More

    ಕರೊನಾ ಪತ್ತೆ, ಚಿಕಿತ್ಸೆ ಇನ್ನು ಸುಲಭ- ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

    ಕೊಪ್ಪಳ: ನಗರದ ಕಿಮ್ಸ್‌ನಲ್ಲಿ ಕರೊನಾ ಪರೀಕ್ಷಾ ಲ್ಯಾಬ್ ಆರಂಭಿಸಿದ್ದು, ರೋಗ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ನಗರದ ಕಿಮ್ಸ್‌ನಲ್ಲಿ ಶುಕ್ರವಾರ ಕರೊನಾ ಪರೋಕ್ಷಾ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು. ಪ್ರಯೋಗಾಲಯಕ್ಕೆ ಎಸ್‌ಡಿಆರ್‌ಎಫ್ ನಿಧಿಯಲ್ಲಿ ಸಿವಿಲ್ ಕಾಮಗಾರಿಗೆ 23.70 ಲಕ್ಷ ರೂ., ಉಪಕರಣಗಳ ಖರೀದಿಗೆ 111.93 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಟ್ರೂನಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 20 ರಿಂದ 25 ಜನ ಹಾಗೂ ಪ್ರತಿ ದಿನ 40 ರಿಂದ 50 ಪರೀಕ್ಷೆ ನಡೆಸಲಾಗುತ್ತದೆ. ಆರ್‌ಟಿಪಿಸಿಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 70 ರಿಂದ 75 ಜನ, ಪ್ರತಿದಿನ 140-145 ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಗೆ ಬೇಕಾದ ಸಿಬ್ಬಂದಿ ನೇಮಿಸಲಾಗಿದೆ. ಈಗಾಗಲೇ 55 ಪರೀಕ್ಷೆ ನಡೆಸಿದ್ದು, ಎಲ್ಲ ವರದಿ ನೆಗೆಟಿವ್ ಬಂದಿವೆ. ಕರೊನಾ ಸೋಂಕು ಹೆಚ್ಚಾಗುತ್ತಿದ್ದರೂ, ಗಾಬರಿ ಪಡಬೇಕಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೆಜ್ ನೀಡಿದೆ. ರಾಜ್ಯ ಸರ್ಕಾರವೂ 1610 ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡಿದೆ. ಮೆಕ್ಕೆಜೋಳ ಬೆಳೆದ 10 ಲಕ್ಷ ರೈತರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

    ವಿವಿಧೆಡೆ ಭೇಟಿ
    ಕೃಷಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಬೆಳಗ್ಗೆಯಿಂದ ವಿವಿಧ ಅಭಿವೃದ್ದಿ ಕಾಮಗಾರಿ ವೀಕ್ಷಿಸಿದರು. ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕಟ್ಟಡ, ಜಿಲ್ಲಾ ರಂಗಮಂದಿರ ಕಾಮಗಾರಿ ವೀಕ್ಷಿಸಿದರು. ಕಳಪೆ ಕಾಮಗಾರಿ ನಡೆದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಬ್ರೈನ್ ಟ್ಯೂಮರ್ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಗೆ ಸಿಎಂ ಪರಿಹಾರ ನಿಧಿಯಿಂದ 40 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದರು. ಮುಖಂಡ ಅಮರೇಶ ಕರಡಿ, ಪ್ರದೀಪ್ ಹಿಟ್ನಾಳ್ ಇತರರು ಇದ್ದರು.

    ಕಾಮನ್ ಸೆನ್ಸ್, ಜನರಲ್ ನಾಲೇಡ್ಜ್ ಬೇಕು
    ಕರೊನಾ ಬಗ್ಗೆ ಅರಿಯಲು ಪಿಎಚ್‌ಡಿ ಮಾಡಬೇಕೆಂದಿಲ್ಲ. ಕಾಮನ್ ಸೆನ್ಸ್ ಜತೆಗೆ ಜನರಲ್ ನಾಲೆಡ್ಜ್ ಬೇಕು. ಜಗತ್ತಿನಲ್ಲಿ ಕರೊನಾ ಕೇಸ್ ಹೆಚ್ಚಾಗುತ್ತಿರುವುದು ಸಿದ್ದರಾಮಯ್ಯರ ಅಧಿನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯಲ್ಲಿ. ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ಪ್ರಕರಣ ಇದ್ದು, ರಾಜ್ಯದಲ್ಲೂ ಕಡಿಮೆ ಇವೆ. ಇದು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್‌ವೈ ಅವರ ಕಟ್ಟುನಿಟ್ಟಿನ ಕ್ರಮದಿಂದ ಆಗಿದ್ದು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮರಳುಗಾರಿಕೆಗೆ ಯಾರಾದರೂ ನನ್ನ ಅಥವಾ ನಮ್ಮ ಪಕ್ಷದ ಹೆಸರು ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಶಾಸಕರು ಮಂತ್ರಿ ಸ್ಥಾನ ಕೇಳುವುದು ಸಹಜ. ಅದನ್ನು ಭಿನ್ನಮತ ಎನ್ನಲಾಗದು ಎಂದು ಸಮರ್ಥನೆ ನೀಡಿದರು.

    ಪಾಲನೆಯಾಗದ ಪರಸ್ಪರ ಅಂತರ
    ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಅನೇಕ ಕಡೆ ಓಡಾಡಿದರು. ಅಲ್ಲೆಲ್ಲ ಜನ, ಅಧಿಕಾರಿಗಳು, ಕಾರ್ಯಕರ್ತರು ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತರು. ಸಚಿವರು ಈ ಬಗ್ಗೆ ಗಮನಿಸಲೂ ಇಲ್ಲ, ಅಂತರ ಕಾಪಾಡಲು ಸೂಚಿಸಲೂ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts