More

    ಮಂಗಳೂರಿಗೂ ಕಾಲಿಟ್ಟ ಕೋವಿಡ್

    ಮಂಗಳೂರು: ದ.ಕ.ಜಿಲ್ಲೆಯ ಹಲವೆಡೆ ಹಬ್ಬಿದ್ದರೂ, ಇದುವರೆಗೆ ಸುರಕ್ಷಿತವಾಗಿದ್ದ ಮಂಗಳೂರು ನಗರಕ್ಕೆ ಕೊನೆಗೂ ಕರೊನಾ ಪ್ರವೇಶ ಮಾಡಿದೆ. ಶಕ್ತಿನಗರದ ನಿವಾಸಿಗಳಿಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ 80 ವರ್ಷ ವಯಸ್ಸಿನ ವೃದ್ಧೆ ಮತ್ತು 45 ವರ್ಷದ ಮಗನಲ್ಲಿ ಕರೊನಾ ಪತ್ತೆಯಾಗಿದೆ.
    ಏ.23ರಂದು ನಗರದ ಹೊರವಲಯದ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ 75ರ ವೃದ್ಧೆಗೆ ಕರೊನಾ ದೃಢಪಟ್ಟಿದ್ದು, ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಿದ ಬಳಿಕ ಅವರು ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅವರಿದ್ದ ವಾರ್ಡ್‌ನಲ್ಲೇ ಶಕ್ತಿನಗರದ ವೃದ್ಧೆ ಪಾರ್ಶ್ವವಾಯು ಚಿಕಿತ್ಸೆ ಪಡೆಯಲು ದಾಖಲಾಗಿದ್ದರು, ಅವರನ್ನು ನೋಡಿಕೊಳ್ಳುವುದಕ್ಕೆ ಅವರ ಪುತ್ರನೂ ಇದ್ದರು. ಅಲ್ಲಿಯೇ ಸೋಂಕು ತಗಲಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ದ.ಕ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈ ಮೂಲಕ 21ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕುಡ್ಲಕ್ಕೆ ಬಂಟ್ವಾಳ ಕನೆಕ್ಷನ್
    ಮಂಗಳೂರು ನಗರಕ್ಕೆ ಕರೊನಾ ಪಸರಿಸಲು ಬಂಟ್ವಾಳ ಲಿಂಕ್ ಕಾರಣವಾಗಿದೆ. ಮೊದಲು ಮೃತಪಟ್ಟ ಮಹಿಳೆಯಿಂದ ಅವರ ನೆರೆಮನೆಯ ಮಹಿಳೆಗೆ ಬಳಿಕ ಮಹಿಳೆಯ ಅತ್ತೆಗೆ ಸೋಂಕು ತಗಲಿತ್ತು. ನೆರೆಮನೆಯ ಮಹಿಳೆಯ 33 ವರ್ಷದ ಪುತ್ರಿಗೂ ಕರೊನಾ ಪಾಸಿಟಿವ್ ಬಂದಿತ್ತು. ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಗುಡಿಸುವ ಕೆಲಸ ಮಾಡುತ್ತಿದ್ದ ಪಾಣೆಮಂಗಳೂರಿನ 47ರ ಹರೆಯದ ಆಯಾಗೂ ಪಾಸಿಟಿವ್ ಆಗಿದೆ. ಅದೇ ಲಿಂಕ್ ಮೂಲಕವೇ ಶಕ್ತಿನಗರದ ಕುಟುಂಬಕ್ಕೂ ತಗಲಿದೆ. ಏ.23ರಂದೇ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದ್ದು 190 ಸಿಬ್ಬಂದಿ ಸಹಿತ 200ಕ್ಕೂ ಅಧಿಕ ಜನರ ತಪಾಸಣೆ ನಡೆಸಲಾಗಿದೆ. ಸದ್ಯ ಎಲ್ಲರೂ ಕ್ವಾರೆಂಟೈನ್‌ನಲ್ಲಿದ್ದಾರೆ.

    ಶಕ್ತಿನಗರ ಸೀಲ್‌ಡೌನ್
    ಶಕ್ತಿನಗರದ ಇಬ್ಬರಿಗೆ ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಿದ್ದಾರೆ. ಈ ಭಾಗದಲ್ಲಿ ಜನರ ಓಡಾಟ ನಡೆಯದಂತೆ ಸೀಲ್‌ಡೌನ್ ಮಾಡಲಾಗಿದೆ. ಪೂರ್ವದಲ್ಲಿ ಚಿತ್ತರಂಜನ್ ಮನೆ, ಪಶ್ಚಿಮದಲ್ಲಿ ನೀಲಾಕ್ಷ ಮನೆ, ಉತ್ತರದಲ್ಲಿ ತಿಪ್ಪೇಶಪ್ಪ ಮನೆ ಹಾಗೂ ದಕ್ಷಿಣದಲ್ಲಿ ಗಿಸೆಲ್ಲ ಮೆಹ್ತ ಮನೆಗಳು ಈ ವಲಯದ ಗಡಿಯಾಗಿರುತ್ತವೆ. ಇಲ್ಲಿ ಒಟ್ಟು 22 ಮನೆಗಳು, ಒಂದು ಕಚೇರಿ, 4 ಅಂಗಡಿಗಳಿದ್ದು ಜನಸಂಖ್ಯೆ 120 ಆಗಿರುತ್ತದೆ. ಇದರ ಸುತ್ತಲೂ 5 ಕಿ.ಮೀ ಪ್ರದೇಶವನ್ನು ಬಫರ್‌ಜೋನ್ ಆಗಿ ಗುರುತಿಸಿದ್ದು ಪೂರ್ವದಲ್ಲಿ ವಾಮಂಜೂರು ಜಂಕ್ಷನ್, ಪಶ್ಚಿಮದಲ್ಲಿ ಉರ್ವಾ ಮಾರುಕಟ್ಟೆ, ಉತ್ತರದಲ್ಲಿ ಪದವಿನಂಗಡಿ, ದಕ್ಷಿಣದಲ್ಲಿ ಬಂಟ್ಸ್‌ಹಾಸ್ಟಲ್ ಜಂಕ್ಷನ್ ಗಡಿಯಾಗಿರುತ್ತವೆ. ಈ ವಲಯದ ಇನ್ಸಿಡೆಂಟ್ ಕಮಾಂಡರ್ ಆಗಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರನ್ನು ನಿಯೋಜಿಸಲಾಗಿದೆ.

    16 ಮಂದಿಯ ವರದಿ ನೆಗೆಟಿವ್
    ಉಡುಪಿ: ಜಿಲ್ಲಾಡಳಿತ ಸೋಮವಾರ ಸ್ವೀಕರಿಸಿದ ಎಲ್ಲ 16 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಶ್ವಾಸಕೋಶ ಉಸಿರಾಟದ ಸಮಸ್ಯೆ 5, ಕೋವಿಡ್ ಶಂಕೆ 2, ಇಲ್‌ನೆಸ್‌ಗೆ ಸಂಬಂಧಿಸಿ 8 ಮಂದಿ ಒಟ್ಟು 15 ಮಂದಿಯ ಮಾದರಿಯನ್ನು ಸೋಮವಾರ ಸಂಗ್ರಹಿಸಲಾಗಿದ್ದು, 8 ಮಂದಿ ಐಸೊಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 40 ಮಂದಿಯ ವರದಿ ಬರಲು ಬಾಕಿ ಇದೆ. ಸೋಮವಾರಕ್ಕೆ 36 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಷನ್ ವಾರ್ಡ್‌ನಿಂದ 17 ಮಂದಿ, ಆಸ್ಪತ್ರೆ ಕ್ವಾರಂಟೈನ್‌ನಿಂದ ಮೂವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಾಸರಗೋಡಿನಲ್ಲಿ ಹೊಸ ಪ್ರಕರಣ ಇಲ್ಲ
    ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರವೂ ಕರೊನಾ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 175 ಮಂದಿಯಲ್ಲಿ ಕರೊನಾ ದೃಢವಾಗಿದ್ದು, ಅವರ ಪೈಕಿ 160 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ 53 ಕೇಸು ದಾಖಲಿಸಲಾಗಿದೆ. 66 ಮಂದಿಯನ್ನು ಬಂಧಿಸಲಾಗಿದೆ. 24 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಮಾಹಿತಿ ಸೋರಿಕೆ ಆರೋಪ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ಸರಕು ವಾಹನಗಳಲ್ಲಿ ಅಥವಾ ಇನ್ನಿತರ ವಾಹನಗಳಲ್ಲಿ ಅಕ್ರಮವಾಗಿ ಕರ್ನಾಟಕದಿಂದ ಜನರನ್ನು ಗಡಿ ದಾಟಿ ಜಿಲ್ಲೆಗೆ ಕರೆತಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts