More

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 358 ಜನರಲ್ಲಿ ಕರೊನಾ ಸೋಂಕು ಪತ್ತೆ ; ಬಿರುಸುಗೊಂಡ ಲಸಿಕಾಕರಣ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರೊನಾ ಮೂರನೇ ಅಲೆಯಲ್ಲಿ ಹೊಸ ಪ್ರಕರಣಗಳ ಪ್ರಮಾಣ ಎರಡು ಅಂಕಿಯಲ್ಲಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು ಮೂರು ಅಂಕಿಯಲ್ಲಿದ್ದು, ಸೋಂಕಿನ ಹರಡುವಿಕೆಯ ತೀವ್ರತೆಯ ವೇಗ ಹೆಚ್ಚಾಗುತ್ತಲೇ ಇದೆ.

    ಮಂಗಳವಾರ ಸಹ ಬರೋಬ್ಬರಿ 358 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಎರಡು ದಿನದಲ್ಲಿ 679 ಜನರಲ್ಲಿ ಸೋಂಕು ಕಂಡು ಬಂದಿದ್ದು, ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಕ್ರಿಯ ಪ್ರಕರಣಗಳು ಶತಕವನ್ನು ದಾಟಿವೆ. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ 574 ಸೋಂಕಿತರು ಇದ್ದು ಇಲ್ಲೊಂದರಲ್ಲಿಯೇ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಸಾವಿರಕ್ಕೆ ಏರಲಿದೆ. ಉಳಿದಂತೆ ಚಿಂತಾಮಣಿ ಮತ್ತು ಗೌರಿಬಿದನೂರು ತ್ರಿಶತಕ ದಾಟಿದೆ. ಇದರೊಂದಿಗೆ ಪಾಸಿಟಿವ್ ದರವು ಏರಿಕೆಯಾಗಿದ್ದು, ಪ್ರತಿನಿತ್ಯ ಸರಾಸರಿ 10 ದಾಟಿದೆ.

    ಬೂಸ್ಟರ್ ಡೋಸ್ ಬಿರುಸು: ಕರೊನಾ ಪ್ರಕರಣದ ಹೆಚ್ಚಳದ ನಡುವೆ ಜಿಲ್ಲಾದ್ಯಂತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಕರೊನಾ ಲಸಿಕೆ ಅಭಿಯಾನದ ಜತೆಗೆ ಬಾಕಿ ಇರುವ ಎರಡನೇ ಡೋಸ್ ಹಾಕಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಬಿರುಸುಗೊಳಿಸಿದೆ. ಪ್ರಸ್ತುತ 2 ನೇ ಡೋಸ್ ಪಡೆದ 9 ತಿಂಗಳ ನಂತರ ಕರೊನಾ ಲಸಿಕೆಯ ಬೂಸ್ಟರ್ ಡೋಸ್‌ಗೆ ಪ್ರಸ್ತುತ 8,550 ಜನರನ್ನು ಗುರುತಿಸಲಾಗಿದೆ. ಜಿಲ್ಲೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಮೊದಲ ಹಂತದ ಅಭಿಯಾನದಲ್ಲಿ ನಿಗದಿತ ಫಲಾನುಭವಿಗಳಿಗೆ ಲಸಿಕೆ ಹಾಕಲಾಗುತ್ತದೆ. ಮಂಗಳವಾರ ಒಂದೇ ದಿನ ಎಲ್ಲ ಬಗೆಯ ಅರ್ಹ ಫಲಾನುಭವಿಗಳು ಸೇರಿದಂತೆ ಬರೋಬ್ಬರಿ 11,108 ಮಂದಿ ಲಸಿಕೆ ಪಡೆದಿದ್ದು, ಇಲ್ಲಿಯವರೆಗೂ ಜಿಲ್ಲೆಯಲ್ಲಿ 18,84,057 ಲಸಿಕೆ ಹಾಕಲಾಗಿದೆ. ಇನ್ನು, ಬೂಸ್ಟರ್ ಡೋಸ್‌ಗೆ ಸಂಬಂಧಿಸಿ 3476 ಮಂದಿ ಆರೋಗ್ಯ ಕಾರ್ಯಕರ್ತರು, 904 ಮಂದಿ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ 1096 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

    1781 ಸಕ್ರಿಯ ಪ್ರಕರಣಗಳು: ಮಂಗಳವಾರ 2713 ಮಂದಿಗೆ ನಡೆಸಿದ ಸೋಂಕು ಪತ್ತೆ ಪರೀಕ್ಷೆ ಪೈಕಿ 2036 ಮಂದಿಗೆ ಕರೊನಾ ನೆಗೆಟಿವ್ ವರದಿ ಬಂದಿದೆ. ಇಲ್ಲಿಯವರೆಗೂ 12,33,543 ಜನರ ಗಂಟಲು ಸ್ರಾವ ಮಾದರಿಯ ಪೈಕಿ 11,74,212 ಮಾದರಿಗಳು ನೆಗೆಟಿವ್ ಆಗಿವೆ. 436 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಸೋಂಕು ದೃಢಪಟ್ಟ 46,011 ಪ್ರಕರಣಗಳ ಪೈಕಿ 43,794 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೆಲ್ಲದರ ನಡುವೆ ನಿರಂತರವಾಗಿ ಇತ್ತೀಚೆಗೆ ಸಾವು ಪ್ರಕರಣ ಶೂನ್ಯದಲ್ಲಿದೆ.

    ಕರೊನಾ ಸೋಂಕಿನ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಇದಕ್ಕೆ ಜಿಲ್ಲೆಯಲ್ಲಿ ಮಾರ್ಗಸೂಚಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಅರ್ಹ ಫಲಾನುಭವಿಗಳು ಸಕಾಲಕ್ಕೆ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಲಸಿಕಾಕರಣ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
    ಆರ್.ಲತಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts