More

    ಹಾಟ್‌ಸ್ಪಾಟ್ ರಾಜ್ಯಗಳಿಂದ ಕರ್ನಾಟಕಕ್ಕಿಲ್ಲ ಎಂಟ್ರಿ, ಸೇವಾ ಸಿಂಧು ಅವಕಾಶ ಬ್ಲಾಕ್

    ಮಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಿರುವ ಗುಜರಾತ್, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಇನ್ನು ಕೆಲ ದಿನಗಳ ಮಟ್ಟಿಗಂತೂ ಯಾರೂ ಕರ್ನಾಟಕಕ್ಕೆ ಬರುವಂತಿಲ್ಲ.

    ಈ ಹಾಟ್‌ಸ್ಪಾಟ್ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಅಗತ್ಯವಿರುವ ಪಾಸ್ ವಿತರಣೆಯನ್ನು ಮೇ 18ರಿಂದಲೇ ಸ್ಥಗಿತಗೊಳಿಸಿರುವ ಸರ್ಕಾರ, ಇದೀಗ ಸೇವಾ ಸಿಂಧು ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನೂ ಬ್ಲಾಕ್ ಮಾಡಿದೆ. ಆತಂಕ ಹೆಚ್ಚಿರುವ ರಾಜ್ಯಗಳಿಂದ ಪ್ರಯಾಣಿಕರು ಆಗಮಿಸಲು ಆರಂಭಿಸಿದ ಬಳಿಕ ರಾಜ್ಯದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ಸಾವಿರದಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನೊಂದೆಡೆ, ಉಳಿದ ರಾಜ್ಯಗಳಲ್ಲಿ ಸಿಲುಕಿಕೊಂಡ ಕನ್ನಡಿಗರು ರಾಜ್ಯಕ್ಕೆ ಬರಲು ಯಾವುದೇ ಅಡ್ಡಿಯಿಲ್ಲ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿದೆ.

    ದೇಶೀಯ ವಿಮಾನ ಯಾನ ಸಮಸ್ಯೆ: ಮೇ 25ರಿಂದ ಆರಂಭಗೊಂಡ ದೇಶೀಯ ವಿಮಾನಯಾನ ವ್ಯವಸ್ಥೆಯೂ ರಾಜ್ಯದ ಆಡಳಿತ ವ್ಯವಸ್ಥೆಗೆ ಹೊಸ ತಲೆನೋವು ಸೃಷ್ಟಿಸಿದೆ. ಪ್ರಸ್ತುತ ಕೋವಿಡ್-19 ಆತಂಕವಿರುವ ರಾಜ್ಯಗಳಿಂದ ಕರ್ನಾಟಕಕ್ಕೆ ವಿಮಾನವಿಲ್ಲ. ಆದರೆ ಆತಂಕ ಅಧಿಕವಿರುವ ಪ್ರದೇಶಗಳ ಜನ ಸಂಪರ್ಕ ವಿಮಾನ ಮೂಲಕ ಹತ್ತಿರದ ಇತರ ರಾಜ್ಯಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ಇನ್ನೊಂದು ವಿಮಾನದಲ್ಲಿ ಬರುವುದು ಸಮಸ್ಯೆಯಾಗಿದೆ.

    ಈ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ದಿನೇಶ್, ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಸಹಿತ ಹಿರಿಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ವಿಮಾನ ಕಂಪನಿಗಳ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಸದ್ಯ ಆತಂಕ ಇರುವ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶ ಅವಕಾಶ ಸಾಧ್ಯತೆ ಇಲ್ಲ. ಮುಂದಿನ ತಿಂಗಳು ಆರಂಭವಾಗುವ ಸಂದರ್ಭ ಪರಿಸ್ಥಿತಿ ಅವಲೋಕಿಸಿ ಸರ್ಕಾರ ತೀರ್ಮಾನ ಕೈಗೊಳ್ಳಬಹುದು ಎಂದು ಮುಡಾ ಆಯುಕ್ತ ದಿನೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಾಂಸ್ಥಿಕ ನಿಗಾ ಯಾರಿಗೆ ಕಡ್ಡಾಯ?: ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ನವದೆಹಲಿಯಿಂದ ಆಗಮಿಸುವ ಎಲ್ಲರಿಗೂ 14 ದಿನ ಸಾಂಸ್ಥಿಕ ನಿಗಾ ಕಡ್ಡಾಯ. ಆದರೆ ಇವರಲ್ಲಿ ಗರ್ಭಿಣಿಯರು ಮತ್ತು ವೃದ್ಧರಿಗೆ ಏಳು ದಿನ ಬಿಟ್ಟು ನಡೆಸುವ ಪರೀಕ್ಷೆ ಸಂದರ್ಭ ನೆಗೆಟಿವ್ ಫಲಿತಾಂಶ ದೊರೆತರೆ ಉಳಿದ ಏಳು ದಿನ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಆಗಬಹುದು.

    ಹೋಂ ಕ್ವಾರಂಟೈನ್‌ಗೆ ಒತ್ತಡ: ಅಧಿಕ ಕರೊನಾ ಭೀತಿ ಇರುವ ಮಹಾರಾಷ್ಟ್ರದಂತಹ ರಾಜ್ಯಗಳಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಲು ಅರ್ಜಿ ಸಲ್ಲಿಸಿದ ಜನರಲ್ಲಿ ಕಡ್ಡಾಯ ಸಾಂಸ್ಥಿಕ ನಿಗಾವಣೆ ವಿರೋಧಿಸಿ ಶೇ.20 ಮಂದಿ ತಮ್ಮ ಪ್ರಯಾಣವನ್ನೇ ರದ್ದುಪಡಿಸಿದ್ದಾರೆ ಅಥವಾ ಮುಂದೂಡಿದ್ದಾರೆ. ನಾವು ಹೋಂ ಕ್ವಾರಂಟೈನ್‌ಗೆ ಸಿದ್ಧ. ಆದರೆ ಸಾಂಸ್ಥಿಕ ನಿಗಾವಣೆ ಬೇಡ ಎಂಬುದು ಹೆಚ್ಚಿನವರ ಬೇಡಿಕೆ.

    ಕರಾವಳಿ ಪ್ರವೇಶಿಸಲು ಕಾಯುತ್ತಿರುವವರು: ದೇಶದ ವಿವಿಧೆಡೆಗಳಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಲು ಆಗಮಿಸಲು ಅರ್ಜಿ ಸಲ್ಲಿಸಿ ಕಾಯುತ್ತಿರುವವರ ಸಂಖ್ಯೆ 3,880. ಒಟ್ಟು 8,792 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 4,912 ಮಂದಿಗೆ ಪಾಸ್ ವಿತರಿಸಲಾಗಿದೆ. ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸಲು ಅರ್ಜಿ ಸಲ್ಲಿಸಿದವರ ನಿಖರ ಸಂಖ್ಯೆ ಜಿಲ್ಲಾಡಳಿತದಲ್ಲಿ ಲಭ್ಯವಾಗುತ್ತಿಲ್ಲ. ಆದರೂ ಈ ಸಂಖ್ಯೆ ಸಹಸ್ರಾರು ಇರಬಹುದು ಎಂದು ಅಂದಾಜಿಸಲಾಗಿದೆ. ವಿವಿಧ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಲು ಅರ್ಜಿ ಹಾಕಿರುವವರ ಪೈಕಿ 12,000 ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. 5,047 ಮಂದಿಗೆ ಪಾಸ್ ನೀಡಲಾಗಿದೆ. 4 ತಿರಸ್ಕೃತಗೊಂಡಿವೆ. ಸುಮಾರು 7035 ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts