More

    ಕರೊನಾ ಸಂಕಷ್ಟದ ನಡುವೆ ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ

    ಕೋಲಾರ/ನರಸಾಪುರ: ಕರೊನಾ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧವಾಗಿರುವ ಶಿಕ್ಷಣ ಇಲಾಖೆ ತಾಲೂಕಿನ ನರಸಾಪುರ ವ್ಯಾಲಿ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಸೋಮವಾರ ಅಣಕು ಪರೀಕ್ಷೆ ನಡೆಸುವ ಮೂಲಕ ಜೂ.25ರಿಂದ ಮೂಲ ಪರೀಕ್ಷೆಗೆ ಇಲಾಖೆ ಸನ್ನದ್ಧವಾಗಿದೆ ಎಂಬುದನ್ನು ಸಾಕ್ಷೀಕರಿಸಲಾಯಿತು.

    ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳನ್ನು ಕರೆಸಿಕೊಂಡಿದ್ದ ಶಿಕ್ಷಣ ಇಲಾಖೆ ಡಿಡಿಪಿಐ ಕೆ.ರತ್ನಯ್ಯ ನೇತೃತ್ವದಲ್ಲಿ ಸಂಕಷ್ಟದ ಕಾಲಕ್ಕೆ ತಕ್ಕಂತೆ ಜಾಗ್ರತೆ ವಹಿಸಿ ಪರೀಕ್ಷೆ ಬರೆಯಲು ಸಜ್ಜುಗೊಳಿಸಿತು.

    ಸ್ಯಾನಿಟೈಸ್ ಮಾಡಿದ ಶಾಲಾ ವಾಹನದಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಮಕ್ಕಳು, ಜತೆಗಿದ್ದ ಸಿಬ್ಬಂದಿ, ಶಾಲಾ ಶಿಕ್ಷಕ ವರ್ಗದವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಾಯಿತು. ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರ ತಂಡ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್ ನೀಡಿ, ಮಾಸ್ಕ್ ನೀಡಿ ಕೇಂದ್ರದೊಳಗೆ ಕರೆಸಿಕೊಂಡಿತು.

    ವಾರ್ಷಿಕ ಪರೀಕ್ಷೆ ಮಾದರಿಯಲ್ಲೇ ಪ್ರಶ್ನೆ-ಪತ್ರಿಕೆ ರವಾನೆ, ಕೊಠಡಿ ಮೇಲ್ವಿಚಾರಕರು ಗ್ಲೌಸ್, ಮಾಸ್ಕ್ ಧರಿಸಿ ಕಾಲಕಾಲಕ್ಕೆ ಸ್ಯಾನಿಟೈಸರ್ ಬಳಸಿಯೇ ಮಕ್ಕಳಿಗೆ ಉತ್ತರ ಮತ್ತು ಪ್ರಶ್ನೆಪತ್ರಿಕೆ ವಿತರಿಸಿ ಅಣಕು ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೂಲ ಪರೀಕ್ಷೆಯನ್ನೂ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಿ ಮಾಡಬಲ್ಲೆವು ಎಂದು ಸಾಬೀತು ಪಡಿಸಿದರು.

    ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು ಬಳಸಿ ಎಸೆಯುವ ಗ್ಲಾಸ್‌ಗಳಲ್ಲಿ ನೀರು ಪೂರೈಸಿದರು. ಮಕ್ಕಳಿಗೆ ಕೊಠಡಿಗಳ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ತಿಳಿಸಿಕೊಟ್ಟರು.

    ಕೇಂದ್ರಕ್ಕೆ ಸ್ಥಾನಿಕ ಜಾಗೃತಿ ದಳ ನೇಮಕ, ಕೊಠಡಿಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ, ಜ್ವರ, ನೆಗಡಿ ಇರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಶೌಚಗೃಹ, ಕೈತೊಳೆಯಲು ನೀರು ಹೀಗೆ ಎಲ್ಲ ಮುನ್ನಚ್ಚರಿಕೆ ವಹಿಸಲಾಯಿತು.
    ವ್ಯಾಲಿ ಪಬ್ಲಿಕ್ ಶಾಲಾ ಆಡಳಿತ ಮಂಡಳಿಯ ಪ್ರಮುಖರಾದ ಜಿ.ಸುಮಾ, ರವಿಕುಮಾರ್, ಸತೀಶ್ ಮತ್ತಿತರರು ಕಾಲಕಾಲಕ್ಕೆ ಅಣಕು ಪರೀಕ್ಷೆಗೆ ಸಿದ್ಧತೆ ನಡೆಸಿ ಸಹಕಾರ ನೀಡಿದರು.

    ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಶಶಿವಧನ, ಕೃಷ್ಣಪ್ಪ, ಗಾಯತ್ರಿ, ಡಿಪಿಒ ಮಂಜುನಾಥ್, ಮುಖ್ಯ ಅಧೀಕ್ಷಕ ಬಿ.ಎಂ.ಚಂದ್ರಪ್ಪ, ತಾಲೂಕು ನೋಡಲ್ ಅಧಿಕಾರಿಗಳಾದ ಮುನಿರತ್ನಯ್ಯಶೆಟ್ಟಿ, ಸಿ.ಎಂ.ವೆಂಕಟರಮಣಪ್ಪ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು.

     

    ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಅಣಕು ಪರೀಕ್ಷೆ ಸಹಕಾರಿಯಾಗಿದೆ. ಸಮಸ್ಯೆಗಳಿಲ್ಲದೆ ಪರೀಕ್ಷೆ ನಡೆಸಲು ಏನೆಲ್ಲಾ ಮಾಡಬಹುದು ಎಂಬುದನ್ನು ಅರಿಯಲು ಇಲಾಖೆಗೂ ಇದೊಂದು ಸುಸಂದರ್ಭ. ಕರೊನಾ ಸವಾಲು ಸ್ವೀಕರಿಸಿ ಗೆಲ್ಲಬೇಕಾದ ಅನಿವಾರ್ಯತೆಯಿದೆ.
    ಕೆ.ರತ್ನಯ್ಯ, ಡಿಡಿಪಿಐ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts