More

    ಬೇಡಿಕೆ ಈಡೇರಿಸಲು ಸಿಎಂಗೆ 15 ದಿನಗಳ ಗಡುವು

    ರಾಯಚೂರು: ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಗುತ್ತಿಗೆ ಪೌರ ಕಾರ್ಮಿಕರು ಕಳೆದ ವರ್ಷ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಸಿದಾಗ ಮೂರು ತಿಂಗಳಲ್ಲಿ ಕಾಯಂಗೊಳಿಸುವ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದಾರೆ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ವೈ.ನರಸಪ್ಪ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ರಾಜ್ಯದಲ್ಲಿ ಸುಮಾರು 45 ಸಾವಿರ ಗುತ್ತಿಗೆ ಪೌರ ಕಾರ್ಮಿಕರು ಕನಿಷ್ಠ ವೇತನ ಮತ್ತು ಅಗತ್ಯ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ. 15 ದಿನಗಳಲ್ಲಿ ಕಾಯಂಗೊಳಿಸುವ ನಿರ್ಧಾರ ಪ್ರಕಟಿಸದಿದ್ದರೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

    ಸಿಎಂ ಮಂಡಿಸಿದ ಬಜೆಟ್ ಸುಳ್ಳು ಭರವಸೆಗಳ ಕಂತೆಯಾಗಿದ್ದು, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮಹಿಳೆಯರು, ರೈತರು, ಯುವಜನರನ್ನು ಆಕರ್ಷಿಸುವ ತಂತ್ರವನ್ನು ಬಜೆಟ್‌ನಲ್ಲಿ ಮಾಡಿದ್ದಾರೆ. ರೈತರು ಸಾಲ ತೀರಿಸಲಾಗದೆ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸಾಲ ಮನ್ನಾ ಮಾಡುವ ಬದಲು ರೈತರಿಗೆ 5 ಲಕ್ಷ ರೂ.ವರೆಗೆ ಸಾಲ ನೀಡುವುದಾಗಿ ಪ್ರಕಟಿಸಿದ್ದಾರೆ.

    ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಡುತ್ತಿರುವ ನೌಕರರ ಬೇಡಿಕೆಗೆ ಸ್ಪಂದಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರನ್ನು ಕಾಯಂ ಮಾಡದೆ 100 ರೂ. ಗೌರವಧನ ಹೆಚ್ಚಿಸಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ವೈ.ನರಸಪ್ಪ ದೂರಿದರು. ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಆರ್.ಭೇರಿ, ಪದಾಧಿಕಾರಿಗಳಾದ ಪ್ರವೀಣಕುಮಾರ, ಜೈಭೀಮ್ ವಲ್ಲಭ, ಚಂದ್ರಶೇಖರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts