More

    ಮತ್ತೆ ಸದ್ದು ಮಾಡಲಿದೆ ಕಮಿಷನ್ ಸುದ್ದಿ; ಗುತ್ತಿಗೆದಾರರ ಸಂಘದಿಂದ ನಾಡಿದ್ದು ಭಾರಿ ಪ್ರತಿಭಟನೆ

    ಬೆಂಗಳೂರು: ಶೇ. 40 ಕಮಿಷನ್ ಆರೋಪದಿಂದ ಸದ್ದು ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದಿಂದ ಮತ್ತೊಮ್ಮೆ ಕಮಿಷನ್ ವಿಚಾರವಾಗಿ ದನಿ ಹೊರಹೊಮ್ಮುವ ಲಕ್ಷಣಗಳು ಗೋಚರಿಸಿವೆ. ನಾಡಿದ್ದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಭಾರಿ ಪ್ರತಿಭಟನೆ ಇದಕ್ಕೆ ಸಾಕ್ಷಿಯಾಗಲಿದೆ.

    ಹಲವು ವರ್ಷಗಳಿಂದ ಬಾಕಿ ಉಳಿದಿರುವ 25 ಸಾವಿರ ಕೋಟಿ ರೂ. ಕಾಮಗಾರಿಗಳ ಬಿಲ್‌ಗಳಿಗೆ ಹಣ ಬಿಡುಗಡೆ, ಜಿಎಸ್‌ಟಿ ಗೊಂದಲ ನಿವಾರಣೆ ಮತ್ತು ದೊಡ್ಡ ಪ್ಯಾಕೇಜ್ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ವತಿಯಿಂದ ಬುಧವಾರ (ಜ.18) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ.

    ರಾಜ್ಯಾದ್ಯಂತ ಅಂದಾಜು 20 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಪ್ರತಿಭಟನೆಗೆ ಆಗಮಿಸಲಿದ್ದಾರೆ. ಕಮಿಷನ್ ರಹಿತವಾಗಿ ಬಾಕಿ ಕಾಮಗಾರಿಗಳ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಬೇಕು ಎಂಬ ಬಗ್ಗೆಯೂ ದನಿ ಎತ್ತಲಿದ್ದಾರೆ. ಅಲ್ಲದೆ ಟೆಂಡರ್‌ನಲ್ಲಿ ಅನಗತ್ಯವಾಗಿ ವಿಧಿಸುವ ಜಿಎಸ್‌ಟಿ ರದ್ದು ಮಾಡಬೇಕು. ಕಾಮಗಾರಿಗಳಲ್ಲಿ ದೊಡ್ಡ ಪ್ಯಾಕೇಜ್ ರದ್ದುಗೊಳಿಸಿ ಸಣ್ಣ ಪ್ಯಾಕೇಜ್‌ಗಳಿಗೆ ಆದ್ಯತೆ ನೀಡಬೇಕು. ಎರಡು ಕಡೆ ಬದಲು ಒಂದು ಕಡೆಯಲ್ಲಿ ರಾಜಧನ ಶುಲ್ಕ ಪಾವತಿಸಲು ಅವಕಾಶ ನೀಡಬೇಕು. ಈ ಎಲ್ಲ ಸಮಸ್ಯೆಗಳನ್ನು ಕೂಡಲೆ ಸರ್ಕಾರ ಬಗೆಹರಿಸಬೇಕೆಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸುತ್ತಾ ಬರುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಮತ್ತು ಅಧಿಕಾರಿಗಳಿಗೆ ನೂರಾರು ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಸಂಘದ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟವನ್ನು ವಿಸ್ತರಿಸಲಾಗುವುದು. ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಹಾಗೂ ಎಲ್ಲ ಹಂತದ ಕಾಮಗಾರಿಗಳನ್ನು ನಿಲ್ಲಿಸಲಾಗುವುದು ಎಂದು ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಕಮಿಷನ್ ದಾಖಲೆಗಳಿವೆ: 2022ರ ಏಪ್ರಿಲ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗುತ್ತಿಗೆದಾರರ ಜತೆ ಸಭೆ ನಡೆಸಿ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡಿದ್ದರು. ಆದರೆ, ಸಿಎಂ ನೀಡಿದ್ದ ಭರವಸೆಗಳು ಕಡತದಲ್ಲಿ ಉಳಿದುಕೊಂಡಿವೆ. ಟೆಂಡರ್ ಅನುಮೋದನೆಯಿಂದ ಹಿಡಿದು ಬಿಲ್ ಬಿಡುಗಡೆ ಮಾಡುವವರೆಗೂ ನಾವು ಲಂಚ ನೀಡಬೇಕಿದೆ. ಹಾಗಾಗಿ, ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಬೇಕು. ಹಾಲಿ ಸರ್ಕಾರದ ಮಂತ್ರಿಗಳು ಸೇರಿ 14 ಶಾಸಕರು ಕಮಿಷನ್ ಪಡೆದಿರುವ ದಾಖಲೆಗಳಿವೆ. ಸಚಿವರು ಎಲ್ಲ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.

    ಶಾಸಕ ತಿಪ್ಪಾರೆಡ್ಡಿ ವಿರುದ್ಧ ದಾಖಲೆ ಬಿಡುಗಡೆ: ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಪಡೆದಿರುವ ಸಂಬಂಧ ಗುತ್ತಿಗೆದಾರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಎಂಬುವರರು ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು. ಶಾಸಕರು ಲಂಚ ಕೇಳಿರುವ ಮೆಸೇಜ್ ಮತ್ತು ಆಡಿಯೋ ಇದೆ. ಅವರು ನೇರವಾಗಿ ಕಮಿಷನ್ ಕೇಳುತ್ತಾರೆ. 2019ರಿಂದ ಈವರೆಗೆ ನಾನೊಬ್ಬನೇ 90 ಲಕ್ಷ ರೂ. ನಗದು ರೂಪದಲ್ಲಿ ಕಮಿಷನ್ ಕೊಟ್ಟಿದ್ದೇನೆ. 1.10 ಕೋಟಿ ರೂ. ಖುದ್ದಾಗಿ ನಾನೇ ಶಾಸಕರಿಗೆ ನೀಡಿದ್ದೇನೆ. ಲಂಚದ ಹಣದಲ್ಲಿ ಸ್ವಲ್ಪ ಇಂಜಿನಿಯರ್‌ಗೂ ಹಂಚಲಾಗಿದೆ ಎಂದು ಮಂಜುನಾಥ್ ಆರೋಪಿಸಿದರು.

    ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಸಿಸ್ಟಂ ಕಾಮಗಾರಿಗೆ ಒಟ್ಟಾರೆ ಮೊತ್ತದ ಶೇ.10, ಎಂಜಿಪಿಎಸ್ ಕಾಮಗಾರಿಗೆ 15 ಲಕ್ಷಕ್ಕೆ 4 ಲಕ್ಷ ರೂ, ನೀರಾವರಿ ಇಲಾಖೆ ಕಾಮಗಾರಿಗಳಿಗೆ ಶೇ.25, ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಶೇ.15, ಕಟ್ಟಡ ಕಾಮಗಾರಿಗೆ ಶೇ.10 ಕಮಿಷನ್ ಹಣವನ್ನು ಶಾಸಕರಿಗೆ ನೀಡಲಾಗಿದೆ. ಲೋಕೋಪಯೋಗಿ ಕಚೇರಿಗೆ 12.5 ಲಕ್ಷ ರೂ, ಆಸ್ಪತ್ರೆಗೆ 12.5 ಲಕ್ಷ ರೂ, ಲೇಔಟ್ ಅನುಮೋದನೆಗೆ 18 ಲಕ್ಷ ರೂ.ಕಮಿನಷ್ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟಾರೆ 800-900 ಕೋಟಿ ರೂ. ವಿವಿಧ ಕಾಮಗಾರಿಗಳು ನಡೆದಿವೆ ಎಂದು ವಿವರಿಸಿದರು.

    30 ದಿನದಲ್ಲಿ ದಾಖಲೆ ಬಿಡುಗಡೆ: ಸಚಿವ ಮುನಿರತ್ನ ಅವರ ಆಸ್ತಿ ಮಾಹಿತಿ ನೀಡುವಂತೆ ಲೋಕಾಯುಕ್ತರ ಬಳಿ ಕೇಳಲಾಗಿದೆ. ಭ್ರಷ್ಟಾಚಾರ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ದಾಖಲೆ ಬಿಡುಗಡೆ ಮಾಡಲ್ಲ. ಆದರೆ, ನಮ್ಮ ವಕೀಲರ ಜತೆ ಚರ್ಚಿಸಿ ಇನ್ನು 30 ದಿನದಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು. ಅವರ ವಿರುದ್ಧ ನಾವು ಮಾಡಿರುವ ಭ್ರಷ್ಟಾಚಾರ ಆರೋಪ ನೂರಕ್ಕೆ ನೂರು ಸತ್ಯವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಹೇಳಿದರು.

    ‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

    ಸಂಕ್ರಾಂತಿ ದಿನವೂ ತರಗತಿ ನಡೆಸಿದ ಕ್ರೈಸ್ಟ್ ಸ್ಕೂಲ್; ಹಿಂದೂ ಜಾಗರಣಾ ವೇದಿಕೆಯಿಂದ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts