More

    ಹೆಬ್ರಿ ಆಸ್ಪತ್ರೆ 7 ಸಿಬ್ಬಂದಿಗೆ ಸೋಂಕು

    ಉಡುಪಿ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ 7 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಕೇಂದ್ರಕ್ಕೆ ಸಾಕಷ್ಟು ಮಂದಿ ೀ ಹಿಂದೆ ಬಂದಿರುವುದರಿಂದ ಸೋಂಕು ಹರಡುವ ಭೀತಿ ಎದುರಾಗಿದೆ. ಜನ ಆತಂಕಗೊಂಡಿದ್ದಾರೆ.

    ಸಿಬ್ಬಂದಿಯನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಕೇಂದ್ರವನ್ನು 48 ಗಂಟೆಗಳಿಗೆ ಸೀಲ್‌ಡೌನ್ ಮಾಡಲಾಗಿದೆ. ಎರಡು ಬಾರಿ ಸ್ಯಾನಿಟೈಸ್ ಮಾಡಿ ಎರಡು ದಿನಗಳ ಬಳಿಕ ಕೇಂದ್ರವನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    14 ಮಂದಿಗೆ ಸೋಂಕು: ಜಿಲ್ಲಾಡಳಿತ ಶನಿವಾರ ನೀಡಿದ ಮೆಡಿಕಲ್ ಬುಲೆಟಿನ್ ಪ್ರಕಾರ 14 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 7 ಮಂದಿ ಪುರುಷರು, 6 ಮಹಿಳೆಯರಿದ್ದು, ಒಂದು ಹೆಣ್ಣು ಮಗುವಿದೆ. ಮಹಾರಾಷ್ಟ್ರದಿಂದ ಐದು ಜನ, ತೆಲಂಗಾಣ, ಬೆಂಗಳೂರು, ಕುಮಟಾದಿಂದ ಆಗಮಿಸಿದ ತಲಾ ಒಬ್ಬರು, 6 ಸ್ಥಳೀಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಮೂವರು ಮಹಾರಾಷ್ಟ್ರದಿಂದ ಬಂದವರಿಂದ ಸಂಪರ್ಕಕ್ಕೆ ಒಳಗಾದವರು. ಉಳಿದ ಮೂವರು ಶಿರೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದಿದ್ದ ಸಿಬ್ಬಂದಿಯ ಸಂಪರ್ಕ ಹೊಂದಿದವರು ಎಂದು ಆರೋಗ್ಯ ಇಲಾಖೆ ಮೂಲ ತಿಳಿಸಿದೆ.

    ಶನಿವಾರ 173 ಮಂದಿಯ ವರದಿ ನೆಗೆಟಿವ್ ಬಂದಿದ್ದು, 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 167 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಇಬ್ಬರು ಹಿರಿಯ ನಾಗರಿಕರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,139ಕ್ಕೆ ಏರಿಕೆಯಾಗಿದ್ದು, 1,047 ಮಂದಿ ಈಗಾಗಲೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 90 ಸಕ್ರಿಯ ಪ್ರಕರಣಗಳಿವೆ.

    ಪ್ರವಾಸ ಮಾಹಿತಿ ಮುಚ್ಚಿಟ್ಟ ಸೋಂಕಿತರು: ಸೋಂಕಿತ ಸಹೋದರರಿಬ್ಬರು ಪ್ರವಾಸದ ಹಿನ್ನೆಲೆ ಮತ್ತು ಪ್ರಾಥಮಿಕ ಸಂಪರ್ಕಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ರೋಗಿ ಸಂಖ್ಯೆ 10186 ಹಾಗೂ 10187 ವಿರುದ್ಧ ಆರೋಗ್ಯ ಇಲಾಖೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts