ಕೆ ಹರಡಿರುವುದಕ್ಕೆ ಪುರಾವೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದು, ಈ ರೋಗ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಲು ಮನೆ, ಮನೆ ಸರ್ವೇ ಮಾಡಲು ನಿರ್ಧರಿಸಲಾಗಿದೆ. ಉಸಿರಾಟ, ಜ್ವರ, ಶೀತ, ಕೆಮ್ಮು ಬಾಧಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪ್ರತಿದಿನ ಮುಂಬೈಯಿಂದ 250-300 ಮಂದಿ ರೈಲು ಹಾಗೂ ಬೇರೆ ವಾಹನ ಗಳಲ್ಲಿ ಜಿಲ್ಲೆಗಳಲ್ಲಿ ಬರುತ್ತಿದ್ದಾರೆ. ಇವರಲ್ಲಿ ವಿಶೇಷ ವರ್ಗ ಮತ್ತು ರೋಗದ ಲಕ್ಷಣಗಳಿರುವವರನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದೇವೆ. ಆದುದರಿಂದ ಜಿಲ್ಲೆಯಲ್ಲಿ ಪ್ರತಿದಿನ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ ಎಂದರು. ಪ್ರತಿ ದಿನ ಐದಾರು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕ ಇದ್ದವರು ಸೇರಿದ್ದಾರೆ. ಕರೊನಾ ವಾರಿಯರ್ಸ್, ವೈದ್ಯರು ಹಾಗೂ ಪೊಲೀಸರಲ್ಲಿ ಸೋಂಕು ಕಂಡುಬಂದಿದೆ. ಬಸ್ ಚಾಲಕರು ಹಾಗೂ ಜವಳಿ ವ್ಯಾಪಾರಿಗೆ ಬೆಂಗಳೂರು ಹೋಗಿ ಬಂದ ಪರಿಣಾಮ ಪಾಸಿಟಿವ್ ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಕರೊನಾ ಸಮುದಾಯಕ್ಕೆ ಹರಡಿರುವ ಪ್ರಕರಣಗಳು ಈವರೆಗೆ ಕಂಡುಬಂದಿಲ್ಲ. ಆದುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕಾದುದು ಮುಖ್ಯ ಎಂದು ಹೇಳಿದರು.

    ರ‌್ಯಾಂಡಮ್ ಚೆಕ್‌ಗೆ ನಿರ್ಧಾರ: ಸರ್ಕಾರದ ಸೂಚನೆಯಂತೆ ಮಾಲ್‌ಗಳಲ್ಲಿರುವವರು, ಡೆಲಿವರಿ ಬಾಯ್‌ಗಳು, ಸೇಲ್ಸ್‌ಮೆನ್‌ಗಳು, ವ್ಯಾಪಾರಸ್ಥರು, ಬಸ್ ಚಾಲಕರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್‌ಗಳ 600 ಚಾಲಕರು ಮತ್ತು ನಿರ್ವಹಕರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ಐಸಿಯುನಲ್ಲಿ ನಾಲ್ಕು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ. ಒಬ್ಬರು ಗಂಭೀರವಾಗಿದ್ದರೂ ಅವರಲ್ಲಿ ಶೇ.25ರಷ್ಟು ಚೇತರಿಕೆ ಕಂಡುಬಂದಿದೆ. ಎಸೆಸೆಲ್ಸಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಕರೊನಾ ಹರಡಿದೆ ಎಂಬುದಕ್ಕೆ ಪುರಾವೆ ಇಲ್ಲ. ಆ ರೀತಿ ಆಗದಂತೆ ಎಲ್ಲವೂ ಶಿಸ್ತುಬದ್ಧವಾಗಿ ಹಾಗೂ ಸುರಕ್ಷಿತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts