More

    ಧೂಮಪಾನಿಗಳಿಗೆ ಕರೊನಾ ಅಪಾಯ: ಕೋವಿಡ್ ಸೋಂಕಿಗೆ ಒಳಗಾಗುವ, ಅದರಿಂದ ಸಾವಿಗೀಡಾಗುವ ಸಾಧ್ಯತೆ ಶೇ.50

    | ಕೆ.ಎಂ. ಪಂಕಜ ಬೆಂಗಳೂರು

    ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಶ್ವಾಸಕೋಶ ತೊಂದರೆ ಮುಂತಾದ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ ಎಂಬುದು ಗೊತ್ತಿರುವಂಥದೇ. ಈಗ ಜಗತ್ತನ್ನು ಆವರಿಸಿರುವ ಕರೊನಾ ಸೋಂಕು ಕೂಡ ಧೂಮಪಾನಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ. ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಬಳಕೆ ಮಾಡುವವರಲ್ಲಿ ಕೋವಿಡ್ ಸೋಂಕಿನ ತೀವ್ರತೆ ಹಾಗೂ ಮರಣದ ಅಪಾಯ ಶೇ. 50ರಷ್ಟು ಅಧಿಕ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಪ್ರಸಕ್ತ ಸಾಲಿನಲ್ಲಿ ‘ತಂಬಾಕು ತ್ಯಜಿಸಲು ಬದ್ಧರಾಗಿ’ (Commit to Quit) ಎಂಬ ಅಭಿಯಾನದ ಮೂಲಕ ಕಳೆದ ಐದು ತಿಂಗಳಲ್ಲಿ ತಂಬಾಕು ಬಳಕೆದಾರರಿಗೆ ಅದನ್ನು ತ್ಯಜಿಸಲು ಪೂರಕವಾಗಿ ಒಂದು ಶತಕೋಟಿಗೂ ಹೆಚ್ಚು ಕಿಟ್​ಗಳನ್ನು ಉಚಿತವಾಗಿ ಒದಗಿಸಿದೆ.

    ಕೋವಿಡ್ ಸೋಂಕಿನಿಂದ ಎದುರಾಗುವ ಅಪಾಯದಿಂದ ಪಾರಾಗಲು ತಂಬಾಕು ಉತ್ಪನ್ನಗಳನ್ನು ತ್ಯಜಿಸುವುದೇ ಪರಿಹಾರ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೋಮ್ ಘಿಬ್ರೆಯಸಸ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡಿರುವ ‘ತಂಬಾಕು ತ್ಯಜಿಸಲು ಬದ್ಧರಾಗಿ’ ಆಭಿಯಾನಕ್ಕೆ ಎಲ್ಲಾ ದೇಶಗಳು ಕೈಜೋಡಿಸುವ ಮೂಲಕ ತಂಬಾಕು ತ್ಯಜಿಸಲು ಜನರಿಗೆ ಅಗತ್ಯ ಮಾಹಿತಿ, ಬೆಂಬಲ ಮತ್ತು ಸಾಧನಗಳನ್ನು ಒದಗಿಸಬೇಕೆಂದು ಕೋರಿದ್ದಾರೆ.

    ತಂಬಾಕು ನೀತಿ ಪರಿಷ್ಕರಣೆ: ಈಗಾಗಲೇ ಈ ಅಭಿಯಾನಕ್ಕೆ 29 ದೇಶಗಳು ಕೈಜೋಡಿಸಿವೆ. ತಂಬಾಕು ತ್ಯಜಿಸುವುದರಿಂದ ಆಗುವ ಉಪಯೋಗಗಳ ಕುರಿತು ರಾಷ್ಟ್ರೀಯ ಜಾಗೃತಿ ಅಭಿಯಾನ ನಡೆಸುವುದು, ಹೊಸ ಡಿಜಿಟಲ್ ಪರಿಕರಗಳನ್ನು ಬಿಡುಗಡೆ ಮಾಡುವುದು, ತಂಬಾಕು ಬಳಕೆ ಕುರಿತು ಇರುವ ನೀತಿಗಳನ್ನು ಪರಿಷ್ಕರಿಸುವುದು, ಈ ಕಾರ್ಯದಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವುದು, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು, ತಂಬಾಕು ಬಳಕೆದಾರರಿಗೆ ಚಿಕಿತ್ಸಾಲಯಗಳನ್ನು ತೆರೆಯುವುದು, ಡಬ್ಲ್ಯೂಎಚ್​ಒ ಪಾಲುದಾರರ ಮೂಲಕ ನಿಕೋಟಿನ್ ಬದಲಿ ಚಿಕಿತ್ಸೆಗೆ ಕ್ರಮವಹಿಸುವುದು, ತಂಬಾಕು ವ್ಯಸನ ನಿವಾರಣೆಗೆ ಕೋರ್ಸ್​ಗಳನ್ನು ಪ್ರಾರಂಭಿಸುವುದು- ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

    ಧೂಮಪಾನಿಗಳಿಗೆ ಕರೊನಾ ಅಪಾಯ: ಕೋವಿಡ್ ಸೋಂಕಿಗೆ ಒಳಗಾಗುವ, ಅದರಿಂದ ಸಾವಿಗೀಡಾಗುವ ಸಾಧ್ಯತೆ ಶೇ.50

    ತಂಬಾಕು ತ್ಯಜಿಸುವ ಸವಾಲು: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲೂ ನಿರ್ಧರಿಸಲಾಗಿದೆ. ಇದರ ಜತೆಗೆ ವಾಟ್ಸಪ್, ವೈಬರ್, ಫೇಸ್​ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ‘ತಂಬಾಕು ತ್ಯಜಿಸಿ ಸವಾಲು’ ನೀಡುವುದು ಸಹ ಅಭಿಯಾನದ ಒಂದು ಭಾಗವಾಗಿದೆ.

    ಮಕ್ಕಳಿಂದ ತಂಬಾಕು ಬಳಕೆ: ಜಾಗತಿಕವಾಗಿ ಶೇ. 39 ಪುರುಷರು ಹಾಗೂ ಶೇ. 9 ಮಹಿಳೆಯರು ತಂಬಾಕು ಬಳಸುತ್ತಿದ್ದಾರೆ. ಭಾರತದಲ್ಲಿ ಶೇ. 48 ಪುರುಷರು ಹಾಗೂ ಶೇ. 20 ಮಹಿಳೆಯರು ತಂಬಾಕು ಚಟವುಳ್ಳವರು. ‘ದೇಶದಲ್ಲಿ ಶೇ. 35ಕ್ಕೂ ಹೆಚ್ಚು ವಯಸ್ಕರು (274.5 ದಶಲಕ್ಷ) ತಂಬಾಕು ಬಳಸುತ್ತಿದ್ದು, ಇವರಲ್ಲಿ 68.9 ದಶಲಕ್ಷ ಜನರು ಧೂಮಪಾನಿಗಳಾಗಿದ್ದು, 163.7ದಶಲಕ್ಷ ಜನರು ಧೂಮಪಾನ ಹೊರತಾಗಿ ತಂಬಾಕು ಬಳಕೆ ಮಾಡುತ್ತಿದ್ದಾರೆ. 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 30ಕ್ಕೂ ಹೆಚ್ಚು ಮಂದಿ ನಾನಾ ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ 13-15 ವರ್ಷ ವಯಸ್ಸಿನ ಶೇ. 14 ಮಕ್ಕಳಿದ್ದಾರೆ’ ಎಂದು ಕಿದ್ವಾಯಿ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ಹೇಳುತ್ತಾರೆ.

    ತಂಬಾಕಿನ ದುಷ್ಪರಿಣಾಮಗಳು: ತಂಬಾಕು ಬಳಕೆಯು ಬಾಯಿ, ಗಂಟಲು, ಮಿದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಸ್ತನ ಇತ್ಯಾದಿ ಅಂಗಗಳ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಜತೆಗೆ ಪಾರ್ಶ್ವವಾಯು, ಕುರುಡುತನ, ಹೃದಯ ಕಾಯಿಲೆಗಳು ಸಹ ಬಾಧಿಸುತ್ತವೆ. ದೇಶದಲ್ಲಿ ಒಟ್ಟು ಕ್ಯಾನ್ಸರ್ ರೋಗಿಗಳಲ್ಲಿ ಶೇ. 45 ಪುರುಷರು ಹಾಗೂ ಶೇ. 20 ಮಹಿಳೆಯರಿದ್ದಾರೆ. ಈ ಪೈಕಿ ಶೇ. 80 ತಂಬಾಕು ಬಳಕೆಯಿಂದ ಸಂಭವಿಸಬಹುದಾದ ಬಾಯಿ ಕ್ಯಾನ್ಸರ್ ಪ್ರಕರಣಗಳೇ ಆಗಿವೆ.

    ಧೂಮಪಾನಿಗಳಿಗೆ ಕರೊನಾ ಅಪಾಯ: ಕೋವಿಡ್ ಸೋಂಕಿಗೆ ಒಳಗಾಗುವ, ಅದರಿಂದ ಸಾವಿಗೀಡಾಗುವ ಸಾಧ್ಯತೆ ಶೇ.50ಧೂಮಪಾನಿಗಳಿಗೆ ಕೋವಿಡ್ ತಗುಲಿದರೆ ಆರೋಗ್ಯದ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳಾಗುತ್ತವೆ. ಪರೋಕ್ಷ (ಸೆಕೆಂಡರಿ) ಧೂಮಪಾನವೂ ಶ್ವಾಸಕೋಶ, ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

    | ಡಾ. ಯು.ಎಸ್. ವಿಶಾಲ್ ರಾವ್ ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಕುರಿತಾದ ಉನ್ನತ ಸಮಿತಿ ಸದಸ್ಯ

     

    ಧೂಮಪಾನಿಗಳಿಗೆ ಕರೊನಾ ಅಪಾಯ: ಕೋವಿಡ್ ಸೋಂಕಿಗೆ ಒಳಗಾಗುವ, ಅದರಿಂದ ಸಾವಿಗೀಡಾಗುವ ಸಾಧ್ಯತೆ ಶೇ.50‘ಧೂಮಪಾನಿಗಳು ಕೋವಿಡ್-19 ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಧೂಮಪಾನಿಗಳಿಗೆ ಕರೊನಾ ಸೋಂಕು ತಗುಲಿದರೆ ಆರೋಗ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ, ಮರಣ ಹೊಂದುವ ಅಪಾಯವೂ ಇದೆ.’

    | ಡಾ. ಪ್ರತಿಮಾ ಮೂರ್ತಿ ನಿಮ್ಹಾನ್ಸ್

     

    ಧೂಮಪಾನಿಗಳಿಗೆ ಕರೊನಾ ಅಪಾಯ: ಕೋವಿಡ್ ಸೋಂಕಿಗೆ ಒಳಗಾಗುವ, ಅದರಿಂದ ಸಾವಿಗೀಡಾಗುವ ಸಾಧ್ಯತೆ ಶೇ.50‘ಧೂಮಪಾನಿಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚಾಗಿ ಸಾವಿಗೆ ತುತ್ತಾಗುವ ಅಪಾಯವಿದೆ. ಕಿದ್ವಾಯಿ ಆಸ್ಪತ್ರೆಯೊಂದರಲ್ಲೇ ಪ್ರತಿ ವರ್ಷ 3 ಸಾವಿರಕ್ಕೂ ಹೆಚ್ಚು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ‘ಕಿದ್ವಾಯಿ ನಡಿಗೆ ಗ್ರಾಮಗಳ ಕಡೆಗೆ’ ಶೀರ್ಷಿಕೆಯಡಿ ಕ್ಯಾನ್ಸರ್ ಪತ್ತೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ.

    | ಡಾ.ಸಿ.ರಾಮಚಂದ್ರ ನಿರ್ದೇಶಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts