More

    ಕರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ

    ಬೆಳಗಾವಿ: ಕೋವಿಡ್-19 ಮಹಾಮಾರಿಗೆ ರಾಜ್ಯದ ಜನತೆ ತಲ್ಲಣಗೊಂಡಿದ್ದು, ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಸವದತ್ತಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್-19 ತಡೆ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಆಹಾರ ಧಾನ್ಯ ವಿತರಣೆ ಸರಿಯಾದ ಪ್ರಮಾಣದಲ್ಲಿ ಮಾಡಬೇಕು. ರಾಜ್ಯ ಸರ್ಕಾರ 2 ತಿಂಗಳ ಪಡಿತರವನ್ನು ಮುಂಚಿತವಾಗಿ ಪೂರೈಸುತ್ತಿದೆ. ಪಡಿತರ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದಲ್ಲದೆ ದಿನಗೂಲಿ ಕಾರ್ಮಿಕರ ಕೌಟುಂಬಿಕ ಖರ್ಚು-ವೆಚ್ಚಗಳಿಗೆ ಒಂದು ಸಾವಿರ ರೂ. ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದೆ. ಕರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಅಧಿಕಾರಿಗಳು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿವರಣೆಯನ್ನು ಜನರಿಗೆ ಹೇಳಿ ಶೀಘ್ರ ಕೆಲಸ ಪ್ರಾರಂಭಿಸಬೇಕು. ಕರೊನಾ ಸೋಂಕು ನಿವಾರಣೆಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನವಶ್ಯಕವಾಗಿ ತಿರುಗಾಡದೆ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ವೈದ್ಯರು, ಪೊಲೀಸರು ಹಾಗೂ ಇತರ ನೌಕರರು ಕಟ್ಟುನಿಟ್ಟಾಗಿ ಸ್ಯಾನಿಟೈಸರ್ ಅನ್ನು ಬಳಸುವಂತೆ ಸಲಹೆ ನೀಡಿದರು.

    ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಿಯಾ ಯೋಜನೆಗೆ ಕಾಯದೆ ಶೀಘ್ರ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು. ತಹಸೀಲ್ದಾರ್ ಪ್ರಶಾಂತ ಪಾಟೀಲ, ತಾಪಂ ಇಒ ಯಶವಂತಕುಮಾರ, ಆರೋಗ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ, ಸಿಪಿಐ ಮಂಜುನಾಥ ನಡುವಿನಮನಿ, ಮಲ್ಲಿಕಾರ್ಜುನ ಕಂಬಿ, ಸೋಮನಗೌಡ ಹಂದ್ರಾಳ, ಕೆ.ಐ. ನಾಗನೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts