More

    ಜಿಲ್ಲೆಯಲ್ಲಿ 3 ಕರೊನಾ ಪ್ರಕರಣ ಪತ್ತೆ

    ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ 3 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

    ಹೊಸ ಪ್ರಕರಣಗಳ ಪೈಕಿ 15 ವರ್ಷದ ಬಾಲಕನಲ್ಲಿ (ಪಿ-1483) ಸೋಂಕು ಕಾಣಿಸಿಕೊಂಡಿದ್ದು ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. 6 ವರ್ಷದ ಬಾಲಕಿಯಲ್ಲಿ (ಪಿ-1488) ಸೋಂಕು ಪತ್ತೆಯಾಗಿದ್ದು ರೋಗಿ ಸಂಖ್ಯೆ-634 ಸಂಪರ್ಕವಿತ್ತು. 68 ವರ್ಷದ ವೃದ್ಧೆ (ಪಿ-1485)ಗೆ ಪಿ-667 ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ ಎಂದು ಎಂದು ತಿಳಿದು ಬಂದಿದೆ.


    ಸೋಂಕಿನಿಂದ ಗುಣಮುಖರಾದ 5 ಮಂದಿಗೆ (ಪಿ-618, 620, 623, 628, 664) ಚಪ್ಪಾಳೆ ತಟ್ಟಿ, ಪುಷ್ಪವೃಷ್ಟಿ ಮಾಡಿ ಚಿಗಟೇರಿ ಜಿಲ್ಲಾಸ್ಪತ್ರೆಯಿಂದ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.


    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೆ ಒಟ್ಟು 14 ಜನರನ್ನು ಬಿಡುಗಡೆ ಮಾಡಲಾಗಿದೆ. 97 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.


    ಅವರಿಗೂ ಒಳ್ಳೆಯ ಚಿಕಿತ್ಸೆ ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನಗಳ ಚಿಕಿತ್ಸೆ ಮುಗಿದವರ ಗಂಟಲುದ್ರವದ ಮಾದರಿಯನ್ನು ಮತ್ತೊಮ್ಮೆ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸವಿದೆ ಎಂದು ಹೇಳಿದರು.


    ಒಟ್ಟು 1400 ಮಾದರಿಗಳ ಫಲಿತಾಂಶ ಬರಬೇಕಿದೆ. ಗುರುವಾರ 601 ಮಾದರಿ ಸಂಗ್ರಹಿಸಲಾಗಿದ್ದು, ಅದರಲ್ಲಿ ಶಿವಮೊಗ್ಗಕ್ಕೆ 200 ಮಾದರಿ ಕಳುಹಿಸಿ ಕೊಡಲಾಗಿದೆ. ಕೆಲವನ್ನು ಖಾಸಗಿ ಕೇಂದ್ರಕ್ಕೆ, ಉಳಿದ 60 ರಿಂದ 70 ಮಾದರಿಗಳನ್ನು ಸ್ಥಳೀಯ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಬಾಪೂಜಿ ಜೆಜೆಎಂ ಲ್ಯಾಬ್ ತೆರೆಯಲಿದ್ದು ಅಲ್ಲಿಗೆ ಕಳಿಸಲಾಗುವುದು ಎಂದು ತಿಳಿಸಿದರು.
    ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಲಾಕ್‌ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಎಲ್ಲರೂ ಬಹಳಷ್ಟು ಜಾಗರೂಕತೆ ವಹಿಸಬೇಕು ಎಂದರು.


    ಎಸ್ಪಿ ಹನುಮಂತರಾಯ ಮಾತನಾಡಿ, ಹೊರ ರಾಜ್ಯದಿಂದ ದುಡಿಮೆಗಾಗಿ ಹೋಗಿದ್ದ ಕೆಲವರು ವಾಪಸ್ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಅವರನ್ನು ರೋಗಿಗಳಂತೆ ಕಾಣುತ್ತಿದ್ದಾರೆ, ಅದು ತಪ್ಪು. ಆ ರೀತಿ ಬಂದವರನ್ನು ನಾವು ಜಿಲ್ಲೆ ಮತ್ತು ಸರ್ಕಾರಿ ಶಾಲೆಗಳಲ್ಲಿ ವೈದ್ಯಕೀಯ ಸೇವೆಯೊಂದಿಗೆ ಕ್ವಾರಂಟೈನ್ ಮಾಡುತ್ತಿದ್ದೇವೆ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆ, ಗ್ರಾಮಗಳಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.


    ಎಸಿ ಮಮತಾ ಹೊಸಗೌಡರ್, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷ್‌ಚಂದ್ರ, ತಹಸೀಲ್ದಾರ್ ಗಿರೀಶ್ ಇದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts