More

    ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೇಲೆ ಕೋವಿಡ್ 2ನೇ ಅಲೆ ಕರಿನೆರಳು

    ಬೆಂಗಳೂರು: ಕೋವಿಡ್-19 ಎರಡನೇ ಅಲೆ ಹೆಚ್ಚಳ ಹಿನ್ನೆಲೆ ಮೇ 9ಕ್ಕೆ ನಡೆಯ ಬೇಕಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೇಲೆ ತೂಗುಗತ್ತಿ ತೂಗುತ್ತಿದೆ. ಕರೊನಾ ಕಾರಣಕ್ಕೆ ಚುನಾವಣೆ ಮುಂದೂಡಿಕೆ ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದರೆ, ಈ ಹಂತದಲ್ಲಿ ಚುನಾವಣೆ ಮುಂದೂಡುವ ಬದಲು ಸೂಕ್ತ ವ್ಯವಸ್ಥೆಯೊಂದಿಗೆ ನಡೆಸಲಿ ಎನ್ನುವ ಚರ್ಚೆಗಳು ನಡೆಯುತ್ತಿವೆ.

    ಮುಂದೂಡಿಕೆ ಏಕೆ?: ಕನ್ನಡ ಸಾಹಿತ್ಯ ಪರಿಷತ್ ಬೃಹದಾಕಾರವಾಗಿ ಬೆಳೆದಿದ್ದು, ಸದಸ್ಯರ ಸಂಖ್ಯೆ 3.10 ಲಕ್ಷ ದಾಟಿದೆ. ಇದರಲ್ಲಿ 45 ವರ್ಷ ಮೇಲ್ಪಟ್ಟವರು ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಸಾಹಿತಿಗಳು, ಲೇಖಕರು, ಹಿರಿಯ ಚಿಂತಕರು, ಕನ್ನಡಾಭಿಮಾನಿಗಳು ಸದಸ್ಯರಾಗಿದ್ದಾರೆ. ಕೋವಿಡ್ ತೀವ್ರವಾಗಿರುವ ಕಾರಣ ಮತದಾನಕ್ಕೆ ಮನೆಯಿಂದ ಹೊರಬರುವುದು ಕಷ್ಟ ಎನ್ನುವ ಅಭಿಪ್ರಾಯಗಳು ದಟ್ಟವಾಗಿದೆ. ಆರೋಗ್ಯ ಮತ್ತು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ಪ್ರಕ್ರಿಯೆಯಿಂದ ಬಹುಪಾಲು ಮತದಾರರು ಆಚೆಯೇ ಉಳಿಯುವುದರಿಂದ ಅದು ಪೂರ್ಣ ಪ್ರಮಾಣದ ಚುನಾವಣೆ ಆಗುವುದಿಲ್ಲ. ಆದ್ದರಿಂದ ನೈಸರ್ಗಿಕ ವಿಕೋಪ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಂದೂಡುವುದು ಉತ್ತಮ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

    ಚುನಾವಣೆ ಏಕೆ ಬೇಕು?: 3 ವರ್ಷದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅವಧಿಯನ್ನು ಈಗಾಗಲೆ 5 ವರ್ಷಕ್ಕೆ ವಿಸ್ತರಣೆ ಮಾಡಿಕೊಳ್ಳಲಾಗಿದೆ. ಈಗ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯದೆ ಹೋದಲ್ಲಿ, ಮತ್ತಷ್ಟು ವಿಳಂಬವಾಗಿ ಪರಿಷತ್ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಒಮ್ಮೆ ಚುನಾವಣೆ ಘೋಷಣೆ ಮಾಡಿದ ಬಳಿಕ ಮುಂದೂಡುವುದಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ. ಅಲ್ಲದೆ, ಈಗಾಗಲೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಖರ್ಚು ಮಾಡಿಕೊಂಡು ಮತಯಾಚನೆ ಮಾಡಿದ್ದಾರೆ. ಮತ್ತೊಮ್ಮೆ ಮತಯಾಚನೆ ಕಷ್ಟದ ಕೆಲಸ. ಆದ್ದರಿಂದ ಚುನಾವಣೆ ನಡೆಸಲೇಬೇಕು ಎನ್ನುವ ಆಗ್ರಹಗಳು ಕೇಳಿ ಬರುತ್ತಿವೆ.

    ಚುನಾವಣಾಧಿಕಾರಿ ನಿರ್ಧಾರಕ್ಕೆ: ನೈಸರ್ಗಿಕ ವಿಕೋಪ ಹಿನ್ನೆಲೆಯಲ್ಲಿ ಕಸಾಪ ಚುನಾವಣೆ ಮುಂದೂಡಬೇಕಾದ ಅನಿವಾರ್ಯತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಅಧಿಕಾರ ಕಸಾಪ ಚುನಾವಣಾಧಿಕಾರಿಗೆ ಇದೆ. ಸರ್ಕಾರದ ಜತೆ ಸಮಾಲೋಚನೆ ಮಾಡಿ, ಈ ಬಗ್ಗೆ ಶೀಘ್ರ ನಿರ್ಧಾರ ಪ್ರಕಟ ಮಾಡಬಹುದು. ಚುನಾವಣಾಧಿಕಾರಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

    ಸೆ.3 ತನಕ ನಮ್ಮ ಅಧಿಕಾರಾವಧಿ ಇದೆ. ಚುನಾವಣೆ ಮುಂದೂಡುವ ಕುರಿತಂತೆ ಚುನಾವಣಾಧಿಕಾರಿಗಳೇ ತೀರ್ಮಾನ ತೆಗೆದು ಕೊಳ್ಳಬೇಕು. ಇದರಲ್ಲಿ ನಮ್ಮ ಪಾತ್ರವಿಲ್ಲ.

    | ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

    ಚುನಾವಣೆಗಾಗಿ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಮುಂದೂಡಿಕೆ ಬಗ್ಗೆ ಚರ್ಚೆ ನಡೆದಿಲ್ಲ. ಈತನಕ ಸರ್ಕಾರದಿಂದ ಯಾವ ರೀತಿಯ ನಿರ್ದೇಶನವೂ ಬಂದಿಲ್ಲ.

    | ಗಂಗಾಧರಸ್ವಾಮಿ ಕಸಾಪ ಚುನಾವಣಾಧಿಕಾರಿ

    ಒಕ್ಕಲಿಗರ ಸಂಘದ ಚುನಾವಣೆ ಡೌಟು?

    ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೂ ಕೋವಿಡ್ ಕಂಟಕ ಎದುರಾಗಿದೆ. ಮತದಾರರ ಹಿತದೃಷ್ಟಿಯಿಂದ ಒಕ್ಕಲಿಗರ ಸಂಘದ ಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಚುನಾವಣೆ ನಡೆಯುವ ಮೇ 16ರ ಹೊತ್ತಿಗೆ ಕೋವಿಡ್ ಇನ್ನಷ್ಟು ಉಲ್ಭಣಿಸಿ ಪರಿಸ್ಥಿತಿ ಬಿಗಡಾಯಿಸುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಈಗಲೇ ಚುನಾವಣೆ ಪ್ರಕ್ರಿಯೆ ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆ ಶೀಘ್ರವೇ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ವಿಜಯವಾಣಿಗೆ ತಿಳಿಸಿದ್ದಾರೆ.

    ಚುನಾವಣೆ ವಿವರ: ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಕಾರ್ಯಕಾರಿ ಸಮಿತಿಗೆ 11, ಜಿಲ್ಲಾ ಕ್ಷೇತ್ರಗಳಿಂದ 35 ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹೊಸೂರು-15, ಮೈಸೂರು, ಊಟಿ, ಚಾಮರಾಜನಗರ-3, ಮಂಡ್ಯ-4, ಹಾಸನ-3, ತುಮಕೂರು-2, ಚಿತ್ರದುರ್ಗ -1, ಕೋಲಾರ ಮತ್ತು ಚಿಕ್ಕಬಳ್ಳಾಪುರ-3, ದಕ್ಷಿಣ ಕನ್ನಡ ಮತ್ತು ಉಡುಪಿ-1, ಶಿವಮೊಗ್ಗ ಮತ್ತು ಉತ್ತರ ಕನ್ನಡ-1, ಕೊಡಗು ಹಾಗೂ ಚಿಕ್ಕಮಗಳೂರು ತಲಾ 1 ಸೇರಿ ಒಟ್ಟು 35 ಕಾರ್ಯಕಾರಿ ಸಮಿತಿ ಸದಸ್ಯರು ಕಣದಲ್ಲಿದ್ದಾರೆ.

    ಬೆಚ್ಚಿಬೀಳಿಸುವಂತಿದೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಪ್ರಮಾಣ!; ಇಂದು ಇದುವರೆಗಿನ ಗರಿಷ್ಠ ಪ್ರಕರಣ ದಾಖಲು..

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts