More

    ವಿವಾದ ವಿಕಾಸದ ದಾರಿ; ಸಭ್ಯತೆಯ ಚೌಕಟ್ಟು ಮೀರಿದ ಟೀಕೆಗಳು

    ಕೆಲವೇ ದಿನಗಳಲ್ಲಿ 2023 ಕಾಲಗರ್ಭವನ್ನು ಸೇರಲಿದೆ. ಅಚ್ಚರಿ, ವಿಷಾದ, ಸಾಧನೆ, ವೇದನೆ ಇವೆಲ್ಲವುಗಳ ಸಮ್ಮಿಶ್ರವಾಗಿದ್ದ ಈ ವರ್ಷ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಬರಲಿರುವ ಹೊಸ ವರ್ಷ ಹೆಚ್ಚು ಸಂತೋಷ, ಸಂತೃಪ್ತಿಯನ್ನು ತರಲಿ ಎಂಬ ಸದಾಶಯದೊಂದಿಗೆ ವಿಜಯವಾಣಿ ಈ ವರ್ಷದ ವಿದ್ಯಮಾನಗಳನ್ನು ಕಟ್ಟಿಕೊಡುತ್ತಿದೆ. ಕಳೆದ ಹನ್ನೊಂದು ವರ್ಷಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ ‘ಸಮಗ್ರ ನೋಟ’ ಸರಣಿ ಈ ತಿಂಗಳ 31ರವರೆಗೆ ಮುಂದುವರಿಯಲಿದೆ.

    ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಚರ್ಚೆಯ ನಡುವೆಯೇ ಈ ವರ್ಷ ವಿಧಾನಸಭೆ ಚುನಾವಣೆಗಳ ಸುಗ್ಗಿ. 2023ರಲ್ಲಿ ಒಂಬತ್ತು ರಾಜ್ಯಗಳಿಗೆ ಚುನಾವಣೆ ನಡೆದು, ಹಲವು ಸ್ಥಿತ್ಯಂತರಗಳನ್ನು ಸೃಷ್ಟಿಸಿತು. ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಕರ್ನಾಟಕ, ಮಿಜೊರಾಂ, ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣದಲ್ಲಿನ ಜನಾದೇಶಗಳು ರಾಜಕೀಯ ಸಮೀಕರಣವನ್ನೇ ಬದಲಿಸಿದವು. ಪ್ರಮುಖವಾಗಿ, ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ರಚಿಸಿತು. ತೆಲಂಗಾಣದಲ್ಲಿ ಒಂದು ದಶಕದ ಕಾಲ ಸಿಎಂಯಾಗಿದ್ದ ಕೆ.ಚಂದ್ರಶೇಖರ್ ರಾವ್, ಮೂರನೇ ಬಾರಿ ಅಧಿಕಾರಕ್ಕೇರುವಲ್ಲಿ ವಿಫಲರಾದರು. ಆ ಮೂಲಕ ಕಾಂಗ್ರೆಸ್ ತೆಲಂಗಾಣದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ರಾಜಸ್ಥಾನ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಇಳಿದು, ಕಮಲ ಪಾಳಯಕ್ಕೆ ದಾರಿ ಮಾಡಿಕೊಟ್ಟಿತು. ಮಧ್ಯಪ್ರದೇಶವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು.

    ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ನಡೆದ ವಿವಿಧ ರಾಜ್ಯಗಳ ವಿಧಾನ ಸಭೆ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಪರೀಕ್ಷೆ ಒಡ್ಡಿದವು. 2014ರಿಂದ ರಾಷ್ಟ್ರ ರಾಜಕಾರಣದಲ್ಲಿ ಮೇಲುಗೈ ಸಾಧಿಸಿರುವ ಭಾರತೀಯ ಜನತಾ ಪಕ್ಷ, ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಸೋಲಿನಿಂದ ಪಾಠ ಕಲಿಯದ ಕಾಂಗ್ರೆಸ್ ಮತ್ತೆ ಕೆಲವು ರಾಜ್ಯಗಳನ್ನು ಕಳೆದುಕೊಂಡಿದೆ. ಪ್ರಾದೇಶಿಕ ಪಕ್ಷಗಳದ್ದು ಆರಕ್ಕೇರದ, ಮೂರಕ್ಕೆ ಇಳಿಯದ ಸ್ಥಿತಿ. ಆದರೆ, ರಾಜಕೀಯ ಆರೋಪ-ಪ್ರತ್ಯಾರೋಪ, ವಾಗ್ವಾದಗಳಿಗೆ ಈ ವರ್ಷವೂ ಬರವಿರಲಿಲ್ಲ.

    ಹೊಸ ಸಂಸತ್: ಭವ್ಯವಾಗಿ ನಿರ್ವಿುಸಲಾದ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ಅಧಿಕೃತವಾಗಿ ಉದ್ಘಾಟಿಸಿದರು. ಆದರೆ, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುಮು ಅವರನ್ನು ಆಹ್ವಾನಿಸದೆ, ಅವಮಾನಿಸಲಾಗಿದೆ ಎಂದು ಆರೋಪಿಸಿ 20ಕ್ಕೂ ಹೆಚ್ಚು ಪ್ರತಿಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದವು.

    ಹೆಚ್ಚಲಿದೆ ಮಹಿಳೆಯರ ಬಲ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿ ಬಹುತೇಕ ಪಕ್ಷಗಳು ಈ ನಿರ್ಧಾರವನ್ನು ಬೆಂಬಲಿಸಿವೆ. ಆದರೆ, ಇದು 2024ರ ಲೋಕಸಭೆ ಚುನಾವಣೆಗೆ ಅನ್ವಯವಾಗುವುದಿಲ್ಲ. ಲೋಕ ಸಭೆಗೆ ಕ್ಷೇತ್ರಗಳ ಪುನರ್ ವಿಂಗಡಣೆಯಾದ ಬಳಿಕ ಜಾರಿಗೆ ಬರಲಿದೆ.

    ಮಾಯಾ ಭಿನ್ನಹಾದಿ: ಉತ್ತರಪ್ರದೇಶದ ರಾಜಕಾರಣದಲ್ಲಿ ಹಿಂದೊಮ್ಮೆ ಭಾರಿ ಸಂಚಲನ ಸೃಷ್ಟಿ ಸಿದ್ದ ಮಾಯಾವತಿ ಸತತ ಸೋಲುಗಳ ಬಳಿಕ ಭಿನ್ನ ಹಾದಿ ಹಿಡಿದಿದ್ದಾರೆ. ಬಹುಜನ ಸಮಾಜ ಪಕ್ಷವು ಕಾಂಗ್ರೆಸ್​ನ್ನೂ ಬೆಂಬಲಿಸುವುದಿಲ್ಲ, ಎನ್​ಡಿಎ ಮೈತ್ರಿಕೂಟವನ್ನೂ ಸೇರುವುದಿಲ್ಲ ಎಂದಿದ್ದಾರೆ. ಲೋಕಸಭೆ ಚುನಾವಣೆಯ ತಯಾರಿಗಾಗಿ ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಸೋದರಳಿಯ ಆಕಾಶ್ ಆನಂದ್ ಅವರ ಹೆಸರನ್ನು ಘೋಷಿಸಿದ್ದಾರೆ.

    ಸಂಸದರ ಅಮಾನತು: ಲೋಕಸಭೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಆಗಂತುಕರು ಡಿ. 13ರಂದು ಸದನಕ್ಕೆ ನುಗ್ಗಿದ ಘಟನೆ ಆತಂಕಕ್ಕೆ ಎಡೆ ಮಾಡಿಕೊಟ್ಟು, ಸಂಸತ್​ನ ಭದ್ರತಾಲೋಪಕ್ಕೆ ಸಾಕ್ಷಿಯಾಯಿತು. ಈ ಗಂಭೀರ ಘಟನೆ ಬಗ್ಗೆ ಸರ್ಕಾರ ಸದನದಲ್ಲಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು, ಅಷ್ಟೇ ಅಲ್ಲ ಭಾರಿ ಕೋಲಾಹಲ ಎಬ್ಬಿಸಿದವು. ಲೋಕಸಭೆ ಮತ್ತು ರಾಜ್ಯಸಭೆ ಕಲಾಪದಿಂದ 140ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಲಾಯಿತು. ಇಷ್ಟು ಸಂಖ್ಯೆಯಲ್ಲಿ ಸಂಸದರು ಅಮಾನತುಗೊಂಡಿದ್ದು ಸಂಸದೀಯ ಇತಿಹಾಸದಲ್ಲಿ ಇದೇ ಮೊದಲು. ಅಮಾನತು ಕ್ರಮ ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು.

    ರಾಹುಲ್ ವಾಪ್ಸಿ: ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಚುನಾವಣೆ ಪ್ರಚಾರದ ವೇಳೆ ‘ಮೋದಿ’ ಉಪನಾಮವನ್ನು ಟೀಕಿಸಿದ್ದಕ್ಕೆ, ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ಘೋಷಿಸಿತು. ಪರಿಣಾಮ, ಸಂಸತ್ ಸ್ಥಾನವನ್ನು ರಾಹುಲ್ ಕಳೆದುಕೊಂಡಿ ದ್ದರು. ಆದರೆ, ಗುಜರಾತ್ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರ ಪರಿಣಾಮ, ಸಂಸತ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಜೈಲಿಗೆ ಹೋಗಿ ಬಂದ ನಾಯ್ಡು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೈಲುಪಾಲಾಗಿದ್ದು ರಾಜಕೀಯ ಬಿರುಗಾಳಿಗೆ ಕಾರಣವಾಯಿತು. ಇದು ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿಯವರ ಕುತಂತ್ರ ಎಂದು ತೆಲುಗುದೇಶಂ ಪಕ್ಷ ಆರೋಪಿಸಿತು. ಹೈಕೋರ್ಟಿನಿಂದ ಜಾಮೀನು ಸಿಕ್ಕ ಬಳಿಕ ಅ. 31ರಂದು ಜೈಲಿನಿಂದ ಬಿಡುಗಡೆ ಆಗಿರುವ ನಾಯ್ಡುಗೆ ಮತ್ತೆ ಬಂಧನಭೀತಿ ಕಾಡುತ್ತಿದೆ.

    ಹೊಸ ಟ್ರೆಂಡ್: ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಪಂಚರಾಜ್ಯಗಳ ಚುನಾವಣೆಯನ್ನು ಎದುರಿಸಿದ ಬಿಜೆಪಿ, ಗೆದ್ದ ಮೂರು ರಾಜ್ಯಗಳಲ್ಲಿ ಹೊಸ ಮುಖಗಳಿಗೆ ಸಿಎಂ ಹುದ್ದೆಗೆ ಏರುವ ಅವಕಾಶ ಮಾಡಿಕೊಟ್ಟಿದೆ. ರಾಜಸ್ಥಾನದಲ್ಲಿ ಭಜನ್​ಲಾಲ್, ಛತ್ತೀಸ್​ಗಢದಲ್ಲಿ ವಿಷ್ಣುದೇವ್ ಸಾಯ್, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಮುಖ್ಯಮಂತ್ರಿಯಾದರು.

    ಆಕಾಂಕ್ಷಿಗಳ ದಂಡು: ಪ್ರತಿಪಕ್ಷದ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಲು ರಾಹುಲ್ ಗಾಂಧಿ ಆಸಕ್ತಿ ತೋರದಿರುವುದರಿಂದ, ಇತರರ ನಡುವೆ ಸ್ಪರ್ಧೆ ಹೆಚ್ಚಿದೆ. ಪ್ರಿಯಾಂಕಾ ಗಾಂಧಿ ವಾದ್ರಾ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೇಸ್​ನಲ್ಲಿದ್ದಾರೆ. ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಆಯ್ಕೆ ಆಗದಿದ್ದರೆ, ಅವರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅತ್ಯುತ್ತಮ ಆಯ್ಕೆ ಆಗಲಿದ್ದಾರೆ ಎಂದು ಸಿ-ವೋಟರ್​ನ ಇತ್ತೀಚಿನ ಸಮೀಕ್ಷೆ ಹೇಳಿದೆ.

    ಪವರ್ ತೋರಿಸಿದ ಪವಾರ್: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷಸ್ಥಾನವನ್ನು ಶರದ್ ಪವಾರ್ ಬಿಟ್ಟುಕೊಡದ್ದರಿಂದ ಬಂಡಾಯವೆದ್ದ ಅವರ ನಿಕಟ ಸಂಬಂಧಿ ಅಜಿತ್ ಪವಾರ್ ಪಕ್ಷವನ್ನೇ ಒಡೆದರು. ಅಷ್ಟೇ ಅಲ್ಲ, ಇಷ್ಟು ವರ್ಷಗಳ ರಾಜಕೀಯ ವಿರೋಧಿ ಬಿಜೆಪಿ- ಶಿವಸೇನೆಯೊಂದಿಗೆ ಕೈಜೋಡಿಸಿ, ಸರ್ಕಾರದಲ್ಲಿ ಭಾಗಿಯಾದರು. 2023ರ ಜುಲೈನಲ್ಲಿ ಉಪಮುಖ್ಯಮಂತ್ರಿಯಾದ ಅವರು, ಸಿಎಂ ಏಕನಾಥ್ ಶಿಂಧೆ, ಮತ್ತೋರ್ವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಅಜಿತ್​ರ ಮನವೊಲಿಸುವ ಪ್ರಯತ್ನವನ್ನು ಸೀನಿಯರ್ ಪವಾರ್ ಮಾಡಿದರೂ, ಫಲ ನೀಡಲಿಲ್ಲ. ಸ್ವಾರಸ್ಯವೆಂದರೆ, ಮಹಾರಾಷ್ಟ್ರದಲ್ಲಿ ಪ್ರಸ್ತುತ ಶಿವಸೇನೆ (ಶಿಂಧೆ ಬಣ), ಬಿಜೆಪಿ, ಎನ್​ಸಿಪಿ (ಪವಾರ್ ಬಣ) ಮೂರೂ ಪಕ್ಷಗಳು ಸೇರಿ ಸರ್ಕಾರ ನಡೆಸುತ್ತಿವೆ.

    ಚುನಾವಣೆಗೆ ಸಿದ್ಧತೆ: ಏಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆ ನಡೆಯ ಲಿದೆ. ಅಲ್ಲದೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, ಜಮ್ಮು-ಕಾಶ್ಮೀರ, ಹರಿಯಾಣ, ಮಹಾ ರಾಷ್ಟ್ರ, ಜಾರ್ಖಂಡ್ ಹೀಗೆ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳು ಸಿದ್ಧತೆ ನಡೆಸಿವೆ.

    ಅವಿಶ್ವಾಸ ನಿರ್ಣಯದಲ್ಲಿ ಗೆದ್ದ ಸರ್ಕಾರ: ಈ ವರ್ಷದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸೋಲು ಕಂಡಿತು. ಪ್ರಧಾನಮಂತ್ರಿ ಭಾಷಣದ ಮಧ್ಯೆಯೇ ವಿಪಕ್ಷದ ಹಲವು ಸಂಸದರು ಸಭಾತ್ಯಾಗ ಮಾಡಿದ್ದರಿಂದ ವಿಪಕ್ಷ ಸಂಸದರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿತ್ತು.

    ಯುಪಿಎ ಇಂಡಿಯಾ ಆಯಿತು: ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ವಿಪಕ್ಷಗಳ ಮೈತ್ರಿಕೂಟ ಇನ್ನಷ್ಟು ಬಲಗೊಳ್ಳಬೇಕು ಎಂಬ ಉದ್ದೇಶ ದಿಂದ 2023ರ ಜುಲೈನಲ್ಲಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸಲಾಯಿತು. ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಪಕ್ಷಗಳು ಒಟ್ಟುಗೂಡಿದವು. ಮಾತ್ರವಲ್ಲ, ಮೈತ್ರಿಕೂಟದ ಹೆಸರು ಕೂಡ ಬದಲಾಯಿತು. ಸಂಯುಕ್ತ ಪ್ರಗತಿಪರ ರಂಗವನ್ನು (ಯುಪಿಎ) ಐ.ಎನ್.ಡಿ.ಐ.ಎ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಆಗಿ ಬದಲಿಸಲಾಯಿತು. ‘ಜೀತೇಗಾ ಭಾರತ್’ (ಭಾರತ ಗೆಲ್ಲುತ್ತದೆ) ಎಂಬ ಘೋಷವಾಕ್ಯದೊಂದಿಗೆ ಲೋಕಸಭೆ ಚುನಾವಣೆಗೆ ಈ ಮೈತ್ರಿಕೂಟ ಸಜ್ಜಾಗುತ್ತಿದೆ. ಹೆಸರು ಬದಲಾವಣೆಯು ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು. ‘ನಮ್ಮದು ನಿಜವಾದ ಭಾರತ’ ಎಂದು ಬಿಜೆಪಿ ಹೇಳಿಕೊಂಡಿತು.

    ಗಮನಸೆಳೆದ ವರ್ಷದ ವ್ಯಕ್ತಿಗಳು

    • ನರೇಂದ್ರ ಮೋದಿ- ಇವರ ವರ್ಚಸ್ಸಿನ ಮೇಲೆ ಬಿಜೆಪಿ ಮೂರು ರಾಜ್ಯಗಳಲ್ಲಿ ಚುನಾವಣೆ ಗೆದ್ದು, ಅಧಿಕಾರಕ್ಕೆ ಬಂತು. ಬಿಜೆಪಿ ಆಡಳಿತವಿರುವ ರಾಜ್ಯಗಳ ಸಂಖ್ಯೆ 12ಕ್ಕೆ ಏರಿಕೆ.
    • ಶಿವರಾಜ್ ಸಿಂಗ್ ಚೌಹಾಣ್- ಚುನಾವಣೆಯಲ್ಲಿ ಪಕ್ಷಕ್ಕೆ ಅದ್ಭುತ ಗೆಲುವು ದೊರಕಿಸಿಕೊಟ್ಟರೂ, ಪಕ್ಷದ ಸೂಚನೆಯಂತೆ ಸಿಎಂ ಸ್ಥಾನದಿಂದ ದೂರವಾದರು.

    ವಿವಾದಿತ ರಾಜಕಾರಣಿಗಳು

    • ಉದಯನಿಧಿ ಮಾರನ್- ಸನಾತನ ಧರ್ಮದ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.
    • ಮಹುವಾ ಮೊಯಿತ್ರಾ- ‘ಕಾಸಿಗಾಗಿ ಪ್ರಶ್ನೆ’ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡರು.
    • ರಾಹುಲ್ ಗಾಂಧಿ- ಪ್ರಧಾನಿ ನರೇಂದ್ರ ಮೋದಿಯವರನ್ನು ‘ಪನೌತಿ’ (ಅಪಶಕುನ) ಎಂದು ಟೀಕಿಸುವ ಮೂಲಕ ಭಾರಿ ವಿರೋಧವನ್ನು ಎದುರಿಸಿದರು.
    • ತೃಣಮೂಲ ಕಾಂಗ್ರೆಸ್​ನ ಸಂಸದ ಕಲ್ಯಾಣ್ ಬ್ಯಾನರ್ಜಿ. ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರ ಭಾವಭಂಗಿಯನ್ನು ಅಣಕ ಮಾಡಿ, ಅಪಹಾಸ್ಯ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು.
    • ಮನೀಷ್ ಸಿಸೋಡಿಯಾ- ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಫೆಬ್ರವರಿ 26ರಂದು ಇವರನ್ನು ಬಂಧಿಸಿತು.
    • ಧೀರಜ್ ಪ್ರಸಾದ್ ಸಾಹು- ಕಾಂಗ್ರೆಸ್ ಸಂಸದರಾದ ಇವರ ಮನೆ ಮತ್ತು ಕಚೇರಿಯಿಂದ 351 ಕೋಟಿ ರೂ. ಅಕ್ರಮ ನಗದು ಪತ್ತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts