More

    ಪಾತಾಳಕ್ಕಿಳಿದ ಕೊಬ್ಬರಿ ಬೆಲೆ ; ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಮೀನಮೇಷ

    ತುಮಕೂರು: ಕರೊನಾ ಲಾಕ್‌ಡೌನ್ ಎಫೆಕ್ಟ್ ತೆಂಗು ಬೆಳೆಗಾರರಿಗೆ ತೀವ್ರವಾಗಿ ತಟ್ಟಿದೆ. ತಿಪಟೂರು ಕೊಬ್ಬರಿ ಮಾರುಕಟ್ಟೆಯೇ ಇಲ್ಲದಂತಾಗಿದ್ದು, ಬೆಲೆ ಪಾತಾಳದೆಡೆಗೆ ಮುಖ ಮಾಡಿದೆ. ಸರ್ಕಾರದ ಬೆಂಬಲ ಬೆಲೆಗಿಂತ ಕೊಬ್ಬರಿ ಬೆಲೆ ಕಡಿಮೆಯಾಗಿದ್ದು, ಸರ್ಕಾರದ ಖರೀದಿ ಕೇಂದ್ರ ಆರಂಭಿಸುವ ತುರ್ತು ಅಗತ್ಯವಿದೆ.

    ಲಾಕ್‌ಡೌನ್ ನಡುವೆಯೂ ತಿಪಟೂರು ಎಪಿಎಂಸಿಯಲ್ಲಿ ಆನ್‌ಲೈನ್ ವ್ಯಾಪಾರ ಆರಂಭಿಸಲಾಗಿತ್ತು. ತಾಳೆ, ಸೋಯಾಬಿನ್ ವಿದೇಶಗಳಿಂದ ಆಮದಾಗುವುದು ನಿಲ್ಲುವುದರಿಂದ ದೇಶದಲ್ಲಿ ಅಡುಗೆ ಎಣ್ಣೆಗೆ ಸಹಜವಾಗಿ ಬೇಡಿಕೆ ಸೃಷ್ಟಿಯಾಗಲಿದೆ, ಬೆಲೆಯೂ ಹೆಚ್ಚಾಗಲಿದೆ ಎಂದು ನಂಬಿದ್ದ ತೆಂಗು ಬೆಳೆಗಾರರಿಗೆ ನಿರಾಸೆಯಾಗಿದೆ.

    ಕೊಬ್ಬರಿ ಸಾಗಣೆಗೆ ಸಾರಿಗೆ ಸಮಸ್ಯೆಯಿಂದ ಇನ್ನೂ ಕೆಲ ದಿನ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಕಡಿಮೆ ಎನ್ನಲಾಗಿದೆ.
    ತಿಪಟೂರು ಮಂಡಿಯಲ್ಲಿ ಶನಿವಾರ ನಡೆದ ಆನ್‌ಲೈನ್ ಟೆಂಡರ್‌ನಲ್ಲಿ ಕ್ವಿಂಟಾಲ್ ಕೊಬ್ಬರಿ ಕನಿಷ್ಠ 9210 ರೂ., ಹಾಗೂ ಗರಿಷ್ಠ 9932ರೂ.,ಗೆ ವ್ಯಾಪಾರ ನಡೆದಿದ್ದು, ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ 10300ರೂ., ಗಿಂತ ಕಡಿಮೆಯಾಗಿದೆ. ಸಾರಿಗೆ ಸಮಸ್ಯೆಯಿಂದ ಹೊರ ರಾಜ್ಯದ ವ್ಯಾಪಾರಿಗಳು ಟೆಂಡರ್‌ನಲ್ಲಿ ಭಾಗವಹಿಸದಿರುವ ಕಾರಣಕ್ಕೆ ಬೆಲೆ ಕುಸಿಯುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

    ಹೊರ ರಾಜ್ಯಗಳಿಗೆ ತೆರಳಲು ಹಿಂದೇಟು: ಸ್ಥಳೀಯ ವ್ಯಾಪಾರಿಗಳೇ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯಯಾಗಿ ಕಡಿಮೆ ಬೆಲೆಗೆ ಕೊಬ್ಬರಿ ಕೊಂಡುಕೊಂಡರೂ ಅದನ್ನು ಹೊರ ರಾಜ್ಯಗಳಿಗೆ ರಫ್ತು ಮಾಡಲಾಗದೆ ನಷ್ಟಕ್ಕೆ ಸಿಲುಕಲಾರಂಭಿಸಿದ್ದಾರೆ. ತಿಪಟೂರು ಕೊಬ್ಬರಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಮುಂಬೈ ನಗರದಲ್ಲಿ ಕರೊನಾ ರಣಕೇಕೆ ಹಾಕುತ್ತಿದ್ದು ಅಲ್ಲಿಗೆ ಹೋಗಿ ಬರುವ ಚಾಲಕರ ಮೇಲೆ ನಿಗಾವಹಿಸಲಾಗುತ್ತಿದೆ. ಅಲ್ಲದೆ, ಹೊರರಾಜ್ಯಗಳಿಗೆ ತೆರಳುವ ಲಾರಿ ಚಾಲಕರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ನಲ್ಲಿರಬೇಕಾಗಿರುವುದರಿಂದ ಚಾಲಕರು ಹೊರರಾಜ್ಯಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವುದೂ ಬೆಲೆ ಕುಸಿತಕ್ಕೆ ಒಂದು ಕಾರಣವಾಗಿದೆ.

    ಮುಂಬೈ, ಕೇರಳ, ರಾಜಸ್ಥಾನ ಸೇರಿ ಉತ್ತರದ ರಾಜ್ಯಗಳಿಗೆ ಕೊಬ್ಬರಿ ತೆಗೆದುಕೊಂಡು ಹೋಗಿ ಬರುವ ಚಾಲಕರು ಊರಿಗೆ ಮರಳಿದ ಬಳಿಕ 14 ದಿನ ಕ್ವಾರಂಟೈನ್‌ನಲ್ಲಿರಬೇಕು. ಹಾಗಾಗಿ, ತಿಂಗಳಲ್ಲಿ 2 ದಿನದ ದುಡಿಮೆಗೆ ಮಾಸಪೂರ್ತಿ ಕ್ವಾರಂಟೈನ್ ಆಗಬೇಕು ಎಂಬ ಭಯದಿಂದ ಚಾಲಕರು ಲಾರಿಗೆ ಹತ್ತದ ಕಾರಣಕ್ಕೆ ಮಂಡಿ ಮಾಲೀಕರು ಕೊಬ್ಬರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

    ಆರಂಭವಾಗಲಿ ಖರೀದಿ ಕೇಂದ್ರ!: ಸರ್ಕಾರದ ಬೆಂಬಲ ಬೆಲೆಗಿಂತ ಕೊಬ್ಬರಿ ಬೆಲೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ 10300 ರೂ. ಜತೆಗೆ ರಾಜ್ಯ ಸರ್ಕಾರ ಕನಿಷ್ಠ 5000ರೂ. ಪ್ರೋತ್ಸಾಹ ಬೆಲೆ ಕೊಟ್ಟು ಕೊಬ್ಬರಿ ಖರೀದಿ ಮಾಡಿದರಷ್ಟೇ ರೈತರ ಬದುಕು ಉಳಿಯಲಿದೆ. ಸತತ ಬರ, ಚಿತ್ರವಿಚಿತ್ರ ರೋಗಗಳಿಂದ ಸಂಕಷ್ಟದಲ್ಲಿರುವ ಬೆಳೆಗಾರರು, ನೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲಿ ಎಂಬ ಒಕ್ಕೊರಲ ಆಗ್ರಹ ಮಾಡಲಾರಂಭಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಕ್ರಮಕೈಗೊಳ್ಳಬೇಕಿದೆ. ಸತತ ಬೆಲೆ ಕುಸಿತದ ಕಾರಣಕ್ಕೆ ರೈತರು ಕೊಬ್ಬರಿ ಸುಲಿದು ಮಾರುಕಟ್ಟೆಗೆ ತರುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕು, ಕರೊನಾ ಲಾಕ್‌ಡೌನ್ ಮುಕ್ತವಾಗಿ ಸಂಚಾರ ಯಥಾಸ್ಥಿತಿಗೆ ಮರಳಿದರೆ ಕೊಬ್ಬರಿಗೆ ನಿಖರವಾಗಿ ಬೇಡಿಕೆ ಹೆಚ್ಚಾಗಲಿದ್ದು, ಬೆಲೆ ಏರಿಕೆ ಖಂಡಿತ ಎಂಬುದು ಮಾರುಕಟ್ಟೆಯಲ್ಲಿರುವ ಅನುಭವಸ್ಥರ ಖಚಿತ ಅಭಿಪ್ರಾಯ. ರೈತರು ಹಣಕಾಸಿನ ಸಂಕಷ್ಟ ಸಹಿಸಿಕೊಂಡು ಕೊಬ್ಬರಿ ಸುಲಿಯುವುದನ್ನು ಮುಂದೂಡಲೇಬೇಕಿದೆ.

    ಕೊಬ್ಬರಿಯ ಮುಖ್ಯ ಮಾರುಕಟ್ಟೆಗಳಲ್ಲಿ ಸಾಗಣೆ, ಲೋಡ್, ಅನ್‌ಲೋಡ್ ಮಾಡುವುದು ದೊಡ್ಡ ಸಮಸ್ಯೆಯಾಗಿರುವುದು ಕೊಬ್ಬರಿ ಬೆಲೆ ಕುಸಿತಕ್ಕೆ ಕಾರಣ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಖರೀದಿಗೆ ಕನಿಷ್ಠ ಸಮಯ ನೀಡಿರುವುದು ಕೊಬ್ಬರಿ ಖರೀದಿಗೆ ಜನರು ಮನಸ್ಸು ಮಾಡುವ ಮುಂಚೆ ತುರ್ತು ಅಗತ್ಯ ವಸ್ತುಗಳನ್ನಷ್ಟೇ ಕೊಂಡುಕೊಳ್ಳುತ್ತಾರೆ. ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಗೆ ಕ್ರಮಕೈಕೊಳ್ಳಲು ಜಿಲ್ಲಾಡಳಿತಕ್ಕೆ ಸಮಿತಿ ಪತ್ರ ಬರೆದು ಮನವಿ ಮಾಡಲಾಗಿದೆ.
    ನ್ಯಾಮಗೌಡ ಕಾರ್ಯದರ್ಶಿ, ತಿಪಟೂರು ಎಪಿಎಂಸಿ

    ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಸರ್ಕಾರದ 10300ರೂ., ಬೆಂಬಲ ಜತೆಗೆ ರಾಜ್ಯ ಸರ್ಕಾರ 5 ಸಾವಿರ ರೂ., ಪ್ರೋತ್ಸಾಹಧನ ಸೇರಿಸಿ ಕೊಬ್ಬರಿ ಕೊಂಡುಕೊಳ್ಳಲು ಕ್ರಮವಹಿಸಬೇಕು. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
    ಟಿ.ಸದಾಶಿವಯ್ಯ ತೆಂಗು ಬೆಳೆಗಾರ, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts