More

    ದುಪ್ಪಟ್ಟು ಬೆಲೆಗೆ ಹಣ್ಣು, ತರಕಾರಿ ಮಾರಿದರೆ ಕ್ರಮ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ

    ತುಮಕೂರು: ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಸಿದರು.

    ನಗರ ಹೊರವಲಯದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಮಾರುಕಟ್ಟೆಗೆ ತರುವಾಗ ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಮಾರ್ಗಮಧ್ಯೆ ಪೊಲೀಸರು ತಡೆದು ಕಿರುಕುಳ ಕೊಡಬಾರದು. ಸಿಎಂ ಕೂಡ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ ಎಂದರು.

    ರೈತರಿಗೂ ಮಾಸ್ಕ್ ಕೊಡಿ: ಮಾರುಕಟ್ಟೆಗೆ ಬರುವ ರೈತರಿಗೆ ಕಡ್ಡಾಯವಾಗಿ ಮಾಸ್ಕ್ ವಿತರಣೆ, ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಎಪಿಎಂಸಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಮಸ್ಯೆಯಾಗುತ್ತಿದ್ದು, ಅರಿವು ಮೂಡಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿ. ಖರೀದಿಗೆ ಬರುವ ಸಾರ್ವಜನಿಕರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರು ಮನವಿ ಮಾಡಿದರು. ರೈತರ ಬೆಳೆ ನಷ್ಟವಾಗದೆ ಮಾರಾಟವಾಗಬೇಕೆನ್ನುವ ದೃಷ್ಟಿಯಿಂದ ಮನೆ-ಮನೆಗೆ ಹೋಗಿ ಮಾರಾಟ ಮಾಡಲು ರೈತರಿಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದೆನ್ನುವ ನಿಟ್ಟಿನಲ್ಲಿ ಜನವಾಸಿ ಪ್ರದೇಶಗಳಿಗೆ ನೇರವಾಗಿ ಸ್ವಂತ, ಬಾಡಿಗೆ ವಾಹನಗಳಲ್ಲಿ ರೈತರು ಹೋಗಿ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

    ಕೃಷಿ ಇಲಾಖೆ ಪಾಸ್: ಪಾವಗಡದ ರೈತರು ಆಂಧ್ರಪ್ರದೇಶದ ಮಡಕಶಿರಾ ಗಡಿದಾಟಬೇಕಿದೆ. ಆಂಧ್ರ ಪೊಲೀಸರು ಜಿಲ್ಲೆಗೆ ಪ್ರವೇಶಿಸಲು ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದಾಗ ಎಪಿಎಂಸಿಯಲ್ಲಿ ಮಾರಾಟ ಮಾಡುವ ಎಲ್ಲ ರೈತರಿಗೂ ಕೃಷಿ ಇಲಾಖೆಯಿಂದ ಪಾಸ್ ನೀಡಲಾಗುತ್ತಿದೆ, ಅಂತರ ರಾಜ್ಯಗಳಲ್ಲೂ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿರುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದರು. ಎಪಿಎಂಸಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ ಮಾತನಾಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯ ಅಂಗಡಿ ಮಳಿಗೆಗಳನ್ನು ದಿನಬಿಟ್ಟು ದಿನ ಒಂದು ಮಳಿಗೆ ಬಿಟ್ಟು ಇನ್ನೊಂದು ಮಳಿಗೆಗೆ ಸ್ಥಳಾಂತರಿಸಲಾಗಿದೆ. ತರಕಾರಿ, ಹೂ-ಹಣ್ಣು ಮಾರಾಟ ಮಾಡುವ 650 ವರ್ತಕರಿಗೆ ಎಪಿಎಂಸಿಯಿಂದ ಪಾಸ್ ವಿತರಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿದರು.

    ಎಪಿಎಂಸಿ ಯಾರ್ಡ್‌ಗೆ ಭೇಟಿ: ನಗರದ ಬಟವಾಡಿಯ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿದ ಸೋಮಶೇಖರ್ ಅವರು, ರೈತರು ಬೆಳೆಗಳನ್ನು ನೇರವಾಗಿ ಜನಸಾಮಾನ್ಯರ ಮನೆಗಳಿಗೆ ತಲುಪಿಸಲು ಯಾರಾದರೂ ಮುಂದೆ ಬಂದರೆ ಅಂತಹವರಿಗೆ ಅವಕಾಶ ಮಾಡಿಕೊಡಿ. ಮಾರುಕಟ್ಟೆ ದರಕ್ಕೆ ವ್ಯಾಪಾರಿಗಳು ಬದ್ಧವಾಗಿರುವಂತೆ ತಿಳಿ ಹೇಳಬೇಕೆಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.

    ಪ್ರಗತಿಯಲ್ಲಿದೆ ನಂಜನಗೂಡು ಜೂಬಿಲೆಂಟ್ ಪ್ರಕರಣ ತನಿಖೆ: ನಂಜನಗೂಡಿನ ಜೂಬಿಲೆಂಟ್ ಕಾರ್ಖಾನೆಯಿಂದ ವೈರಸ್ ಹರಡಿರುವ ಬಗ್ಗೆ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ ಎಂದು ಸಹಕಾರ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ನಂಜನಗೂಡು ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜೂಬಿಲೆಂಟ್ ಕಾರ್ಖಾನೆಯ 1500 ನೌಕರರನ್ನು ಪ್ರತ್ಯೇಕವಾಗಿಟ್ಟಿದ್ದು ಹೋಂ ಕ್ವಾರಂಟೈನಲ್ಲಿರಿಸಲಾಗಿದೆ ಎಂದರು. ಸೋಂಕಿತರನ್ನು ಐಸೋಲೇಷನ್ ವಾರ್ಡ್
    ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದೆ. ಲಾಕ್‌ಡೌನ್ ವಿಸ್ತರಣೆಯ ಬಗ್ಗೆ ಸಂಪುಟ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ. ಪ್ರಧಾನಮಂತ್ರಿ ಮೋದಿ ಅವರು ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡು ಘೋಷಿಸಲಿದ್ದಾರೆ ಎಂದು ತಿಳಿಸಿದರು.

    ಕೋಲ್ಡ್ ಸ್ಟೋರೇಜ್‌ಗೆ ಮನವಿ: ಬಟವಾಡಿಯ ಎಪಿಎಂಸಿ ಕಚೇರಿಗೆ ಭೇಟಿ ನೀಡಿದ ಸಚಿವರು ರೈತರ ಸಮಸ್ಯೆಗಳ ನಿವಾರಣೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಚ್. ಪರಮಶಿವಯ್ಯ ಅವರು ಸಂಘದ ಕಚೇರಿಗಾಗಿ ಎಪಿಎಂಸಿ ಆವರಣದಲ್ಲಿ ನಿವೇಶನ ಮಂಜೂರು ಮಾಡಲು ಮನವಿ ಮಾಡಿದರು. ಧಾನ್ಯ ವ್ಯಾಪಾರಿಗಳ ಸಂಘದವರು ನಗರದ 5 ಕಿ.ಮೀ. ವ್ಯಾಪ್ತಿಯೊಳಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಡಲು ಸಚಿವರಿಗೆ ಮನವಿ ಸಲ್ಲಿಸಿದರು.

    ಸೋಂಕು ನಿವಾರಕ ಸುರಂಗ !: ಸೋಂಕು ನಿವಾರಕ ಘಟಕದೊಳಗಿನಿಂದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿದ ಸಚಿವ ಸೋಮಶೇಖರ್ ಅವರು ವರ್ತಕರ ಅಹವಾಲುಗಳನ್ನು ಆಲಿಸಿದರು. ಲಾಕ್‌ಡೌನ್‌ನಿಂದ ಎಲ್ಲ ಹಣ್ಣು-ತರಕಾರಿಗಳ ಬೆಲೆ ಕುಸಿದಿದ್ದು, ರೈತರು ಹಾಗೂ ವರ್ತಕರಿಗೆ ನಷ್ಟ ಉಂಟಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts