More

    ಸಮಾವೇಶ.. ಹಲವು ಸಂದೇಶ: ಸಿದ್ದರಾಮಯ್ಯ ಕೇಂದ್ರಬಿಂದು; ಬಿಜೆಪಿ, ಜೆಡಿಎಸ್​ಗೂ ತಳಮಳ

    | ಶ್ರೀಕಾಂತ್ ಶೇಷಾದ್ರಿ ದಾವಣಗೆರೆ

    ಸಿದ್ದರಾಮಯ್ಯ-75 ಸಂಭ್ರಮಾಚರಣೆಯತ್ತ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಈ ಶಕ್ತಿ ಪ್ರದರ್ಶನದ ವೇದಿಕೆ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಿಸಲು ಕಾರಣವಾಗಬಹುದೇ? ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಭೂಮಿಕೆಯಾಗಬಹುದೇ? ಜಾತಿ ಸಮೀಕರಣ, ಮತಗಳ ಧ್ರುವೀಕರಣಕ್ಕೆ ಬೀಜಾಂಕುರವಾಗಬಹುದೇ? ಎಂಬ ಚರ್ಚೆಗಳು ನಡೆದಿವೆ. ಈ ಚರ್ಚೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಕಾಂಗ್ರೆಸ್ ಮಾತ್ರವಿಲ್ಲ, ಇತರ ಎರಡು ಪಕ್ಷಗಳೂ ಸಮಾವೇಶದ ಪರಿಣಾಮವನ್ನು ಆತಂಕದಿಂದಲೇ ಎದುರು ನೋಡುತ್ತಿವೆ.

    ಈ ಸಮಾವೇಶ ಸಿದ್ದರಾಮಯ್ಯ ಪಾಲಿಗೆ ಮಹತ್ವದ್ದು. ಕಾಂಗ್ರೆಸ್ ಹೆಸರಿನಲ್ಲಿ ಸಂಘಟನೆ ಮಾಡದಿದ್ದರೂ ಪಕ್ಷದ ಮುಖಂಡರೇ ನಡೆಸಿರುವ ಈ ಸಮಾರಂಭದಲ್ಲಿ ಅವರೇ ಕೇಂದ್ರಬಿಂದು. ಎಪ್ಪತೆôದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಇದರ ಪರಿಣಾಮ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

    ಪಕ್ಷದಲ್ಲಿ ಬೆರಳೆಣಿಕೆಯಷ್ಟು ಜನ ಒಳಗೊಳಗೆ ಅಸಹನೆ ಹೊಂದಿದ್ದರೂ ಹೆಚ್ಚಿನ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಅಮೃತ ಮಹೋತ್ಸವ ಸಮಾವೇಶದಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಂತಿದೆ. ಚುನಾವಣೆಗೆ ಇನ್ನು 9 ತಿಂಗಳಿರುವಾಗ ಈ ಸಮಾವೇಶದ ಮೂಲಕ ಪಕ್ಷದ ಪರವಾದ ವಾತಾವರಣ ಸೃಷ್ಟಿಸಿಕೊಳ್ಳಲು ಹೈಕಮಾಂಡ್ ಬಯಸಿದೆ. ರಾಜ್ಯದ ಮಟ್ಟಿಗೆ ಕಾಂಗ್ರೆಸ್​ಗೆ ಈಗಿರುವ ಏಕೈಕ ಆಶಾಕಿರಣವೆಂದರೆ ಸಿದ್ದರಾಮಯ್ಯ ಮಾತ್ರ. ಆದ್ದರಿಂದಲೇ ಈ ಕಾರ್ಯಕ್ರಮದಿಂದ ಖಂಡಿತ ಲಾಭದ ಫಸಲು ತೆಗೆಯಬಹುದೆಂಬ ಲೆಕ್ಕಾಚಾರ ಹಾಕಿಯೇ ರಾಹುಲ್ ಗಾಂಧಿ ಹಾಜರಾಗುತ್ತಿದ್ದಾರೆ.

    ಆಪ್ತ ಬಳಗವೇ ಶಕ್ತಿ: 2010-11ರ ವರೆಗೂ ಸಿದ್ದರಾಮಯ್ಯ ಹಳೇ ಮೈಸೂರು ಭಾಗದ ನಾಯಕ. 2012ರ ವೇಳೆಗೆ ಅಹಿಂದ ಮೂಲಕ ರಾಜ್ಯದ ಉದ್ದಗಲಕ್ಕೂ ಪ್ರಭಾವ ಬೆಳೆಸಿಕೊಂಡರು. ಇವರೊಂದಿಗೆ ಹಿಂದುಳಿದ ವರ್ಗವಷ್ಟೇ ಅಲ್ಲದೇ ಅಲ್ಪಸಂಖ್ಯಾತರೂ ಕೂಡಿಕೊಂಡರು, ತಮ್ಮ ನಾಯಕನೆಂದು ಹೊತ್ತು ಮೆರೆಸಿದರು. ಜಾತಿ, ವರ್ಗ ಮೀರಿ ಬೆಳೆದು ದ್ದರಿಂದ ಅಧಿಕಾರದ ಹತ್ತಿರವಾದರು. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೂ ಅಧಿಕಾರವನ್ನು ತಂದುಕೊಟ್ಟಿತು. ದೇವರಾಜ ಅರಸು ನಂತರ 5 ವರ್ಷಗಳ ಕಾಲ ಸರ್ಕಾರ ನಡೆಸಿದರು. ಜನಪರ ಕಾರ್ಯಕ್ರಮಗಳನ್ನು ನೀಡಿದರು. ಈಗ ಪುನಃ ಅದೇ ವರ್ಚಸ್ಸನ್ನು ಕಾಣಲು ಆಪ್ತ ಬಳಗ ಬಯಸಿದೆ. ಮತ್ತೊಮ್ಮೆ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡ ಸಿದ್ದರಾಮಯ್ಯಗೆ ಆಪ್ತ ಬಳಗವೇ ದೊಡ್ಡ ಶಕ್ತಿ. ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಮಹದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಭಾಪತಿ ಬಿ.ಎಲ್. ಶಂಕರ್, ಶಾಸಕ ಬೈರತಿ ಸುರೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಹಲವು ನಾಯಕರು ದುಡಿದಿದ್ದಾರೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ.

    ಹೈಕಮಾಂಡ್ ಬಯಕೆ, ನಿರೀಕ್ಷೆ: ಹೈಕಮಾಂಡ್ ವಿಚಾರಕ್ಕೆ ಬಂದರೆ, ಕಾಂಗ್ರೆಸ್ ರಾಜ್ಯ ನಾಯಕರನ್ನೆಲ್ಲ ಒಟ್ಟಿಗೆ ಕಾಣುವಂತೆ ನಾಡಿಗೆ ತೋರಿಸಲು ಸಮಾವೇಶದ ಮುಖಾಂತರ ಅವಕಾಶ ಒದಗಿಬರಲಿದೆ. ಸಾಮೂಹಿಕ ನಾಯಕತ್ವದ ಸೂತ್ರದಲ್ಲಿ ಮುಂದಡಿ ಇಟ್ಟಿದ್ದೇವೆ ಎಂದು ಸಂದೇಶ ಕಳಿಸಲು; ಆಗಾಗ ಅಪಸ್ವರ ಎತ್ತುವವರಿಗೆ ಸ್ಪಷ್ಟ ಸೂಚನೆಯನ್ನು ರವಾನಿಸಲು ಈ ವೇದಿಕೆಯನ್ನು ಹೈಕಮಾಂಡ್ ಬಳಸಿಕೊಳ್ಳುತ್ತಿದೆ. ಹಾಗೆಯೇ ದಕ್ಷಿಣ ರಾಜ್ಯಗಳ ಪೈಕಿ ಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬರಲು ಅವಕಾಶ ಇರುವ, ಸಾಮರ್ಥ್ಯವೂ ಇರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಸ್ಪಷ್ಟ ಅರಿವಿರುವ ಕಾಂಗ್ರೆಸ್ ವರಿಷ್ಠರಿಗೆ ಬಿಜೆಪಿಯನ್ನು ದಕ್ಷಿಣದಲ್ಲಿ ಅಧಿಕಾರದಿಂದ ದೂರ ಇಡುವ ಹಠವೂ ಇದೆ. ಇದೇ ಕಾರಣಕ್ಕೆ ಹೈಕಮಾಂಡ್ ಸಣ್ಣ ಅವಕಾಶವನ್ನೂ ತಪ್ಪಿಸಿಕೊಳ್ಳಲು ಸಿದ್ಧವಿಲ್ಲ. ಈ ವೇದಿಕೆಯಿಂದಲೂ ದೊಡ್ಡ ಲಾಭವನ್ನು ದೆಹಲಿ ನಾಯಕರು ಬಯಸಿದ್ದಾರೆ.

    ಟಿಕೆಟ್ ಆಕಾಂಕ್ಷಿಗಳಿಗೆ ಆಸಕ್ತಿ: ಸಣ್ಣಪುಟ್ಟ ವ್ಯತ್ಯಾಸಗಳ ನಡುವೆಯೂ ಪಕ್ಷದ ನಾಯಕರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಭಾವ ಇದ್ದೇ ಇದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಹೆಸರಿನ ಈ ಸಮಾವೇಶ ಯಶಸ್ಸಾದರೆ ತಾವು ಗೆಲ್ಲುವುದಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದೆಂದು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸ ಬಯಸಿರುವ ಹಾಲಿ, ಮಾಜಿ ಶಾಸಕರು, ಆಕಾಂಕ್ಷಿಗಳು ಕಾರ್ಯಕ್ರಮದ ಬಗ್ಗೆ ಹೆಚ್ಚು ಆಸಕ್ತಿ ತಾಳಿದ್ದಾರೆ.

    ಹುಬ್ಬಳ್ಳಿಯಲ್ಲಿ ರಾಹುಲ್ ಸಭೆ: ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಯ ಆಂತರಿಕ ಸಭೆಯು ಮಂಗಳವಾರ ರಾತ್ರಿ 9.20ರ ಸುಮಾರಿಗೆ ಆರಂಭವಾಯಿತು. ರಾಹುಲ್ ಗಾಂಧಿ, ಸಭೆಯಲ್ಲಿದ್ದ 35 ಜನರನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣೆ, ರಾಜಕೀಯ ಬೆಳವಣಿಗೆ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಸಲಹೆಗಳನ್ನು ನೀಡಿದರು. ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಸಭೆಯನ್ನು ಮುಂದುವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts