More

    ಎಚ್ಚರ ತಪ್ಪಿದರೆ ಕಂಟಕ! ಕರೊನಾ ಆತಂಕ ಉಲ್ಬಣ…

    ಬೆಂಗಳೂರು: ಕರೊನಾ ವಿರುದ್ಧದ ನಿರ್ಣಾಯಕ ಸಮರವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್​ಡೌನ್ ಬೆಂಬಲಿಸಿ ಮನೆಯಲ್ಲೇ ಉಳಿದು ಶಿಸ್ತು ಪಾಲಿಸಿದ್ದ ರಾಜ್ಯದ ಜನತೆ ಈಗ ನಿಯಮಾವಳಿ ಸಡಿಲಗೊಂಡ ಬೆನ್ನಲ್ಲೇ ಮೈಮರೆಯುತ್ತಿದ್ದಾರಾ ಎಂಬ ಆತಂಕ ಶುರುವಾಗಿದೆ. ಮಾಸ್ಕ್, ಸಾಮಾಜಿಕ ಅಂತರದ ನಿಯಮ ಪಾಲನೆ ಮರೆತು ರಸ್ತೆಗಿಳಿಯುವ ಮೂಲಕ ಸಂಭಾವ್ಯ ಅನಾಹುತಕ್ಕೆ ವೇದಿಕೆ ಕಲ್ಪಿಸಲು ಹೊರಟಿದ್ದಾರೆ.

    ಕರೊನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ವಿಧಿಸಲಾಗಿದ್ದ ಲಾಕ್​ಡೌನ್ ನಿಯಮಾವಳಿ 42 ದಿನಗಳ ಬಳಿಕ ಸಡಿಲಗೊಂಡಿದೆ. ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿ, ಜಿಲ್ಲಾ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಹಾಗೂ ಕೈಗಾರಿಕೆಗಳ ಆರಂಭದ ಮೂಲಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಈ ಹಂತದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ತಜ್ಞರು ಹೇಳುತ್ತಾರೆ. ಗೂಡುಬಿಟ್ಟ ಹಕ್ಕಿಗಳಂತೆ ಮನೆಯಿಂದ ಹೊರ ಹೋಗುವ ಧಾವಂತದಲ್ಲಿ ಜನರು ನಿಯಮ ಪಾಲನೆ ಮರೆತಿದ್ದಾರೆ. ಹಂತಹಂತವಾಗಿ ಲಾಕ್​ಡೌನ್ ಸಡಿಲ ಮಾಡಬೇಕಿತ್ತೆಂದು ಕೆಲ ಅಧಿಕಾರಿಗಳು, ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕರು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ಸಿನಿಮಾ ಥಿಯೇಟರ್, ಮಾಲ್, ದೇವಸ್ಥಾನ ಸೇರಿ ಕೆಲವನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆ ಶುರುವಾಗಿದೆ. ಜನರ ಓಡಾಟ ಹೆಚ್ಚಾಗಿದೆ.

    ವಾಹನಸಂಚಾರ ಹೆಚ್ಚಳ: ರಾಜ್ಯದಲ್ಲಿ ಕರ್ಫ್ಯೂ ಆದೇಶದಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಮತ್ತೆ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರ ಹೆಚ್ಚಿದೆ. ಕಾರಿನಲ್ಲಿ ಚಾಲಕ ಸೇರಿ ಮೂವರು ಹಾಗೂ ಬೈಕ್​ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಎಂಬ ನಿಯಮಕ್ಕೆ ಜನ ಕ್ಯಾರೆ ಎನ್ನುತ್ತಿಲ್ಲ. ಬೈಕ್​ಗಳಲ್ಲಿ ಇಬ್ಬರು ಸಂಚಾರ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಕೆಲ ಕಾರುಗಳಲ್ಲಿ ನಾಲ್ವರಿಗೂ ಹೆಚ್ಚಿನ ಜನರು ಪ್ರಯಾಣ ಮಾಡುತ್ತಿದ್ದರು. ಪೊಲೀಸರ ತಪಾಸಣೆ ಸಹ ಸಡಿಲವಾಗಿದ್ದು, ಜಿಲ್ಲಾ ಗಡಿ ಚೆಕ್​ಪೋಸ್ಟ್​ನಲ್ಲಿ ಮಾತ್ರ ತಪಾಸಣೆ ನಡೆಸುತ್ತಿದ್ದಾರೆ. ಉಳಿದಂತೆ ನಗರದ ಒಳಭಾಗದಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿಲ್ಲ.

    ವಾರದಲ್ಲಿ ಸ್ಪಷ್ಟ ಚಿತ್ರಣ: ಲಾಕ್​ಡೌನ್ ಸಡಿಲಿಕೆಯಿಂದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪರೀಕ್ಷೆಗೆ ಕಳುಹಿಸಿರುವ ಶಂಕಿತರ ಮಾದರಿಗಳ ವರದಿ ಬರಬೇಕಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಡೆಸುವ ಪರೀಕ್ಷೆ ಸೇರಿ ವಾರದಲ್ಲಿ ವರದಿಯಾಗುವ ಪ್ರಕರಣ ಆಧರಿಸಿ ಪರಿಣಾಮ ಅರಿಯಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಶಕ್ತಿಸೌಧ ಸಕ್ರಿಯ: ವಿಧಾನಸೌಧದಲ್ಲಿ ಅಧಿಕಾರಿ, ಸಿಬ್ಬಂದಿ ಸಂಖ್ಯೆಯಲ್ಲಿ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಎಲ್ಲ ಕಚೇರಿ ದ್ವಾರದಲ್ಲಿ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

    ಇದನ್ನೂ ಓದಿ: ಸುರಪಾನಕ್ಕೆ ಸರದಿ ನಿಂತ ಮದ್ಯ ಪ್ರಿಯರು..!

    ಐಟಿ-ಬಿಟಿ ಕಂಪನಿ ಆರಂಭ: ಆಶಾ ಕಾರ್ಯಕರ್ತರು, ಪೊಲೀಸರು, ವೈದ್ಯರು, ನರ್ಸ್​ಗಳು ಸೇರಿ ತುರ್ತು ಸೇವೆಯಲ್ಲಿ ಕೆಲಸ ಮಾಡುವರಿಗಾಗಿ ಬೆಂಗಳೂರಲ್ಲಿ ಬಿಎಂಟಿಸಿ ಸೇವೆ ತುಸು ಹೆಚ್ಚಾಗಿತ್ತು. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಐಟಿ-ಬಿಟಿ ಕಂಪನಿಗಳ ನೌಕರರು ಪಾಸ್ ಪಡೆದು ಕಚೇರಿಗಳತ್ತ ಹೊರಟಿದ್ದರು.

    ಹಳ್ಳಿಗಳಿಗೂ ಶುರು ಆತಂಕ

    ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಕ್ಕೆ ಕರೊನಾ ಸೋಂಕು ಈವರೆಗೆ ಹರಡಿಲ್ಲ. ಈಗ ವಲಸೆ ಕಾರ್ವಿುಕರಿಗೆ ತಮ್ಮ ಜಿಲ್ಲೆಗಳಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಕಳೆದ 3 ದಿನ ಗಳಲ್ಲಿ ಸುಮಾರು 50 ಸಾವಿರ ಕಾರ್ವಿುಕರನ್ನು ಕೆಎಸ್ಸಾರ್ಟಿಸಿ ಬಸ್​ಗಳ ಮುಖಾಂತರ ಸ್ಥಳಾಂತರಿಸಲಾಗಿದೆ. ಬಸ್ ಹತ್ತುವ ಮುನ್ನ ತಪಾಸಣೆ ಮಾಡುತ್ತಿದ್ದರೂ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಒಂದು ವೇಳೆ ಯಾರಿಗಾದರೂ ಸೋಂಕು ಇದ್ದರೆ ಅಂಥವರಿಂದ ಗ್ರಾಮಗಳಿಗೂ ಹರಡುವ ಸಾಧ್ಯತೆ ಇದೆ.

    ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಹೊಸ ಪ್ರಕರಣ ವರದಿಯಾಗುವುದಕ್ಕಿಂತ ಗುಣ ಮುಖರಾಗಿ ಮನೆಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಸೋಂಕಿತರ ದುಪ್ಪಟ್ಟಾ ಗುವಿಕೆ ಪ್ರಮಾಣ ಕಡಿಮೆ ಇರುವುದು ಆರೋಗ್ಯಕರ ಬೆಳವಣಿಗೆ. ಮೇ 17ರ ವೇಳೆಗೆ ಸೋಂಕಿತರ ಸಂಖ್ಯೆ 1500ರ ಗಡಿ ದಾಟದಿದ್ದರೆ ನಿಯಂತ್ರಣ ಸುಲಭ. ಹೀಗಾಗಿ ಸಾರ್ವಜನಿಕರು ನಿಯಮ ಪಾಲಿಸುವ ಮೂಲಕ ಸೋಂಕು ವ್ಯಾಪಿಸದಂತೆ ಸಹಕರಿಸಬೇಕು.

    | ಡಾ. ಸಿ.ಎನ್. ಮಂಜುನಾಥ್ , ನಿರ್ದೇಶಕ, ಜಯದೇವ ಹೃದ್ರೋಗ ಆಸ್ಪತ್ರೆ

    20,000-ಕೇಸ್ ಅಂದಾಜು

    ಲಾಕ್​ಡೌನ್ ತೆರವಾದರೆ ರಾಜ್ಯದಲ್ಲಿ ಮೇ ಅಂತ್ಯದ ವೇಳೆಗೆ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ. ಲಾಕ್ ಡೌನ್ ಮುಂದುವರಿದರೆ 6-7 ಸಾವಿರ ಪ್ರಕರಣಗಳು ವರದಿಯಾಗಬಹುದು. ಲಾಕ್ ಡೌನ್ ಇರುವುದರಿಂದ ಯಾವ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿದೆ ಎಂಬ ನಿಖರ ಮಾಹಿತಿ ಸಿಗುತ್ತಿಲ್ಲ. ಹಾಗೆಂದು ಒಮ್ಮೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಬಿ.ಜಿ. ಪ್ರಕಾಶ್ ಕುಮಾರ್ ಏಪ್ರಿಲ್ 25ರಂದು ನಡೆದ ವಿಜಯವಾಣಿ ಫೋನ್ ಇನ್​ನಲ್ಲಿ ತಿಳಿಸಿದ್ದರು. 

    14 ಜಿಲ್ಲೆಗಳಲ್ಲಿ ಬಸ್ ಸಂಚಾರ

    ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರ ಪುನರಾರಂಭವಾಗಿದೆ. ಕೆಎಸ್​ಆರ್​ಟಿಸಿ 400 ಬಸ್​ಗಳನ್ನು ಮೀಸಲಿರಿಸಲಾಗಿತ್ತು. ಜನರ ಸಂಖ್ಯೆ ಕಡಿಮೆಯಿದ್ದ ಪರಿಣಾಮ ನಿಗದಿ ಮಾಡಿದ್ದ ಬಸ್​ಗಳಲ್ಲಿ ಶೇ. 40 ಬಸ್​ಗಳು ಸಂಚರಿಸಿದ್ದವು. ಪ್ರತಿ ಬಸ್​ನಲ್ಲೂ 20ರಿಂದ 25 ಪ್ರಯಾಣಿಕರಷ್ಟೇ ಸಂಚರಿಸಲು ಅವಕಾಶ ನೀಡಲಾಗಿತ್ತು. ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚರಿಸಲು ಅವಕಾಶವಿರಲಿಲ್ಲ.

    ತಜ್ಞರ ಸಮಿತಿಯ ಸಲಹೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಿ ಸರ್ಕಾರ ಕೆಲ ನಿಯಮಗಳೊಂದಿಗೆ ಲಾಕ್​ಡೌನ್ ಸಡಿಲಿಸಿದೆ. ಜನರು ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಇಲ್ಲವಾದರೆ ಮತ್ತೆ ಲಾಕ್​ಡೌನ್ ಪರಿಣಾಮ ಎದುರಾಗುವ ಸಾಧ್ಯತೆಗಳಿವೆ. ಜನರು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

    | ಡಾ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

    ಸಾಮಾಜಿಕ ಅಂತರ ಪಾಲನೆ ಇಲ್ಲ

    ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಕಾರಣ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಸಾಲುಗಟ್ಟಿ ನಿಂತು ಖರೀದಿಸುತ್ತಿದ್ದಾರೆ. ಹಣ್ಣು, ತರಕಾರಿ, ದಿನಸಿ, ಔಷಧ ಅಂಗಡಿ ಜತೆಗೆ ಚಿನ್ನದ ಅಂಗಡಿ, ಬಟ್ಟೆ, ಬುಕ್ ಸ್ಟೋರ್, ಪಾತ್ರೆ ಅಂಗಡಿ, ಮೊಬೈಲ್ ಮಳಿಗೆ, ರಿಪೇರಿ ಅಂಗಡಿ, ಸಿಮ್ ನೆಟ್​ವರ್ಕ್ ಕಂಪನಿಗಳ ಕಚೇರಿಗಳು ಕಾರ್ಯ ಆರಂಭಿ ಸಿವೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಬಸ್​ಗಳು ಸಂಚಾರ ಶುರುಮಾಡಿವೆ. ಆಟೋ, ಟ್ಯಾಕ್ಸಿ, ವೈಯಕ್ತಿಕ ವಾಹನಗಳ ಓಡಾಟವೂ ಜಾಸ್ತಿಯಾಗಿದೆ. ಆದರೆ, ಸಾಮಾಜಿಕ ಅಂತರದ ನಿಯಮ ಪಾಲನೆ ಆಗುತ್ತಿಲ್ಲ.

    ಇದನ್ನೂ ಓದಿ: ಕನ್ನಡದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ; ಪುನೀತ್​ ರಾಜ್​ಕುಮಾರ್ ಕೊಟ್ರು ಸುಳಿವು!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts